ಮನೆ ಕಳ್ಳತನ ಮಾಡಲು ಬಂದಿದ್ದ ಕಳ್ಳನನ್ನು ಹಿಡಿದು ಧರ್ಮದೇಟು

KannadaprabhaNewsNetwork |  
Published : Dec 04, 2024, 12:31 AM IST
೦೩ಎಸ್‌ವಿಆರ್‌೦೨ | Kannada Prabha

ಸಾರಾಂಶ

ಮನೆ ಕಳ್ಳತನ ಮಾಡಲು ಬಂದಿದ್ದ ನಾಲ್ಕು ಜನರ ಪೈಕಿ ಓರ್ವ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ತಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸವಣೂರು: ಮನೆ ಕಳ್ಳತನ ಮಾಡಲು ಬಂದಿದ್ದ ನಾಲ್ಕು ಜನರ ಪೈಕಿ ಓರ್ವ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ತಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇತ್ತೀಚಿಗೆ ತಳ್ಳಿಹಳ್ಳಿ ಸೇರಿದಂತೆ ತಾಲೂಕಿನಲ್ಲಿ ನಡೆದ ಹಲವು ಕಳ್ಳತನ ಪ್ರಕರಣ ತಡೆಯಲು ಹಾಗೂ ಕಳ್ಳರ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿರುವ ಹಿನ್ನೆಲೆಯಲ್ಲಿ ಹಾಗೂ ಹೆಚ್ಚುತ್ತಿರುವ ಕಳ್ಳತನದಿಂದ ಬೇಸತ್ತ ತಳ್ಳಿಹಳ್ಳಿ ಗ್ರಾಮಸ್ಥರು ಪ್ರತಿ ದಿನವೂ 10 ಜನರ ತಂಡವೊಂದನ್ನು ರಚಿಸಿ ಗ್ರಾಮದಲ್ಲಿ ಗಸ್ತು ತಿರುಗುವುದು ಮತ್ತು ತೆರೆ ಮರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು.

ಸೋಮವಾರ ತಡರಾತ್ರಿ 1.30 ರ ಸುಮಾರಿಗೆ ಗ್ರಾಮಸ್ಥರ ತಂಡವು, ನಾಲ್ವರು ಕಳ್ಳರು ಮನೆ ಕಳ್ಳತನಕ್ಕೆ ಮುಂದಾದ ಸಂದರ್ಭದಲ್ಲಿ ಗಮನಿಸಿ ಓರ್ವ ಕಳ್ಳನನ್ನು ಹಿಡಿದು ತೆಂಗಿನ ಮರಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ. ಉಳಿದ ಮೂವರು ಕಳ್ಳರು ಪರಾರಿಯಾಗಿದ್ದು ಕೂಡಲೆ ಸವಣೂರ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎ.ಎಸ್.ಐ ಕಲ್ಲಪ್ಪ ರೂಗಿ ಕಳ್ಳನನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ, ಪೊಲೀಸ್‌ ಕಾರ್ಯನಿರ್ವಹಣೆಗೆ ಆಕ್ರೋಶಗೊಂಡ ಗ್ರಾಮಸ್ಥರು ಪಕ್ಕದಲ್ಲಿದ್ದ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಕೂಡಿ ಹಾಕಿ ಬೆಳಗ್ಗೆ ಕಳ್ಳನನ್ನು ನಿಮಗೆ ಒಪ್ಪಿಸುತ್ತೇವೆ ಎಂದು ಪಟ್ಟು ಹಿಡಿದರು. ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ಬಳಿಕ ಆಗಮಿಸಿದ ಪಿ.ಐ ಆನಂದ ವನಕುದ್ರಿ ಗ್ರಾಮಸ್ಥರ ಮನವೊಲಿಸಿ ಉಳಿದ ಕಳ್ಳರನ್ನು ಸಹ ಬಂಧಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಥಳಿತಕ್ಕೆ ಒಳಗಾದ ಕಳ್ಳನಿಗೆ ಪೊಲೀಸರು ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಿಚಾರಣೆ ಕೈಗೊಂಡು ಪರಾರಿಯಾದ ಕಳ್ಳರ ಬೇಟೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ನವೆಂಬರ್ ತಿಂಗಳಲ್ಲಿ ತಾಲೂಕಿನ ತಳ್ಳಿಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದರೂ ಸಹ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಬೇಸತ್ತ ಗ್ರಾಮಸ್ಥರು ಪ್ರತಿ ದಿನ ಎಲ್ಲಿ ಕಳ್ಳತನವಾಗುತ್ತೋ ಎಂಬ ಆತಂಕದಿಂದಲೇ ದಿನ ದೂಡುತ್ತಿದ್ದರು. ಇತ್ತೀಚಿಗೆ ಸವಣೂರು ಪಟ್ಟಣದ ಡಿಗ್ರಿ ಕಾಲೇಜು ಸಹ ಕಳ್ಳತನವಾಗಿತ್ತು. ಘಟನಾ ಸ್ಥಳಗಳಿಗೆ ಶ್ವಾನ ದಳಗಳು, ಬೆರಳಚ್ಚು ತಜ್ಞರು ಬಂದು ಹೋದರೂ ಸಹ ಯಾವುದೇ ಸುಳಿವು ದೊರಕದಂತಾಯಿತು. ಕಳ್ಳರ ಪತ್ತೆಗೆ ಮುಂದಾಗದ ಪೊಲೀಸ್ ಇಲಾಖೆ ಕಾರ್ಯವೈಖರಿಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ