ಕನ್ನಡಪ್ರಭ ವಾರ್ತೆ ಮಂಗಳೂರು
ತಿರುಪತಿ ಶ್ರೀ ವೆಂಕಟರಮಣ ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡು ನೈವೇದ್ಯ ಅರ್ಪಿಸಿದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನ.30ರಂದು ಧರ್ಮಾಗ್ರಹ ಸಭೆ ನಡೆಸಲು ನಿರ್ಧರಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಮಂಗಳೂರಿನಲ್ಲಿ ಸೆ.30ರಂದು ಬೆಳಗ್ಗೆ 8ರಿಂದ 12.30ರವರೆಗೆ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮಾಗ್ರಹ ಸಭೆ ನಡೆಯಲಿದೆ ಎಂದು ತಿಳಿದರು.ಪತ್ರ ಅಭಿಯಾನ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಅಭಿಯಾನ ಆರಂಭಿಸಲಾಗುತ್ತಿದೆ. ಹಿಂದು ಬಾಂಧವರು ಈ ಅಭಿಯಾನದಲ್ಲಿ ಪಾಲ್ಗೊಂಡು, ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾದುದನ್ನು ಉಲ್ಲೇಖಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು. ವೈಯಕ್ತಿಕ ಪತ್ರ ಅಭಿಯಾನದ ಜತೆಗೆ ಸಾಮೂಹಿಕ ಸಹಿ ಸಂಗ್ರಹದ ಮೂಲಕವೂ ಆಂಧ್ರ ಮುಖ್ಯಮಂತ್ರಿ ವಿಳಾಸಕ್ಕೆ ಪತ್ರ ಬರೆಯುವಂತೆ ಶಿವಾನಂದ ಮೆಂಡನ್ ಮನವಿ ಮಾಡಿದರು.ಸಾಮೂಹಿಕ ಪ್ರಾರ್ಥನೆಗೆ ಕರೆ:
ತಿರುಪತಿ ಲಡ್ಡು ಪ್ರಸಾದ ಪ್ರಕರಣದ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಎಲ್ಲ ದೇವಸ್ಥಾನ, ಮಠ ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಬೇಕು. ಅಲ್ಲದೆ ಧಾರ್ಮಿಕ ಕೇಂದ್ರಗಳು ಸರ್ಕಾರದ ಆಡಳಿತದಿಂದ ಮುಕ್ತವಾಗಲು ಹಿಂದು ಬಾಂಧವರು ಕೂಡ ಪ್ರಾರ್ಥನೆ ನಡೆಸುವಂತೆ ಮನವಿ ಮಾಡಿದರು.ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಇದ್ದರು.