ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ

KannadaprabhaNewsNetwork |  
Published : Apr 27, 2026, 01:15 AM IST
ಸಿಕೆಬಿ-3 ನಗರದ ಭುವನೇಶ್ವರಿ ವೃತ್ತದಲ್ಲಿ ಧರ್ಮರಾಯಸ್ವಾಮಿ ಕರಗ ಹೊತ್ತ ಬಾಲಾಜಿ ತಮಟೆ ಸದ್ದಿನ ನಡುವೆ  ನೃತ್ಯ ಪ್ರದರ್ಶಿಸಿದ್ದು  ನೆರೆದಿದ್ದ ಭಕ್ತ ಸಮೂಹವನ್ನು ಮೂಕವಿಸ್ಮಿತರನ್ನಾಗಿ ಮಾಡಿತು | Kannada Prabha

ಸಾರಾಂಶ

42ನೇ ವರ್ಷದ ಧರ್ಮರಾಯಸ್ವಾಮಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಕೆಎಸ್‍ಆರ್‌ಟಿಸಿ ಮುಂಭಾಗದ ಭಗತ್‍ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.

ಸತತ 23 ಗಂಟೆಗೂ ಅಧಿಕ ಗಂಟೆ ಕರಗ ಹೊತ್ತು ಕುಣಿದ ಪೂಜಾರಿ । ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಂಕಾರ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ ಭಗತ್‍ಸಿಂಗ್ ನಗರದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಉತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.42ನೇ ವರ್ಷದ ಧರ್ಮರಾಯಸ್ವಾಮಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಕೆಎಸ್‍ಆರ್‌ಟಿಸಿ ಮುಂಭಾಗದ ಭಗತ್‍ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಅಲ್ಲದೆ ದೇವಾಲಯ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.

ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ.ಬಾಲಾಜಿಯವರು ಹೂವಿನ ಕರಗ ಹೊತ್ತು ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಶನಿವಾರ ರಾತ್ರಿ 9.30ಕ್ಕೆ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ ಹೂವು, ಕನಕಾಂಬರ ಹೂವಿನ ಎಸಳುಗಳ ಅಲಂಕಾರ, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿಯಿಂದ ಆಕರ್ಷಕವಾಗಿ ಕಂಗೋಳಿಸುತ್ತಿದ್ದ ಕರಗ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ದಾರಿಯುದ್ದಕ್ಕೂ ಭಕ್ತರನ್ನು ಪರವಶಗೊಳಿಸುತ್ತಿತ್ತು. ನಗರದ ವಿವಿಧೆಡೆ ಕರಗಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ಕರಗ ಹೊತ್ತ ಬಾಲಾಜಿ ತಮಟೆ ಸದ್ದಿನ ನಡುವೆ ಕೆಲ ಹೊತ್ತು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದ ಮೈನವಿರೇಳಿಸುವ ನೃತ್ಯ ಅಲ್ಲಿ ನೆರೆದಿದ್ದ ಭಕ್ತ ಸಮೂಹವನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಜನರು ನೃತ್ಯದ ದೃಶ್ಯ ಮೊಬೈಲ್‍ಗಳಲ್ಲಿ ಮುಗಿಬಿದ್ದು ಚಿತ್ರೀಕರಿಸಿದರು.

ಶನಿವಾರ ರಾತ್ರಿ 9.30ಕ್ಕೆ ದೇವಾಲಯದಿಂದ ಹೊರಬಂದ ಕರಗವು ಚಿಕ್ಕಬಳ್ಳಾಪುರ ನಗರ ಸೇರಿದಂತೆ ಹೊರವಲಯದ ಮುಸ್ಟೂರು, ಅಣಕನ ಗೊಂದಿ ಗ್ರಾಮಗಳಿಗೂ ತೆರಳಿ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿ, ಸುಮಾರು 23 ಗಂಟೆಗಳ ಬಳಿಕ ಭಾನುವಾರ ರಾತ್ರಿ ದೇವಾಲಯಕ್ಕೆ ವಾಪಸ್ಸು ಬಂದ ಕರಗ ದೇವಾಲಯದ ಮುಂದೆ ಹಾಕಿದ್ದ ಅಗ್ನಿಕುಂಡ ಹಾಯ್ದು ದೇವಾಲಯಕ್ಕೆ ಪ್ರವೇಶಿಸಿತು.ಕರಗದ ಹಿನ್ನೆಲೆ ಜನರಿಗೆ ಮನೋರಂಜನೆ ನೀಡಲು ಭಗತ್ ಸಿಂಗ್ ನಗರ, ಎಂ.ಜಿ ರಸ್ತೆ, ಎಚ್.ಎಸ್ ಗಾರ್ಡನ್, ಕುರುಬರ ಪೇಟೆ, ಭುವನೇಶ್ವರಿ ವೃತ್ತ, ಸಂತೆ ಮಾರುಕಟ್ಟೆಯಲ್ಲಿ ರಸಮಂಜರಿ, ವಾದ್ಯಗೋಷ್ಠಿ, ನಾಟಕ ಪ್ರದರ್ಶನ ನಡೆದವು. ಸುಮಾರು 25ಕ್ಕೂ ಹೆಚ್ಚಿನ ಮುತ್ತಿನ ಪಲ್ಲಕ್ಕಿಗಳಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರು ಅನ್ನದಾನ,ಪಾನಕ ವಿತರಣೆ ಮಾಡಿದರು.ಕರಗ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತು ಮಾಡಲಾಗಿತ್ತು.

ಈ ವೇಳೆ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಶ್ರೀಧರ್ಮರಾಯಸ್ವಾಮಿ ಕರಗದ ಅಭಿವೃದ್ಧಿ ಸಮಿತಿಯ ಅರುಣ್ ಕುಮಾರ್, ನಗರಸಭಾ ಮಾಜಿ ಸದಸ್ಯ ನರಸಿಂಹಮೂರ್ತಿ, ಸುರೇಂದ್ರ ನಾಯ್ಡು, ಮುನಿರಾಜು, ಹರ್ಷನ್ ಪ್ರಿಂಟರ್ಸ್ ಹರ್ಷ, ಗಂಗಾಧರ್, ಮಂಜುನಾಥ್, ಚಿನ್ನಪ್ಪ, ರವಿ, ಆರ್.ಗೋಪಾಲ್, ನಾರಾಯಣಸ್ವಾಮಿ, ಮುನಿ ವೆಂಕಟಸ್ವಾಮಿ ಇದ್ದರು.

ಸಿಕೆಬಿ-3 ನಗರದ ಭುವನೇಶ್ವರಿ ವೃತ್ತದಲ್ಲಿ ಧರ್ಮರಾಯಸ್ವಾಮಿ ಕರಗ ಹೊತ್ತ ಬಾಲಾಜಿ ತಮಟೆ ಸದ್ದಿನ ನಡುವೆ ನೃತ್ಯ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆವಿಷ್ಕಾರಗಳತ್ತ ಹೆಜ್ಜೆ ಇಡಲು ಅವಕಾಶ ಸದ್ಬಳಸಿಕೊಳ್ಳಿ
ಜನರ ಆಶೋತ್ತರಗಳಿಗೆ ಪಂಚಾಯತ್‌ ವ್ಯವಸ್ಥೆ ದನಿಯಾಗಲಿ