ಧರ್ಮಸ್ಥಳ: ನಾಳೆ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ

KannadaprabhaNewsNetwork |  
Published : May 02, 2025, 01:35 AM ISTUpdated : May 02, 2025, 07:29 AM IST
ಧರ್ಮಸ್ಥಳ ಸಾಮೂಹಿಕ ವಿವಾಹ ಕಡತ ಚಿತ್ರ | Kannada Prabha

ಸಾರಾಂಶ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆ ಮನೆಯ ಸಂಭ್ರಮ, ಸಡಗರ ಮೈದಳೆದಿದೆ.  

 ಬೆಳ್ತಂಗಡಿ : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆ ಮನೆಯ ಸಂಭ್ರಮ, ಸಡಗರ ಮೈದಳೆದಿದೆ. ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ 53ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಲು ಈಗಾಗಲೆ 90ಕ್ಕೂ ಮಿಕ್ಕಿ ವಧೂ-ವರರು ಹೆಸರು ನೋಂದಾಯಿಸಿದ್ದಾರೆ. 

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಮತ್ತು ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಪೂರೈಸಲಾಗಿದೆ.ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸುವರು.

ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚ ತಡೆಯುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ 1972 ರಲ್ಲಿ88 ಜೊತೆ ವಿವಾಹದೊಂದಿಗೆ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷವೂ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಸಲಾಗುತ್ತಿದೆ. ಕಳೆದ ವರ್ಷದ ವರೆಗೆ 12,900 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು ಸುಖ-ಶಾಂತಿ , ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 

ಇಲ್ಲಿಯ ವರೆಗೂ ಇಲ್ಲಿ ಸಾಮೂಹಿಕ ವಿವಾಹವಾದವರ ಪೈಕಿ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.ಸರ್ಕಾರ, ರೋಟರಿ ಕ್ಲಬ್, ಲಯನ್ಸ್ ಕ್ಲಬ್‌ ಮೊದಲಾದ ಸ್ವಯಂ-ಸೇವಾ ಸಂಸ್ಥೆಗಳು ಹಾಗೂ ಕಟೀಲು, ಸುಬ್ರಹ್ಮಣ್ಯ ಮೊದಲಾದ ದೇವಸ್ಥಾನಗಳಲ್ಲಿಯೂ ಧರ್ಮಸ್ಥಳದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ವಿಧಾನವನ್ನು ಮಾದರಿಯಾಗಿ ಮಾನ್ಯತೆ ಮಾಡಿ ಅನುಸರಿಸುತ್ತಿರುವುದರ ಬಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಸಂತಸ ವ್ಯಕ್ತ ಪಡಿಸಿದ್ದಾರೆ. 

ವಾಹ ಸಮಾರಂಭ: ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಎಲ್ಲ ಜಾತಿಯವರ ಸಂಪ್ರದಾಯದಂತೆ ಅಮೃತವರ್ಷಿಣಿ ಸಭಾಭವದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುವುದು.ಶುಕ್ರವಾರವೇ ವಧೂ-ವರರು ಹಾಗೂ ಅವರ ಹಿರಿಯರು ಧರ್ಮಸ್ಥಳಕ್ಕೆ ಆಗಮಿಸಿದ್ದು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 

ಅವರು ನೀಡಿದ ಪ್ರಮಾಣಪತ್ರ ಹಾಗೂ ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಿ ಎಲ್ಲವೂ ಕ್ರಮಬದ್ಧವಾಗಿದ್ದಲ್ಲಿ ಅವರಿಗೆ ಮದುವೆಯಾಗಲು ಅವಕಾಶ ನೀಡಲಾಗುವುದು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಶನಿವಾರ ಬೆಳಗ್ಗೆಯಿಂದಲೆ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮೂಗುತಿ ವಿತರಿಸುವರು. 

ಮಂಗಳಸೂತ್ರವನ್ನು ವಿವಾಹದ ಶುಭ ಮುಹೂರ್ತದಲ್ಲಿ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ವಿತರಿಸಿ ಶುಭ ಹಾರೈಸುವರು. ಶನಿವಾರ ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು. 

ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆ ವಿತರಣೆಯೊಂದಿಗೆ 6.48 ರ ಶುಭಮುಹೂರ್ತದಲ್ಲಿ ಹಾರ ವಿನಿಮಯ, ಮಾಂಗಲ್ಯಧಾರಣೆ ನಡೆಯುತ್ತದೆ.ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ನೂತನ ದಂಪತಿಗಳಿಗೆ ಶುಭ ಹಾರೈಸಿದ ಬಳಿಕ ನೂತನ ದಂಪತಿಗಳು ದಾಂಪತ್ಯ ದೀಕ್ಷೆ ಸ್ವೀಕರಿಸುವರು.ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ದಂಪತಿಗಳು ಊರಿಗೆ ತೆರಳುವರು.ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಮುಂದೆ ಅಧಿಕೃತ ವಿವಾಹ ನೋಂದಣಿ ಪ್ರಮಾಣಪತ್ರವನ್ನು ದಂಪತಿಗಳಿಗೆ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!