ಗ್ರಾಮ ಪ್ರವೇಶ ಮಾಡಿದ ಗ್ರಾಮ ದೇವತೆಯರು

KannadaprabhaNewsNetwork | Published : May 2, 2025 1:34 AM

ಸಾರಾಂಶ

ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಾದವಾಡ ಗ್ರಾಮದ ಸೀಮೆಯಲ್ಲಿ ಗುರುವಾರ ಬೆಳಗ್ಗೆಯೇ ಗ್ರಾಮದೇವಿರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಕುಂಭಮೇಳ, ಆರತಿ ಜತೆಗೆ ವಿವಿಧ ವಾದ್ಯಮೇಳಗಳೊಂದಿಗೆ ಸುಮಾರು 2 ಕಿ.ಮೀ ಮೆರವಣಿಗೆ ನಡೆಸಿ ದೇವಿರನ್ನು ಪ್ರತಿಷ್ಠಾಪನೆಗೊಳಿಸಲಾಯಿತು.

ಧಾರವಾಡ: ತಾಲೂಕಿನ ಯಾದವಾಡ ಗ್ರಾಮದೇವತೆಯರ ಜಾತ್ರಾ ಮಹೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆಯಿತು. ಭವ್ಯ ಮೆರವಣಿಗೆ ಮೂಲಕ ನಡೆದ ಗ್ರಾಮದೇವಿರ ಪುರ ಪ್ರವೇಶ ಸಾಂಸ್ಕೃತಿಕ ಸೊಗಡು ಹೆಚ್ಚಿಸಿತು.

ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಾದವಾಡ ಗ್ರಾಮದ ಸೀಮೆಯಲ್ಲಿ ಗುರುವಾರ ಬೆಳಗ್ಗೆಯೇ ಗ್ರಾಮದೇವಿರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಕುಂಭಮೇಳ, ಆರತಿ ಜತೆಗೆ ವಿವಿಧ ವಾದ್ಯಮೇಳಗಳೊಂದಿಗೆ ಸುಮಾರು 2 ಕಿ.ಮೀ ಮೆರವಣಿಗೆ ನಡೆಸಿ ದೇವಿರನ್ನು ಪ್ರತಿಷ್ಠಾಪನೆಗೊಳಿಸಲಾಯಿತು.

ಸಿಂಗನಹಳ್ಳಿ ಶ್ರೀ ರಾಚೋಟೆವರ ಸ್ವಾಮೀಜಿ, ನಯಾನಗರದ ಸಿದ್ದಲಿಂಗ ಸ್ವಾಮೀಜಿ ಪುರಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಕುಂಭ ಹೊತ್ತು, ನೂರು ಜನ ಮಹಿಳೆಯರು ಆರತಿ ಹಿಡಿದು, ಡೊಳ್ಳು, ಜಗ್ಗಲಗಿ, ಭಜನೆಯೊಂದಿಗೆ ಗ್ರಾಮದ ಸಮುದಾಯ ಭವನದ ವರೆಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು. ವಾದ್ಯಮೇಳಗಳ ಜತೆ ಹೆಜ್ಜೆ ಹಾಕುತ್ತಲೇ ಬಿಸಿಲು ಲೆಕ್ಕಿಸದೇ ಸಾವಿರಾರು ಜನರು ಪುರಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗ್ರಾಮದ ಹಿರಿಯ ಬಸವಣ್ಣೆಪ್ಪ ಚಕ್ಕಡಿ ಮೆರವಣಿಗೆ ಮುಂದೆ ಉರುಳು ಸೇವೆ ಸಲ್ಲಿಸಿದರು. ರಸ್ತೆಯಲ್ಲಿ ತೆರಳುತ್ತಿರುವ ಜನ ವಾಹನ ನಿಲ್ಲಿಗೆ ದೇವಿಗೆ ಭಕ್ತಿ ಮೆರೆದರು. ನಂತರ ಗಂಗಾಪೂಜೆ, ಗೋ ಪೂಜೆ, ಪ್ರವೇಶ ಬಲಿ, ಸ್ವಸ್ತಿ ವಾಚನ, ಮಹಾಗಣಪತಿ ನಾಂದಿಸಮಾರಾಧನೆ, ಗಣಹೋಮಗಳು ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ನೆರವೇರಿದವು.

ಜಾತ್ರೆ ನಿಮಿತ್ತ 9 ದಿನಗಳ ಕಾಲ ನಡೆಯುವ ದೇವಿ ಪುರಾಣಕ್ಕೆ ಸಂಜೆ ಭವ್ಯ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ವೇದ ಮೂರ್ತಿ ಕಲ್ಲಿನಾಥ ಶಾಸ್ತ್ರೀಗಳು ಪುರಾಣ ಹೇಳಿದರು. ನಂತರ ಸಿಂಗನಹಳ್ಳಿ ರಾಚೋಟೆಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅದೇ ರೀತಿ ರಾತ್ರಿ ಮೊಬೈಲ್ ಮಲ್ಲ ಖ್ಯಾತಿಯ ಡಾ. ಮಲ್ಲಪ್ಪ ಹೊಂಗಲ ಹಾಗೂ ಸಂಗಡಿಗರಿಂದ ಹಾಸ್ಯ ಕಾರ್ಯಕ್ರಮಗಳು ನೆರವೇರಿದವು.

ಶುಕ್ರವಾರ ಬ್ರಾಹ್ಮಿ ಮುಹೂರ್ತ ದಲ್ಲಿ ರಾಚೂಟೇಶ್ವರ ಸ್ವಾಮೀಜಿ ಹಾಗೂ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ದೇವಿಯರಿಗೆ ಅಭಿಷೇಕ, ಕುಂಕುಮಾರ್ಚನೆ, ಹೋಮ- ಹವನ, ದೃಷ್ಟಿ ಬರೆಯುವ ಕಾರ್ಯಕ್ರಮ, ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯ ಧಾರಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಪುರಾಣ, ಆಶೀರ್ವಚನದ ನಂತರ ಪ್ರಭಾವತಿ ಕಿರನಗಿ ಹಾಗೂ ಶೋಭಾ ಮಹಲ್ ಐನಾಪುರ್ ಭಜನಾಮಂಡಳಿಗಳಿಂದ ತತ್ವಪದ ಭಜನಾ ಕಾರ್ಯಕ್ರಮ ನಡೆಯಲಿದೆ.

Share this article