ಧರ್ಮಸ್ಥಳ : ಧರ್ಮಸ್ಥಳದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ. ಹೀಗಾಗಿ ಧರ್ಮಸ್ಥಳ ಭಕ್ತರ ಸಹನೆ ಕಟ್ಟೆ ಒಡೆದಿದೆ. ಭಕ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೇಶದ್ರೋಹಿಗಳು ಈ ಪ್ರಕರಣದಲ್ಲಿದ್ದಾರೆ. ಹೊರದೇಶದಿಂದ ಹಣ ಪಡೆದು ಅಪಪ್ರಚಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಧರ್ಮಸ್ಥಳದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐ ಅಥವಾ ಎನ್‌ಐಎ ತನಿಖೆ ಆಗಲೇಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಧರ್ಮಸ್ಥಳ ಚಲೋ ಮಾಡುತ್ತೇವೆ ಎಂದಾಗ ಇದನ್ನು ರಾಜಕೀಯ ಅಂದರು. ಆದರೆ ಇಲ್ಲಿ ಪಕ್ಷದ ಧ್ವಜ ಇದೆಯಾ ಎಂದು ಗಮನಿಸಬೇಕು. ಇದು ಸ್ವಾಭಿಮಾನಿ ಹಿಂದೂ ಕಾರ್ಯಕರ್ತರ ಹೋರಾಟ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ಅಪಮಾನವಾಗುತ್ತಿದೆ. ಇದೀಗ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಅಪಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಹಿಂದೆ ಸುಹಾಸ್ ಹತ್ಯೆ ಆದಾಗ ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಸಾಂತ್ವನ ಹೇಳಲಿಲ್ಲ. ಕಾಂಗ್ರೆಸ್ ಕೇವಲ ದುಷ್ಟರಿಗೆ ಶಕ್ತಿ ಕೊಡುವ ಪಕ್ಷವಾಗಿದೆ. ಕಳೆದ ಒಂದು ತಿಂಗಳಿನಿಂದ ತಾಳ್ಮೆಯಲ್ಲಿದ್ದೆವು. ಪ್ರಾಮಾಣಿಕತೆ ಇದೆ, ಅಪಪ್ರಚಾರ ತಡೆಯುತ್ತದೆ ಎಂದು ಎಸ್‌ಐಟಿಯನ್ನೂ ಸ್ವಾಗತಿಸಿದೆವು. ಆದರೆ ಪ್ರಾಥಮಿಕ ತನಿಖೆಯನ್ನೂ ಮಾಡದೆ ಅಗೆತ ಮಾಡಿದರು. ಕಿಂಚಿತ್ ಕಾಳಜಿ ಇರುತ್ತಿದ್ದರೆ ಅಪಪ್ರಚಾರ ಮಾಡಿದವರನ್ನು 24 ಗಂಟೆಯೊಳಗೆ ಒಳಗೆ ಹಾಕಬೇಕಾಗಿತ್ತು. ಸೌಜನ್ಯ ಪ್ರಕರಣವನ್ನು ಬೇಕಾದರೆ ಮರು ತನಿಖೆ ಮಾಡಲಿ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ. ಇದಕ್ಕಾಗಿ ಅಕ್ವಿಟಲ್ ಕಮಿಟಿ ಘೋಷಣೆ ಮಾಡಿ. ಬಿಜೆಪಿ ಸಂಪೂರ್ಣ ಬೆಂಬಲಿಸುತ್ತದೆ ಎಂದರು.
ಧರ್ಮಸ್ಥಳ ಚಲೋ ಹಗುರವಾಗಿ ತಗೋಬೇಡಿ:
ಈ ದೇಶದಲ್ಲಿ ನಿಮ್ಮಿಂದ ಹಿಂದೂ ಸಮಾಜಕ್ಕೆ ನ್ಯಾಯ ಸಿಗುತ್ತಾ? ನಮ್ಮನ್ನು ಹಗುರವಾಗಿ ತಗೋಬೇಡಿ. ನೀವು ಕೂಡ ಬಂದು ದರ್ಶನ ಪಡೆಯುರಿ ಸಿದ್ದರಾಮಯ್ಯನವರೇ, ಭಗವಂತ ನಿಮಗೆ ಸದ್ಬುದ್ಧಿ ಕೊಡಲಿ. ತಕ್ಷಣ ಕ್ಷೇತ್ರದ ಬಗೆಗಿನ ಅಪಪ್ರಚಾರ ನಿಲ್ಲಿಸಿ. ಧರ್ಮಸ್ಥಳಕ್ಕೆ ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಬಂದಿದ್ದಾರೆ. ಯಾರನ್ನೂ ದುಡ್ಡು ಕೊಟ್ಟು ಕರೆಸಿಲ್ಲ. ಮಂಜುನಾಥನಿಗೆ ಅವಮಾನ ಮಾಡುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲೇಬೇಕು. ಕಾಂಗ್ರೆಸ್‌ನಿಂದ ಹಿಂದೂ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ. ಧರ್ಮಸ್ಥಳ ಚಲೋವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.