ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಸೃಷ್ಟಿಸಿರುವ ಮುಖವಾಡದ ಹಿಂದೆ ಇರುವ ಧಾರ್ಮಿಕ ವಿರೋಧಿ ಶಕ್ತಿಗಳ ಬಗ್ಗೆ ಸಿಬಿಐ ಅಥವಾ ಎನ್ ಐಎಯಿಂದ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಕಠಿಣಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ಅಧ್ಯಕ್ಷ ಡಾ. ಸಂಪತ್ ಕುಮಾರ್ ಹಾಗೂ ರಾಜ್ಯ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳವು ಸುಮಾರು 840 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಕ್ಷೇತ್ರವು ಕೇವಲ ಶ್ರದ್ಧೆ, ಭಕ್ತಿ, ಭಾವನೆಗಳ ಕೇಂದ್ರವಾಗಿರದೇ ಅನೇಕ ವರ್ಷಗಳಿಂದ ತನ್ನ ಸೇವೆಯನ್ನು ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಚಟುವಟಿಕೆಗಳು, ಆರೋಗ್ಯ, ಅನ್ನದಾಸೋಹದಂತಹ ಸತ್ಕಾರ್ಯಗಳ ಜತೆಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡುತ್ತಿದೆ.ವಿವಿಧ ಸಮಾಜಮುಖಿ ಯೋಜನೆಗಳ ಮೂಲಕ ಲಕ್ಷಾಂತರ ಮಂದಿ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಶಕ್ತಿಯನ್ನು ನೀಡುತ್ತಿದೆ ಎಂದು ವಿವರಿಸಿದರು.ಈ ಸತ್ಕಾರ್ಯಗಳಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರೇರಕ ಶಕ್ತಿಯಾಗಿದ್ದಾರೆ. ಧರ್ಮಸ್ಥಳದ ಮಹಿಮೆಯನ್ನು ಮತ್ತು ಸಮಾಜ ಸೇವೆಯನ್ನು ಸಹಿಸದ ಕೆಲವು ದುಷ್ಕರ್ಮಿಗಳು ಈ ರೀತಿಯಾಗಿ ಅಪಪ್ರಚಾರವನ್ನು ಮಾಡಿ ಸಮಾಜದ ಬಹುಸಂಖ್ಯಾತ ಭಕ್ತರ ಮನೋಭಾವನೆಗಳಿಗೆ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯನ್ನು ಉಂಟುಮಾಡಿ ನೋವುಂಟು ಮಾಡುವ ಹುನ್ನಾರವನ್ನು ಹೂಡಿ ಸಮಾಜದಲ್ಲಿ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಬ್ಬ ಅನಾಮಿಕ ದೂರು ನೀಡಿದ ತಕ್ಷಣ ಸರ್ಕಾರ ಸ್ಪಂದಿಸಿ ಎಸ್‌ಐಟಿ ರಚನೆ ಮಾಡಿ ಶ್ರೀಕ್ಷೇತ್ರಕ್ಕೆ ಕಳುಹಿಸಿ ಪರಿಶೀಲನೆ ಮಾಡಿದೆ. ಆದರೆ ಇದುವರೆಗೂ ಆಪಾದಿಸಿರುವ ಯಾವುದೇ ರೀತಿಯ ಪುರಾವೆಗಳಾಗಲಿ ಸಾಕ್ಷಿಗಳಾಗಲಿ ದೊರಕಿರುವುದಿಲ್ಲ ಎಂಬುದು ಇಡೀ ಜಗತ್ತಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಈ ರೀತಿ ಅನುಮಾನಸ್ಪದವಾಗಿ ಶ್ರೀ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ಕ್ಷೇತ್ರಕ್ಕೆ ಅಗೌರವವನ್ನು ಉಂಟುಮಾಡಿರುವುದರಿಂದ ಧಾರ್ಮಿಕ ಹಕ್ಕುಗಳಿಗೆ ಮತ್ತು ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದರು.ಸಂಘಟನೆಯ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಎಂ., ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಯಾದವ್, ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಪೆರುಮಾಳ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶೇಖರ ಗೌಡ ಪಾಟೀಲ್, ಬಳ್ಳಾರಿ ಜಿಲ್ಲಾಧ್ಯಕ್ಷೆ ಪುಷ್ಪಾ ಇದ್ದರು.