ಶಿರಹಟ್ಟಿ: ಸಾಮಾಜಿಕ, ಧಾರ್ಮಿಕ ಕೇತ್ರಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯವಾದದ್ದು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಅರಪಲ್ಲಿ ಹೇಳಿದರು.
ಪಟ್ಟಣದ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕಾರ್ಯಾಲಯದಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧ್ಯಾನದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ. ದೇವನೊಬ್ಬ ನಾಮ ಹಲವು ಎಂಬಂತೆ ಮನಸ್ಸಿನ ಭಾವನೆಯೇ ದೇವರು. ಮನೆಯ ಉತ್ತಮ ವಾತಾವರಣದಿಂದ ಶಾಂತಿ-ಸಮೃದ್ಧಿ ಕಾಣಬಹುದು.ದುಶ್ಚಟಗಳಿಂದ ದೂರವಿದ್ದು, ನೆಮ್ಮದಿಯ ಬದುಕು ನಡೆಸಲು ಸಂಸ್ಥೆ ಹಲವಾರು ಕಾರ್ಯಕ್ರಮ ನೀಡುತ್ತಿದೆ ಎಂದರು.
ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೆರೆಗಳ ಹೂಳೆತ್ತುವ ಜತೆಗೆ ಮಹಿಳಾ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಲ್ಲಿ ಸಂಸ್ಥೆ ನಿರಂತರ ಶ್ರಮಿಸುತ್ತಿದೆ.ಆರ್ಥಿಕವಾಗಿ ನಮ್ಮ ಭಾಗದ ಮಹಿಳೆಯರಿಗೆ ಚೈತನ್ಯ ತರುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಅನೇಕರ ಬಾಳಿನಲ್ಲಿ ಬೆಳಕನ್ನು ಕಾಣಲು ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ,ನಿರ್ಗತಿಕರಿಗೆ ಆರ್ಥಿಕ ನೆರವು, ಮಧ್ಯಮುಕ್ತ ರಾಷ್ಟ್ರದ ಪರಿಕಲ್ಪನೆಯನ್ನು ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಜನಜಾಗೃತಿ ವೇದಿಕೆ ರಚಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ ಮಾತನಾಡಿ, ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳಾ ಸಬಲೀಕರಣದೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಲಾಗುತ್ತಿದೆ ಎಂದರು.ಸಂಸ್ಥೆ ಕೇವಲ ಸಾಲ ಮಾತ್ರ ನೀಡುತ್ತಿಲ್ಲ. ಬದಲಾಗಿ ಒಂದು ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೆ ಆಧ್ಯತೆ ನೀಡಿ ಮಹಿಳೆಯರು ಮುಖ್ಯ ವಾಹಿನಿಗೆ ಬರುವಂತೆ ಮಾಡುತ್ತಿದೆ.ಇದರ ಜತೆಗೆ ಕುಟುಂಬದ ಮುಖ್ಯಸ್ಥನು ಕುಡಿತದ ಚಟಕ್ಕೆ ಒಳಗಾಗಿದ್ದರೆ ಅಂತಹವರನ್ನು ಗುರುತಿಸಿ ಮಧ್ಯವರ್ಜನ ಶಿಬಿರದ ಮೂಲಕ ನುರಿತ ತಜ್ಞರಿಂದ ಅವರಲ್ಲಿ ಜಾಗೃತಿ ಮೂಡಿಸಿ ನವಜೀವನ ಸಾಗಿಸುವುದಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ವಿವರವಾದ ಸಾಧನಾ ವರದಿ ಕುರಿತು ತಿಳಿಸಿದ ಅವರು, ಸರ್ಕಾರೇತರ ಸಂಸ್ಥೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಬಡ ಜನರ ಅಭಿವೃದ್ದಿಗೆ ಹತ್ತು ಹಲವು ಯೋಜನೆ ಜಾರಿ ಮಾಡಿದೆ. ಶಿರಹಟ್ಟಿ ತಾಲೂಕಿನಲ್ಲಿಯೂ ಕೂಡ ನಿರಂತರವಾಗಿ ಜನಪರ ಕಾರ್ಯ ಕೈಗೊಳ್ಳುತ್ತಿದ್ದು, ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ತಿಳಿಸಿದರು.ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಬಿಸಿ ಟ್ರಸ್ಟ್ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದರ ಜತೆಗೆ ಸಮಾಜದಲ್ಲಿ ಹೆಣ್ಣು ಮಕ್ಕಳು ಸನ್ನಡತೆಯಿಂದ ನಡೆಯುವ ರೀತಿ, ಸಾಂಸಾರಿಕ ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಸಮಾಜದಲ್ಲಿ ಉತ್ತಮವಾದ ಪ್ರಜೆ ಇತರರಿಗೆ ಯಾವ ರೀತಿ ಮಾದರಿಯಾಗಿರಬೇಕೆಂಬ ಮಾರ್ಗದರ್ಶನ ಸಂಸ್ಥೆ ನೀಡುತ್ತಿರುವುದು ಸಂತಸದ ವಿಚಾರ ಎಂದರು.
ಸಭೆಯಲ್ಲಿ ಮುಖಂಡ ಮಹಾಂತೇಶ ದಶಮನಿ, ಜಿ.ಬಿ. ಹೆಸರೂರ, ಚಂದ್ರು ಕುಸ್ಲಾಪೂರ, ರಾಘವೇಂದ್ರ ಕುಲಕರ್ಣಿ, ನಿಂಗಪ್ಪ ಹಮಗಿ, ಶಿವಾನಂದ ಕುಳಗೇರಿ, ಶಶಿಧರ ಶಿರಸಂಗಿ, ಪ್ರದೀಪ ಗೊಡಚಪ್ಪನವರ, ವಿರೇಶ ಉಮನಾಬಾದಿ, ಭರಮಪ್ಪ ಬಳೂಟಗಿ, ಗೌರರೀಶ ನಾಗಶೆಟ್ಟಿ, ಉದಯ ಹಣಗಿ ಸೇರಿದಂತೆ ಅನೇಕರು ಇದ್ದರು.