ಧರ್ಮೇಂದ್ರ ಪ್ರಧಾನ್ ರಾಜಿನಾಮೆ : ಕಾಂಗ್ರೆಸ್ ಸಂಭ್ರಮ

KannadaprabhaNewsNetwork |  
Published : Jul 26, 2026, 02:30 AM IST
ಪೋಟೊ: | Kannada Prabha

ಸಾರಾಂಶ

ಹೋರಾಟಕ್ಕೆ ಬೆಚ್ಚಿದ ಕೇಂದ್ರ ಸರ್ಕಾರವು ಈಗ ವಿದ್ಯಾರ್ಥಿಗಳ ಹಾಗೂ ಕಾಂಗ್ರೆಸ್ ಹೋರಾಟಕ್ಕೆ ಮಣಿದಿದೆ

ಕೊಪ್ಪಳ: ಕಾಂಗ್ರೆಸ್ ಹಾಗೂ ಯುವ ಶಕ್ತಿಯ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಸಂಭ್ರಮಾಚರಣೆ ಮಾಡಿದರು.

ಸಂಭ್ರಮಾಚರಣೆಯ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೆಗೌಡ ಬಯ್ಯಾಪೂರ ಮಾತನಾಡಿ, ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಹಲವು ನಾಯಕರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಇದಲ್ಲದೆ ಸಂಸತ್ ಒಳಗೂ ಸಹ ಧ್ವನಿ ಎತ್ತಿ ಸರ್ಕಾರದ ನಡೆ ಖಂಡಿಸಿದ್ದರು. ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಿತ್ಯ ಹೋರಾಟ ಮಾಡಿದ್ದರು. ಹೋರಾಟಕ್ಕೆ ಬೆಚ್ಚಿದ ಕೇಂದ್ರ ಸರ್ಕಾರವು ಈಗ ವಿದ್ಯಾರ್ಥಿಗಳ ಹಾಗೂ ಕಾಂಗ್ರೆಸ್ ಹೋರಾಟಕ್ಕೆ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜಿನಾಮೆ ನೀಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದರಲ್ಲದೇ ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯ ವೇಳೆ ಆತ್ಮಹತ್ಯೆ ಮಾಡಿಕೊಂಡ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ೧ ಕೋಟಿ ಪರಿಹಾರ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದೇವೆ. ಅವರು ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.

ಇವರು ಪರಿಹಾರ ಕೊಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಮತ್ತೆ ಹೋರಾಟವನ್ನ ಆರಂಭಿಸಲಿದ್ದೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ ಮಾತನಾಡಿ, ಕೇಂದ್ರ ಸರ್ಕಾರವು ಯುವಶಕ್ತಿ ಹೋರಾಟಕ್ಕೆ ಮಣಿದಿದೆ. ಇಷ್ಟು ದಿನಗಳ ಯಾರಿಗೂ ಸ್ಪಂದಿಸದ ಮೋದಿ ಸರ್ಕಾರ ವಿದ್ಯಾರ್ಥಿಗಳ ದೊಡ್ಡ ಹೋರಾಟಕ್ಕೆ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಕೊಟ್ಟಿದ್ದು ಇದು ನಮ್ಮ ಹೋರಾಟದ ಗೆಲುವಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಎಲ್ಲ ಕುಟುಂಬಕ್ಕೂ ಸರ್ಕಾರ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದರು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ತಮ್ಮ ಹೋರಾಟದ ಗೆಲುವನ್ನು ಸಂಭ್ರಮಿಸಿದರಲ್ಲದೇ ಮೋದಿ ಸರ್ಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದರು. ಪ್ರಧಾನಿಯೂ ಸಹ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಹೋರಾಟದ ಫಲವಾಗಿ ಕೇಂದ್ರ ಸಚಿವ ರಾಜಿನಾಮೆ ಕೊಟ್ಟ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಕಾಟನ್ ಪಾಷಾ, ಕೃಷ್ಣಾ ಇಟ್ಟಂಗಿ, ಕೆ.ಎಂ.ಸೈಯದ್, ಪ್ರಸನ್ನ ಗಡಾದ, ಸುರೇಶ ದಾಸರಡ್ಡಿ, ಪಂಪಾಪತಿ, ರವಿ ಕುರಗೋಡ, ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಹಲವು ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಕಾರಿ ಸಸ್ಯ ಬೆಳೆದು ಸ್ವಾವಲಂಬಿಗಳಾಗಿ: ಸುಮಾ ನಾಗರಾಜ ಹಾಸ್ಯಗಾರ
ಪೌರ ಕಾರ್ಮಿಕರು ನಾಡಿನ ದೊಡ್ಡ ಶಕ್ತಿ: ಆರ್.ವಿ. ದೇಶಪಾಂಡೆ