
ಕಾರವಾರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ''ರಂಗ ಪರ್ಯಟನೆ–ಕೊಂಕಣಿ ಕರಾವಳಿಯಲ್ಲಿ ಚಿತ್ರಕಲಾ ಪರ್ಯಟನೆ'' ಕಾರ್ಯಕ್ರಮಕ್ಕೆ ನಗರದ ಪತ್ರಿಕಾಭವನದಲ್ಲಿ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಸೇಂಟ್ ಮಿಲಾಗ್ರಿಸ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಕ್ಯಾನ್ವಾಸ್ ಮೇಲೆ ಬಣ್ಣ ಬಳಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಭಾಗವಹಿಸಿದ ಕಲಾವಿದರಿಗೆ ಬ್ಯಾಚ್ ಹಾಗೂ ಚಿತ್ರಕಲಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾರ್ಜ್ ಫರ್ನಾಂಡಿಸ್, ಪತ್ರಿಕೋದ್ಯಮ ಮತ್ತು ಚಿತ್ರಕಲೆ ಎರಡೂ ಸಮಾಜದ ನೈಜ ಕನ್ನಡಿಗಳಾಗಿವೆ. ಪತ್ರಿಕೆಗಳು ಪದಗಳ ಮೂಲಕ ಸಮಾಜದ ವಾಸ್ತವವನ್ನು ದಾಖಲಿಸಿದರೆ, ಚಿತ್ರಕಲೆ ಬಣ್ಣಗಳ ಮೂಲಕ ಅದೇ ಸತ್ಯವನ್ನು ಜನರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಬಣ್ಣಗಳಿಗೆ ಭಾಷೆಯ ಮಿತಿ ಇಲ್ಲ. ಒಂದು ಚಿತ್ರ ಸಾವಿರ ಮಾತುಗಳಿಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಕರಾವಳಿಯ ಕೊಂಕಣಿ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಬಣ್ಣಗಳ ಮೂಲಕ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಈ ''ರಂಗ ಪರ್ಯಟನೆ'' ಆರಂಭಿಸಲಾಗಿದೆ ಎಂದು ಅವರು ಹೇಳಿದರು.
''ರಂಗ ಪರ್ಯಟನೆ''ಯಡಿ ಕಲಾವಿದರು ಕೊಂಕಣಿ ಜನರ ಜೀವನಶೈಲಿ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಐತಿಹಾಸಿಕ ಮನೆಗಳು, ಸಾಧಕರ ಭಾವಚಿತ್ರಗಳು, ದೇವಸ್ಥಾನಗಳು ಹಾಗೂ ಚರ್ಚ್‌ಗಳ ಸೌಂದರ್ಯವನ್ನು ಕ್ಯಾನ್ವಾಸ್ ಮೇಲೆ ಮೂಡಿಸಲಿದ್ದಾರೆ. ಈ ಕಲಾಕೃತಿಗಳನ್ನು ಮುಂದಿನ ದಿನಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯೂ ಅಕಾಡೆಮಿಗೆ ಇದೆ ಎಂದು ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತಿಳಿಸಿದರು.