ಬರಗಾಲದ ಬೇಗೆಯಲ್ಲಿ ತೋಟಗಾರಿಕೆ ಬೆಳೆಗಾರರು ಕಂಗಾಲು

KannadaprabhaNewsNetwork |  
Published : Jul 26, 2026, 02:15 AM IST
ತೇವಾಂಶದ ಕೊರತೆಯಿಂದಾಗಿ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಒಣಗುತ್ತಿರುವ ಟೊಮೆಟೋ ಬೆಳೆ | Kannada Prabha

ಸಾರಾಂಶ

ಈ ಬಾರಿ ಬರಗಾಲ ರೈತರು ಮತ್ತು ಸಾರ್ವಜನಿಕರಿಬ್ಬರನ್ನೂ ತೀವ್ರ ಸಂಕಷ್ಟಕ್ಕೀಡುಮಾಡಿದೆ. ಸಾಲು ಸಾಲು ಬರಗಾಲದ ಹೊಡೆತ, ತೇವಾಂಶದ ತೀವ್ರ ಕೊರತೆ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ತಳ ಕಂಡಿರುವುದರಿಂದ ಜಿಲ್ಲೆಯ ತೋಟಗಾರಿಕಾ ಬೆಳೆಗಳ ಬಿತ್ತನೆ ತೀವ್ರವಾಗಿ ಕುಸಿದಿದೆ.

ಶಿವಕುಮಾರ ಕುಷ್ಟಗಿ

ಗದಗ: ಈ ಬಾರಿ ಬರಗಾಲ ರೈತರು ಮತ್ತು ಸಾರ್ವಜನಿಕರಿಬ್ಬರನ್ನೂ ತೀವ್ರ ಸಂಕಷ್ಟಕ್ಕೀಡುಮಾಡಿದೆ. ಸಾಲು ಸಾಲು ಬರಗಾಲದ ಹೊಡೆತ, ತೇವಾಂಶದ ತೀವ್ರ ಕೊರತೆ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ತಳ ಕಂಡಿರುವುದರಿಂದ ಜಿಲ್ಲೆಯ ತೋಟಗಾರಿಕಾ ಬೆಳೆಗಳ ಬಿತ್ತನೆ ತೀವ್ರವಾಗಿ ಕುಸಿದಿದೆ.

ಧೈರ್ಯ ಮಾಡಿ ಬಿತ್ತಿದ ರೈತರ ಬೆಳೆಗಳೂ ಮಳೆಯಿಲ್ಲದೆ ಒಣಗುತ್ತಿದ್ದು, ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಮತ್ತೊಂದೆಡೆ ಇಳುವರಿ ಕುಸಿತದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೂ ದೊಡ್ಡ ಮಟ್ಟದ ಕತ್ತರಿ ಬಿದ್ದಿದೆ. ಪ್ರಸಕ್ತ ಸಾಲಿನಲ್ಲಿ ಉಂಟಾಗಿರುವ ಬರಗಾಲ ಎಲ್ಲರ ಜೀವವನ್ನು ಹಿಂಡುತ್ತಿದೆ.

20259 ಹೆ. ಮಾತ್ರ ಬಿತ್ತನೆ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 34313 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಬರಗಾಲದ ಭೀಕರತೆಯಿಂದಾಗಿ ಇದುವರೆಗೆ ಬಿತ್ತನೆಯಾಗಿರುವುದು ಕೇವಲ 20259 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಅಂದರೆ, ಜಿಲ್ಲೆಯಲ್ಲಿ ಬಿತ್ತನೆಯ ಒಟ್ಟು ಪ್ರಮಾಣ ಕೇವಲ ಶೇ. 59.04 ರಷ್ಟಿದ್ದು, ಇನ್ನುಳಿದ ಶೇ. 40ಕ್ಕೂ ಹೆಚ್ಚು ರೈತರು ಭೂಮಿ ಸಿದ್ಧ ಮಾಡಿಟ್ಟುಕೊಂಡಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗದೇ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಬೆಳೆವಾರು ವಿವರ

ಜಿಲ್ಲೆಯ ಅತಿದೊಡ್ಡ ಪ್ರಮುಖ ಬೆಳೆಯಾದ ಈರುಳ್ಳಿಯ 17500 ಹೆ. ಬಿತ್ತನೆ ಗುರಿಯಲ್ಲಿ ಕೇವಲ 9605 ಹೆ. ಸಾಧನೆಯಾಗಿದೆ. 15000 ಹೆ. ಬಿತ್ತನೆ ಗುರಿ ಹೊಂದಿದ್ದ ಮೆಣಸಿನಕಾಯಿ 9875 ಹೆ. ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಉಳಿದಂತೆ 547 ಹೆ. ಗುರಿ ಹೊಂದಿದ್ದ ಹೂವಿನ ಬೆಳೆಗಳು 207 ಹೆ. 300 ಹೆ. ಗುರಿಯಿದ್ದ ಟೋಮೆಟೋ 149 ಹೆ. 265 ಹೆ. ಗುರಿಯಿದ್ದ ಸಾಂಬಾರು ಬೆಳೆಗಳು 79 ಹೆ. ಹಾಗೂ 250 ಹೆ. ಬಿತ್ತನೆ ಗುರಿಯಿದ್ದ ಬೀನ್ಸ್ ಕೇವಲ 97 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ತರಕಾರಿ ಬೆಳೆಗಳನ್ನು ನೋಡುವುದಾದರೆ, ಕುಂಬಳ ಜಾತಿಯ ತರಕಾರಿಗಳ 135 ಹೆ. ಗುರಿಗೆ 62 ಹೆ. ಸೊಪ್ಪಿನ ತರಕಾರಿಗಳ 111 ಹೆ. ಗುರಿಗೆ 63 ಹೆ., ಬೆಂಡೆಕಾಯಿಯ 95 ಹೆ. ಗುರಿಗೆ 49 ಹೆ. ಇತರೆ ತರಕಾರಿಗಳ 50 ಹೆ. ಗುರಿಗೆ 27 ಹೆ., ಬದನೆ 40 ಹೆ. ಗುರಿಗೆ 30 ಹೆ. ಮತ್ತು ಗೆಡ್ಡೆ ಜಾತಿಯ ತರಕಾರಿಗಳ 20 ಹೆ. ಬಿತ್ತನೆ ಗುರಿಗೆ 16 ಹೆ. ಪ್ರದೇಶದಲ್ಲಿ ಮಾತ್ರ ಸಾಧನೆಯಾಗಿದೆ.

ಎರಡು ಕಡೆ ಪೆಟ್ಟು

ಕಷ್ಟಪಟ್ಟು ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಮಳೆ ಕೈಕೊಟ್ಟಿದೆ. ಸಾಲದೆಂಬಂತೆ ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದ್ದು, ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಳು ತೇವಾಂಶವಿಲ್ಲದೇ ಒಣಗುತ್ತಿರುವುದು ರೈತರನ್ನು ಸಾಲದ ಸುಳಿಗೆ ಸಿಲುಕಿಸಿದ್ದು ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಜಿಲ್ಲೆಯ ತರಕಾರಿ ಉತ್ಪಾದನೆಯಲ್ಲಿ ಕುಸಿತ ಕಂಡಿದ್ದು ಜಿಲ್ಲೆಯ ಜನಸಂಖ್ಯೆಗೆ ಅಗತ್ಯವಿರುವಷ್ಟು ತರಕಾರಿಗಳು ಸ್ಥಳೀಯವಾಗಿ ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ಹೊರ ಜಿಲ್ಲೆಗಳಿಂದ ತರಕಾರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸಾರಿಗೆ ವೆಚ್ಚ ಮತ್ತು ಕೊರತೆಯಿಂದಾಗಿ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಜನರಿಗೆ ಹೆಚ್ಚಿನ ಆರ್ಥಿಕ ಹೊರೆ ಎದುರಾಗಿದೆ ಎನ್ನುತ್ತಾರೆ ಗದಗದ ತರಕಾರಿ ವ್ಯಾಪಾರಿ ಇರ್ಷಾದ್ ಮಾನ್ವಿ.ರೈತರಿಗೂ ನಷ್ಟ, ಗ್ರಾಹಕರಿಗೂ ನಷ್ಟ ಎನ್ನುವಂತೆ ಬರಗಾಲದ ಬಿಸಿ ಪ್ರತಿಯೊಬ್ಬರ ಮೇಲೂ ತೀವ್ರ ಪರಿಣಾಮ ಬೀರಿದೆ. ಸರ್ಕಾರ ತಕ್ಷಣವೇ ಸ್ಪಂದಿಸಿ, ನಷ್ಟದಲ್ಲಿರುವ ತೋಟಗಾರಿಕಾ ರೈತರಿಗೆ ವಿಶೇಷ ಪರಿಹಾರ ಧನ ಹಾಗೂ ಪರ್ಯಾಯ ಉಪಕಸುಬುಗಳಿಗೆ ಬೆಂಬಲ ನೀಡಬೇಕು ಎಂದು ರೈತ ಮುತ್ತಣ್ಣ ಕುರ್ತಕೋಟಿ ಆಗ್ರಹಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದಂತೆ ಕಠಿಣ ಕ್ರಮ: ಜೋಶಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ