ಹಗರಿಬೊಮ್ಮನಹಳ್ಳಿ: ರೈತರು ಅನ್ನ ನೀಡುವ ಭಾಗದ ಹೊಲಗಳಲ್ಲಿಯೇ ವಿದ್ಯುತ್ ಕಟ್ ಮಾಡಿದರೆ ಅನ್ನ ನೀಡುವವರು ಯಾರು ಎಂದು ಜಿಪಂ ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ ಜೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು.
ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿನ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸುತ್ತಿರುವ ಜೆಸ್ಕಾಂ ನೀತಿ ವಿರೋಧಿಸಿ ನಡೆದ ಹಿನ್ನೀರಿನ ಪ್ರದೇಶದ ವಿವಿಧ ಗ್ರಾಮಗಳ ರೈತ ಮುಖಂಡರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರ ತುಂಗಾಭದ್ರಾ ಹಿನ್ನೀರು ಪ್ರದೇಶದಲ್ಲಿ ರೈತರಿಗೆ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಈವರೆಗೂ ಇಲ್ಲಿ ವ್ಯವಸಾಯ ಮಾಡಲು ಯಾರ ವಿರೋಧವಿಲ್ಲ. ವಿದ್ಯುತ್ ಸಂಪರ್ಕ ಇಲ್ಲದೆ ಭೂಮಿ ಬಿತ್ತನೆಗೆ ಸಾಧ್ಯವಿಲ್ಲ. ಹಿನ್ನೀರು ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದಲೂ ರೈತರು ಬೇಸಾಯ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ರೈತರಿಗೆ ಹಿನ್ನೀರಿನ ಪ್ರದೇಶವೇ ಆಸರೆಯಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಸತತ ಕೆಲ ವರ್ಷಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇದ್ದಕ್ಕಿದ್ದಂತೆ ಜೆಸ್ಕಾಂ ಇಲಾಖೆ ಹಿನ್ನೀರಿನ ಪ್ರದೇಶ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಅಕ್ಷರಶಃ ರೈತರ ಶೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೆ ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರೈತ ವಿರೋಧಿ ನೀತಿ ಅನುಸರಿಸದಂತೆ ಆದೇಶ ಹೊರಡಿಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿನ್ನೀರು ಪ್ರದೇಶದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ತಾಪಂ ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿದರು. ಸಂಘದ ತಾಲೂಕು ಕಾರ್ಯದರ್ಶಿ ರವಿಕುಮಾರ ತಂಬ್ರಹಳ್ಳಿ, ರೈತ ಮುಖಂಡರಾದ ಯಮುನನಾಯ್ಕ, ನಿಂಗಪ್ಪ, ಚಂದ್ರಪ್ಪ, ಹುಚ್ಚಪ್ಪ, ನಾಗೇಂದ್ರಪ್ಪ, ಬಸಪ್ಪ, ವಿಠಲ ನಾಯ್ಕ, ರುದ್ರಮುನಿಗೌಡ, ಕೊಟ್ರೇಶ್, ಕೊಟ್ರಗೌಡ, ಜಿ.ರಂಗಪ್ಪ, ಕೊಟ್ರೇಶ್‌ಗೌಡ, ಷಣ್ಮುಖಗೌಡ, ಪತ್ರೆಪ್ಪ ರೆಡ್ಡಿ, ಎಚ್.ಜಗದೀಶ, ನಾಗರಾಜನಾಯ್ಕ, ಬಿ.ಪ್ರಭು, ಎಚ್.ಎಸ್.ಬಸವರಾಜ ಇತರರಿದ್ದರು.