ಧಾರವಾಡ:
ಬೀಜ ಮೇಳ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸುಸ್ಥಿರ ಉತ್ಪಾದನೆಗೆ ತಾಂತ್ರಿಕತೆಗಳು, ಕೃಷಿ ನವೋದ್ಯಮಗಳಿಂದ ಕೃಷಿಯಲ್ಲಿ ಆಧುನಿಕರಣ, ಬರ ತಡೆದುಕೊಳ್ಳುವ ಹೊಸ ತಳಿಗಳ ಬಿಡುಗಡೆ, ಕೃಷಿ ಕುರಿತ ವಿಚಾರ ಗೋಷ್ಠಿಗಳು, ಶ್ರೇಷ್ಠ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ನಾಲ್ಕು ದಿನಗಳ ಕಾಲ ರೈತರಿಗೆ ಎಲ್ಲ ವಿಧದಲ್ಲಿ ಕೃಷಿ ಕುರಿತ ಮಾಹಿತಿ ಒದಗಿಸುವ ಕೇಂದ್ರ ಇದಾಗಿದೆ. ಈ ಬಾರಿ 390 ಕ್ವಿಂಟಲ್ ವಿವಿಧ ಬೀಜ ಮಾರಾಟ ಸಹ ಮಾಡಲು ಯೋಜಿಸಲಾಗಿದೆ.
ಈ ಬಾರಿಯ ಕೃಷಿ ಮೇಳವು ಸಶಕ್ತ ಮಹಿಳೆ, ಸುಸ್ಥಿರ ಕೃಷಿ '' ಎಂಬ ಘೋಷವಾಕ್ಯದಡಿ ಮಹಿಳಾ ರೈತರಿಗೆ ಸಮರ್ಪಿಸಲಾಗಿದ್ದು, ಸುಮಾರು 20 ಲಕ್ಷ ರೈತರು ಭೇಟಿ ನೀಡುವ ನಿರೀಕ್ಷೆಯಿದೆ. ಮೇಳದಲ್ಲಿ ಒಟ್ಟು 594 ಸ್ಟಾಲ್‌ಗಳು ಇದ್ದು, ಅದರಲ್ಲಿ ಹೈಟೆಕ್, ಕೃಷಿ ಯಂತ್ರೋಪಕರಣ, ಟ್ರ್ಯಾಕ್ಟರ್ ಮತ್ತು ಆಹಾರ ಸ್ಟಾಲ್‌ಗಳು ಸೇರಿವೆ. ಬೀಜ ಮೇಳ, ಸಾವಯವ ಮತ್ತು ನೈಸರ್ಗಿಕ ಕೃಷಿ ತಂತ್ರಜ್ಞಾನ, ರಬಿ ಬೆಳೆ ನಿರ್ವಹಣೆ, ಮಳೆ ನೀರು ಕೊಯ್ಲು, ಹನಿ ನೀರಾವರಿ, ಡ್ರೋನ್ ಬಳಕೆ, ಎಫ್‌ಪಿಒ ಉತ್ಪನ್ನಗಳು, ರೈತ ಆವಿಷ್ಕಾರಗಳು, ಜಾನುವಾರು ಪ್ರದರ್ಶನ ಮತ್ತು ಜನಪ್ರಿಯ ''''''''ಕೀಟಗಳ ಅದ್ಭುತ ಲೋಕ'''''''' ಪೆವಿಲಿಯನ್ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಕುಲಪತಿ ಡಾ. ಎನ್.ಬಿ. ಪ್ರಕಾಶ ಮಾಹಿತಿ ನೀಡಿದರು.ಮೇಳದ ಮೊದಲ ದಿನ ಬೀಜ ಮೇಳ ನಡೆಯಲಿದ್ದು, ಮೇಳದ 2ನೇ ದಿನ ಸೆ. 26ರಂದು ಮೇಳಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಈ ಮೊದಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ನಿಗದಿ ಮಾಡಲಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಬಹುತೇಕ ರದ್ದಾಗಿದೆ ಎಂಬ ಮಾಹಿತಿ ಇದೆ. ಉಳಿದಂತೆ ಸ್ಥಳೀಯ ಶಾಸಕರು, ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ.