ಧಾರವಾಡ ಆಕಾಶವಾಣಿಗೆ ಶೇ. 70ರಷ್ಟು ಸಿಬ್ಬಂದಿ ಕೊರತೆ!

KannadaprabhaNewsNetwork |  
Published : May 07, 2026, 02:15 AM IST
ಧಾರವಾಡ ಆಕಾಶವಾಣಿ | Kannada Prabha

ಸಾರಾಂಶ

ಆಕಾಶವಾಣಿಯ ವಿವಿಧ ವಿಭಾಗಗಳಲ್ಲಿ ಒಟ್ಟು 187 ಹುದ್ದೆ ಪೈಕಿ 54 ಹುದ್ದೆ ಮಾತ್ರ ಭರ್ತಿಯಾಗಿವೆ. ಇನ್ನುಳಿದ 133 ಹುದ್ದೆ ಖಾಲಿ ಇವೆ. ಜತೆಗೆ ಕೆಲಸದ ಒತ್ತಡಕ್ಕೆ ತಕ್ಕಂತೆ ತಾತ್ಕಾಲಿಕ ಹುದ್ದೆಗಳಿಲ್ಲ. ಇರುವ ಸಿಬ್ಬಂದಿ ಮೇಲೆಯೇ ಹೆಚ್ಚಿನ ಒತ್ತಡ ಹಾಕಿ ಗುಣಮಟ್ಟದ ಕಾರ್ಯಕ್ರಮ ನೀಡುತ್ತಿರುವುದೇ ದೊಡ್ಡ ಸಾಧನೆ.

ಬಸವರಾಜ ಹಿರೇಮಠ

ಧಾರವಾಡ:

ಹತ್ತಾರು ಖಾಸಗಿ ಎಫ್‌ಎಂ ಚಾನಲ್‌ಗಳ ಪೈಪೋಟಿ ಮಧ್ಯೆಯೂ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶ್ರೋತೃಗಳ ಮನ ಗೆದ್ದಿರುವ ಧಾರವಾಡ ಆಕಾಶವಾಣಿಗೆ ತೀವ್ರ ಸಿಬ್ಬಂದಿ ಕೊರತೆ ಕಾಡುತ್ತಿದೆ.

76 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಧಾರವಾಡ ಆಕಾಶವಾಣಿಗೆ 2015ರಲ್ಲಿ ಆಗಿರುವ ಕೆಲವೇ ಕೆಲ ಹುದ್ದೆಗಳ ನೇಮಕಾತಿ ಹೊರತು ಪಡಿಸಿದರೆ, ಇಲ್ಲಿಯ ವರೆಗೂ ನಿವೃತ್ತಿಯಾದ ಯಾವ ಹುದ್ದೆಯನ್ನು ಮರಳಿ ಸೃಜಿಸಿಲ್ಲ.

ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರು ಕನ್ನಡಪ್ರಭಕ್ಕೆ ನೀಡಿದ ಅಂಕಿ-ಅಂಶಗಳ ಪ್ರಕಾರ ವಿವಿಧ ವಿಭಾಗಗಳಲ್ಲಿ ಒಟ್ಟು 187 ಹುದ್ದೆ ಪೈಕಿ 54 ಹುದ್ದೆ ಮಾತ್ರ ಭರ್ತಿಯಾಗಿವೆ. ಇನ್ನುಳಿದ 133 ಹುದ್ದೆ ಖಾಲಿ ಇವೆ. ಜತೆಗೆ ಕೆಲಸದ ಒತ್ತಡಕ್ಕೆ ತಕ್ಕಂತೆ ತಾತ್ಕಾಲಿಕ ಹುದ್ದೆಗಳಿಲ್ಲ. ಇರುವ ಸಿಬ್ಬಂದಿ ಮೇಲೆಯೇ ಹೆಚ್ಚಿನ ಒತ್ತಡ ಹಾಕಿ ಗುಣಮಟ್ಟದ ಕಾರ್ಯಕ್ರಮ ನೀಡುತ್ತಿರುವುದೇ ದೊಡ್ಡ ಸಾಧನೆ.

ಉತ್ತರದ ದನಿ ಆಕಾಶವಾಣಿ:

ಧಾರವಾಡ ಆಕಾಶವಾಣಿ ಉತ್ತರ ಕರ್ನಾಟಕದ ಸಾಂಸ್ಕೃತಿಕ, ಕೃಷಿ ಮತ್ತು ಶೈಕ್ಷಣಿಕ ಮಾಹಿತಿಯ ಪ್ರಮುಖ ಕೇಂದ್ರ. ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳನ್ನು ನೀಡುವ ಪ್ರದೇಶ ಸಮಾಚಾರ ಜತೆಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನದನಿಯಾಗಿದೆ. ಇದರೊಂದಿಗೆ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯೂ ಹೌದು. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ 13 ಜಿಲ್ಲೆಗಳ ಸ್ಥಳೀಯ ಅಸ್ಮಿತೆಯನ್ನು ತನ್ನ ಕಾರ್ಯಕ್ರಮ, ಸುದ್ದಿಗಳ ಮೂಲಕ ತೋರ್ಪಡಿಸುತ್ತಿದೆ.

ಏನೇನು ಕಾರ್ಯಕ್ರಮ:

ಪ್ರಮುಖವಾಗಿ ನೇರ ಫೋನ್‌ ಇನ್‌ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ವಿಶೇಷ ಕಾರ್ಯಕ್ರಮ, ಯುವ ಜನತೆಗೆ ಮೀಸಲು ಕಾರ್ಯಕ್ರಮಗಳು ಅಲ್ಲದೇ, ವಿಕಸಿತ ಭಾರತ ಕಲ್ಪನೆಯಲ್ಲಿ ಮೇಕ್‌ ಇನ್‌ ಇಂಡಿಯಾ, ಮೇಡ್ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಕುರಿತಾದ ಜಾಗೃತಿ ಕಾರ್ಯಕ್ರಮ, ರೈತರ ಕಿರು ಆಹಾರ ಉತ್ಪನ್ನಗಳ ನಿಯಮಗೊಳಿಸುವ ಯೋಜನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯುವ, ರೈತರ, ಕೃಷಿಕ ರೈತ ಪರ ಯೋಜನೆಗಳಿಗೆ ಸಂಬಂಧಿಸಿದ ಹತ್ತಾರು ಕಾರ್ಯಕ್ರಮಗಳನ್ನು ಧಾರವಾಡ ಆಕಾಶವಾಣಿ ನೀಡುತ್ತಿದೆ. ಅಲ್ಲದೇ, ಗಣ್ಯರ, ಸಾಹಿತಿ, ಸಂಗೀತಗಾರರ, ಕಲಾವಿದರ ಸಂದರ್ಶನ, ನಾಟಕಗಳು, ಸಂಗೀತ ಕಾರ್ಯಕ್ರಮಗಳೂ ಇದ್ದೇ ಇರುತ್ತವೆ.

ಈಗಂತೂ ಆಕಾಶವಾಣಿ ಮೊಬೈಲ್‌ ಆ್ಯಪ್‌ನಲ್ಲಿ ಲಭ್ಯ ಇದ್ದು ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಧಾರವಾಡ ಆಕಾಶವಾಣಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಹೀಗಾಗಿ ಉತ್ತಮ ಶೋತೃಗಳನ್ನು ಸಹ ಹೊಂದಿದೆ.

ರಾಜಕೀಯ ಇಚ್ಛಾಶಕ್ತಿ ಕೊರತೆ:

ಧಾರವಾಡ ಆಕಾಶವಾಣಿಗೆ ಇಷ್ಟೆಲ್ಲಾ ಸುದೀರ್ಘ ಇತಿಹಾಸ ಹಾಗೂ ಗುಣಮಟ್ಟದ ಕಾರ್ಯಕ್ರಮಗಳ ನಿರ್ಮಾಣ ಹಾಗೂ ಪ್ರಸಾರ ಮಾಡುತ್ತಿದ್ದರೂ ಸ್ಥಳೀಯ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ. ಸಿಬ್ಬಂದಿ ನೇಮಕಾತಿ ಮಾಡದೇ ಇರುವುದು, ಆಗಾಗ ಪ್ರಾದೇಶಿಕ ಸುದ್ದಿ ವಿಭಾಗದ ಸ್ಥಳಾಂತರದ ಭಯವೂ ಕಾಡುತ್ತಿದೆ. ಕಾರ್ಯಕ್ರಮಗಳ ನಿರ್ಮಾಣಕ್ಕೆ ಕಾಯಂ ಸಿಬ್ಬಂದಿ ನೇಮಕಾತಿ ಮಾಡದೇ ಇದ್ದರೂ ಸ್ಥಳೀಯ ಪತ್ರಿಕೋದ್ಯಮ ವಿಭಾಗಗಳ ಪದವೀಧರರು ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಮತ್ತಷ್ಟು ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಬೇಕಿದೆ ಎಂದು ಆಕಾಶವಾಣಿಯ ನಿವೃತ್ತ ಅಧಿಕಾರಿಯೊಬ್ಬರು ಪ್ರಸಾರ ಭಾರತಿಗೆ ಮನವಿ ಮಾಡುತ್ತಾರೆ. ಧಾರವಾಡ ಆಕಾಶವಾಣಿ ಸಿಬ್ಬಂದಿ ಕೊರತೆ ಮಧ್ಯೆಯೂ ಗುಣಮಟ್ಟದ ಕಾರ್ಯಕ್ರಮ ನೀಡುತ್ತಿದೆ. ಒಟ್ಟು 187 ಹುದ್ದೆಗಳ ಪೈಕಿ 133 ಹುದ್ದೆಗಳು ಖಾಲಿ ಇದ್ದು, ಕೆಲವು ಹುದ್ದೆಗಳಲ್ಲಿ ತಾತ್ಕಾಲಿಕ ಸಿಬ್ಬಂದಿ ಮೂಲಕ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆ ಪ್ರಸಾರ ಭಾರತಿ ಗಮನಕ್ಕೂ ಇದೆ.

ಮಂಜುಳಾ ಪುರಾಣಿಕ, ಕಾರ್ಯಕ್ರಮ ಮುಖ್ಯಸ್ಥರು, ಆಕಾಶವಾಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯ ಖಂಡಿಸಿ ಬಿಜೆಪಿ ಪ್ರತಿಭಟನೆ
ಡೆಂಘೀ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿ