ಸ್ವತಂತ್ರ ಕಾರ್ಯಾರಂಭಕ್ಕೆ ಸಿದ್ಧವಿದೆ ಧಾರವಾಡ ಪಾಲಿಕೆ!

KannadaprabhaNewsNetwork | Published : Jan 12, 2025 1:20 AM

ಸಾರಾಂಶ

ಧಾರವಾಡದ ಜನಸಂಖ್ಯೆ, ತೆರಿಗೆ ಸಂಗ್ರಹ, ವ್ಯಾಪ್ತಿ ಪ್ರದೇಶ ಸೇರಿದಂತೆ ಪ್ರತ್ಯೇಕ ಪಾಲಿಕೆಯಾಗಲು ಎಲ್ಲ ರೀತಿಯ ಅರ್ಹತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸ್ಥಾನಮಾನ ನೀಡಿದೆ.

ಬಸವರಾಜ ಹಿರೇಮಠ

ಧಾರವಾಡ:

ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಹೊಸ ಜಿಲ್ಲೆ, ತಾಲೂಕು, ಸಂಸ್ಥೆ ಅಥವಾ ಹೊಸ ವ್ಯವಸ್ಥೆಯನ್ನು ಸರ್ಕಾರ ಘೋಷಿಸಿದಾಗ ಅನುದಾನ ಸೇರಿದಂತೆ ಭೌತಿಕ ಹಾಗೂ ಮೂಲಭೂತ ಸೌಕರ್ಯಗಳ ಹಿನ್ನೆಲೆಯಿಂದಾಗಿ ಅದು ಜಾರಿಗೆ ಬರಲು ಸಾಮಾನ್ಯವಾಗಿ ವಿಳಂಬವಾಗಲಿದೆ. ಆದರೆ, ಧಾರವಾಡ ಪ್ರತ್ಯೇಕ ಪಾಲಿಕೆ ವಿಷಯದಲ್ಲಿ ಹಾಗಲ್ಲ...!

ಧಾರವಾಡದ ಜನಸಂಖ್ಯೆ, ತೆರಿಗೆ ಸಂಗ್ರಹ, ವ್ಯಾಪ್ತಿ ಪ್ರದೇಶ ಸೇರಿದಂತೆ ಪ್ರತ್ಯೇಕ ಪಾಲಿಕೆಯಾಗಲು ಎಲ್ಲ ರೀತಿಯ ಅರ್ಹತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸ್ಥಾನಮಾನ ನೀಡಿದೆ. ಯಾವುದೇ ಒಂದು ಪ್ರದೇಶವನ್ನು ಹೊಸದಾಗಿ ಘೋಷಿಸುವುದು ಬೇರೆ, ಇದ್ದ ವ್ಯವಸ್ಥೆಯಲ್ಲಿಯೇ ಪ್ರತ್ಯೇಕಿಸುವುದು ಬೇರೆ. ಈಗಾಗಲೇ ಧಾರವಾಡದಲ್ಲಿ ಸ್ವತಂತ್ರ್ಯ ಪಾಲಿಕೆ ಆಗಲು ಬೇಕಾದ ಕೆಲವೇ ಕೆಲವು ಭೌತಿಕ ಹಾಗೂ ಮೂಲಭೂತ ಸೌಕರ್ಯ ಹೊರತುಪಡಿಸಿ ಬಹುತೇಕ ಸೌಲಭ್ಯಗಳಿದ್ದು ಶೀಘ್ರವೇ ಪಾಲಿಕೆ ಸ್ವತಂತ್ರ್ಯವಾಗಿ ಕಾರ್ಯಾರಂಭ ಮಾಡಬೇಕು ಎಂಬುದು ಧಾರವಾಡಿಗರ ಆಶಯ.

ಏನೇನು ಸೌಲಭ್ಯಗಳಿವೆ:

ಸದ್ಯ ಧಾರವಾಡದಲ್ಲಿ ಆಡಳಿತಕ್ಕಾಗಿ ಕಟ್ಟಡವಿದೆ. ಆಯುಕ್ತರ, ಮೇಯರ್‌-ಮೇಯರ್‌ ಕಚೇರಿಯೂ ಇದೆ. ಸಾಮಾನ್ಯ ಸಭೆ ನಡೆಸಲು ಇತ್ತೀಚೆಗೆ ₹ 7 ಕೋಟಿ ವೆಚ್ಚದಲ್ಲಿ ಅಮೃತ ಮಹೋತ್ಸವ ಸಭಾಭವನ ನಿರ್ಮಿಸಲಾಗಿದೆ. ನಾಲ್ಕು ವಲಯ ಕಚೇರಿಗಳು ಹಾಗೂ ಸಹಾಯಕ ಆಯುಕ್ತರೂ ಇದ್ದಾರೆ. ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿ, ಉಪ ಆಯುಕ್ತರು, ಅಭಿವೃದ್ಧಿ, ಆಡಳಿತ, ಕಂದಾಯ ಕಚೇರಿ ಇದೆ. ಸಾಮಾನ್ಯ ಆಡಳಿತ ಶಾಖೆ, ಕಾರ್ಯಪಾಲಕ ಅಭಿಯಂತರರು, ಸಹಾಯಕ ನಿರ್ದೇಶಕರು ಸಾಂಖಿಕ, ಕಾರ್ಯಪಾಲಕರ ಅಭಿಯಂತರ ವಿದ್ಯುತ್‌, ಮೇಯರ್‌ ಕಚೇರಿ, ವಿಪಕ್ಷ ನಾಯಕರ ಕಚೇರಿ, ಚುನಾವಣಾ ಖಾತೆ, ಮಾರುಕಟ್ಟೆ ಖಾತೆಯೂ ಇದೆ. ಗ್ರಾಮೀಣ ಹಾಗೂ ನಗರ ಶಾಸಕರ ಕಚೇರಿಗಳಿವೆ.

ಏನೇನು ಬೇಕು?:

ಹೆಚ್ಚುವರಿಯಾಗಿ ಸಿಬ್ಬಂದಿ, ಪೌರ ಕಾರ್ಮಿಕರು, ಗಣತ್ಯಾಜ್ಯ ನಿರ್ವಹಣಾ ವಿಭಾಗ, ಆರೋಗ್ಯಾಧಿಕಾರಿ ಸೇರಿದಂತೆ ಪರಿಷತ್‌ ಕಾರ್ಯದರ್ಶಿ ಕಚೇರಿ ಅಗತ್ಯವಿದೆ. ಕಾರ್ಯಪಾಲಕ ಅಭಿಯಂತರ ಒಬ್ಬರೇ ಇದ್ದು, ಇಬ್ಬರು ಆಗಬೇಕು. ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ಲೆಕ್ಕಗಳ ಸ್ಥಾಯಿ ಸಮಿತಿ ಸೇರಿ ಆರು ಸ್ಥಾಯಿ ಸಮಿತಿಗಳಿಗೆ ಕಚೇರಿಗಳ ಮಾತ್ರ ಅಗತ್ಯವಿದೆ. ಇದಲ್ಲದೇ, ಸಾರ್ವಜನಿಕರಿಗೆ ಶೌಚಾಲಯ ಹಾಗೂ ಪಾರ್ಕಿಂಗ್‌ಗೆ ತುಸು ವಿಶಾಲ ಜಾಗದ ವ್ಯವಸ್ಥೆಯಾಗಬೇಕು.

ಒಟ್ಟಾರೆ, ಸ್ವತಂತ್ರ್ಯವಾಗಿ ಧಾರವಾಡ ಪಾಲಿಕೆ ಕಾರ್ಯಾರಂಭ ಮಾಡಲು ಭೌತಿಕವಾಗಿ ಸಿದ್ಧವಾಗಿದ್ದು ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎನ್ನುವುದು ಧಾರವಾಡ ಜನತೆಯ ಆಶಯ. ಹೋರಾಟ ಹಾಗೂ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನಮಾನ ದೊರೆತಿದೆ. ಒಂದು ಪಾಲಿಕೆಯಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಿ ಹೊಸ ಪಾಲಿಕೆಗೆ ಬೇಕಾದ ಸೌಲಭ್ಯ, ಹೊಸ ಹುದ್ದೆ ನೀಡಬೇಕು ಎಂದು ಮಾಜಿ ಮೇಯರ್‌ ಶಿವು ಹಿರೇಮಠ ಹೇಳಿದರು.

ಧಾರವಾಡಿಗರ ಇಚ್ಛೆಯಂತೆ ಪ್ರತ್ಯೇಕ ಪಾಲಿಕೆಯ ಭಾಗ್ಯವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡಿದ್ದು, ಕೆಲವೇ ದಿನಗಳಲ್ಲಿ ಅಧಿಸೂಚನೆ ಸಹ ಹೊರಡಿಸಲಿದೆ. ಸ್ವತಂತ್ರ ಪಾಲಿಕೆ ಆಡಳಿತ ಮಾತ್ರವಲ್ಲದೇ ಬೇಕಾದ ಸೌಲಭ್ಯಗಳನ್ನು ತಂದು ಇಡೀ ರಾಜ್ಯಕ್ಕೆ ಧಾರವಾಡ ಪಾಲಿಕೆ ಮಾದರಿ ಆಗುವಂತೆ ನಾವು ಕಾರ್ಯೋನ್ಮುಖ ಆಗಲಿದ್ದೇವೆ ಎಂದು ಪಾಲಿಕೆ ಸದಸ್ಯ ರಾಜು ಕಮತಿ ಹೇಳಿದರು.

Share this article