ಧಾರವಾಡ ಜಿಲ್ಲೆ: 8 ದಿನದಲ್ಲಿ ₹ 48 ಲಕ್ಷಕ್ಕೆ ಕನ್ನ

KannadaprabhaNewsNetwork |  
Published : Dec 03, 2025, 02:15 AM IST
2ಡಿಡಬ್ಲೂಡಿ3ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತವು ಸರ್ಕಾರ ನೌಕರರಿಗೆ ಮಂಗಳವಾರ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಬಗ್ಗೆ ಮಾತನಾಡಿದ ಹಿರಿಯ ಪೊಲೀಸ ಅಧಿಕಾರಿ ಶಿವಾನಂದ ಕಟಗಿ. | Kannada Prabha

ಸಾರಾಂಶ

ಎಂಟು ದಿನಗಳಲ್ಲಿ ಸೈಬರ್ ಕ್ರೈಂನಿಂದ ₹ 48 ಲಕ್ಷ ಧಾರವಾಡದಲ್ಲಿ ವಂಚನೆ ಆಗಿದೆ. ದೆಹಲಿಯಲ್ಲಿ ₹ 26 ಕೋಟಿ ಮತ್ತು ಬೆಂಗಳೂರಲ್ಲಿ ₹ 11 ಕೋಟಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ ಸೈಬರ್ ಸಹಾಯವಾಣಿ 1930ಗೆ ಮತ್ತು ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲು ಆಗುತ್ತಿವೆ.

ಧಾರವಾಡ:

ಡಿಜಿಟಲ್‌ ಅರೆಸ್ಟ್‌ ಸೇರಿದಂತೆ ಆರ್ಥಿಕ ವಂಚನೆ, ಸೈಬರ್‌ ಕ್ರೈಂನಂತಹ ಪ್ರಕರಣಗಳಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚು ಮೋಸ ಹೋಗುತ್ತಿರುವುದು ದುರ್ದೈವ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತವು ಸರ್ಕಾರ ನೌಕರರಿಗೆ ಮಂಗಳವಾರ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಬಗ್ಗೆ ಮತ್ತು ಕೆಜಿಐಡಿ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ಉದ್ಘಾಟಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಬಹುತೇಕ ಸಾರ್ವಜನಿಕರು, ಸರ್ಕಾರಿ ನೌಕರರು ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ತಿಳಿದಿಲ್ಲ. ಅದಕ್ಕಾಗಿ ದಿನದಿನಕ್ಕೆ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ಅಧಿಕಾರಿಗಳು ವ್ಯಕ್ತಿಗನುಗುಣವಾಗಿ ಹುದ್ದೆಯ ಅರ್ಹತೆ ತಿಳಿದುಕೊಳ್ಳಬೇಕು. ಬೇರೆ ಎಲ್ಲ ಇಲಾಖೆಗಳ ಬಗ್ಗೆಯೂ ಮಾಹಿತಿ ಗೊತ್ತಿರಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿಕೊಂಡು ಮೋಸ-ವಂಚನೆ ಬಗ್ಗೆ ಮಾಹಿತಿ ನೀಡಿದರೆ ಅತಿ ಉತ್ತಮ ಎಂದರು.

ಸೈಬರ್‌ ಜಾಗೃತಿ ಹೊಂದಿ:

ಹಿರಿಯ ಪೊಲೀಸ್‌ ಅಧಿಕಾರಿ ಶಿವಾನಂದ ಕಟಗಿ ಮಾತನಾಡಿ, ಸೈಬರ್ ಜಾಗೃತಿ ಅತ್ಯಂತ ಅಗತ್ಯ. ಮಾನವೀಯ ಸಂಬಂಧ, ಬ್ಯಾಂಕಿಂಗ್ ವ್ಯವಸ್ಥೆ, ವ್ಯಾಪಾರ- ವ್ಯವಹಾರಗಳು ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಯುಗದಲ್ಲಿ ವಂಚನೆಗಳ ರೂಪವೇ ಬದಲಾಗಿದೆ. ಜಾಗೃತರಾಗಿರದಿದ್ದರೆ, ಅಪರಾಧಿಗಳು ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಸಂಗ್ರಹ ಹಣವನ್ನು ದೋಚಬಹುದು. ಬ್ಯಾಂಕ್ ಖಾತೆ ವಿವರ, ಒಟಿಪಿ, ಎಟಿಎಂ ಪಿನ್, ಆಧಾರ್ ಅಥವಾ ಪ್ಯಾನ್ ವಿವರ ಕೇಳುವ ಯಾವುದೇ ಕರೆ ಅಥವಾ ಸಂದೇಶ ನಂಬಬಾರದು ಹಾಗೂ ಯಾವುದೇ ಬ್ಯಾಂಕ್ ಅಥವಾ ಸರ್ಕಾರಿ ಇಲಾಖೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಫೋನ್ ಮೂಲಕ ಕೇಳುವುದಿಲ್ಲ. ಕೇಳಿದರೆ ಅದು ವಂಚನೆ ಎನ್ನುವುದು ನಿಶ್ಚಿತ ಎಂದು ಎಚ್ಚರಿಸಿದರು.

ಕಳೆದ ಎಂಟು ದಿನಗಳಲ್ಲಿ ಸೈಬರ್ ಕ್ರೈಂನಿಂದ ₹ 48 ಲಕ್ಷ ಧಾರವಾಡದಲ್ಲಿ ವಂಚನೆ ಆಗಿದೆ. ದೆಹಲಿಯಲ್ಲಿ ₹ 26 ಕೋಟಿ ಮತ್ತು ಬೆಂಗಳೂರಲ್ಲಿ ₹ 11 ಕೋಟಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ ಸೈಬರ್ ಸಹಾಯವಾಣಿ 1930ಗೆ ಮತ್ತು ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲು ಆಗುತ್ತಿವೆ. ₹ 23 ಸಾವಿರ ಕೋಟಿ ಭಾರತದಲ್ಲಿ ಈ ರೀತಿ ಸೈಬರ್‌ ಅಪರಾಧದಿಂದ ಕಳೆದು ಹೋಗಿದೆ. ಸೈಬರ್‌ದಿಂದ ವಂಚಿತರಾದವರು ಕೇವಲ ಶೇ. 10ರಷ್ಟು ಜನ ಮಾತ್ರ ದೂರನ್ನು ದಾಖಲಿಸುತ್ತಾರೆ. ಆದರೆ, ಉಳಿದ ಜನ ₹5 ಮತ್ತು ₹ 10 ಸಾವಿರ ಕಳೆದುಕೊಂಡವರು ಮತ್ತು ಒಟಿಪಿ ವರ್ಗಾಯಿಸಿದವರು, ಅನಾಮಧೇಯ ಕರೆಗಳಿಂದ ಹಣ ಕಳೆದುಕೊಂಡು ವಂಚಿತರಾದವರು ಯಾವುದೇ ದೂರು ಕೊಡುವುದಿಲ್ಲ ಎಂದು ತಿಳಿಸಿದರು.

ಕೆಜಿಐಡಿ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ. ಕಠಾರಿ ಕೆಜಿಐಡಿ ವಿಮೆ, ವಂತಿಗೆ, ಬೋನಸ್, ಲಾಭ ಮತ್ತು ಹೂಡಿಕೆ ಕುರಿತು ವಿವರವಾಗಿ ವಿವರಿಸಿದರು. ಕೆ. ಶ್ರೀಧರ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ಡಾ. ಸುರೇಶ ಹಿರೇಮಠ ವಂದಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಡಿಡಿಒಗಳು, ವಿಷಯ ನಿರ್ವಾಹಕರಿದ್ದರು. ವಿಸಿ ಮೂಲಕ ಬಂಧನವಿಲ್ಲ...

ನಕಲಿ ಕಸ್ಟಮ್ಸ್, ಸಿಬಿಐ, ಸೈಬರ್ ಕ್ರೈಂ, ಪೊಲೀಸ್ ಅಧಿಕಾರಿ ಎಂದು ಕರೆ ಮಾಡುವ ಮೂಲಕ ನಿಮ್ಮ ಮೇಲೆ ಪ್ರಕರಣವಿದೆ, ಹಣಕಾಸು ಗೊಂದಲವಿದೆ, ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಯುತ್ತದೆ ಎಂದು ಹೇಳಿ ಜನರನ್ನು ಹೆದರಿಸುತ್ತಿದ್ದಾರೆ. ಆ ರೀತಿ ಕಾನೂನಿನಲ್ಲಿ ಇಲ್ಲ. ಪೊಲೀಸರು ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಯಾವುದೇ ಶಂಕೆ ಬಂದರೆ, ತಕ್ಷಣ 112 ಅಥವಾ ಸೈಬರ್ ಸಹಾಯವಾಣಿ ಸಹಾಯವಾಣಿ 1930 ಸಂಪರ್ಕಿಸಬೇಕು.

ಶಿವಾನಂದ ಕಟಗಿ, ಹಿರಿಯ ಪೊಲೀಸ್‌ ಅಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ