ಧಾರವಾಡ ಜಿಲ್ಲೆಯ ಸಮಸ್ಯೆಗಳು ಮುಖ್ಯಮಂತ್ರಿಗಳ ಕಚೇರಿ ವರೆಗೆ ಹೋಗದಂತೆ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಧಾರವಾಡ:
ಜಿಲ್ಲೆಯ ಸಮಸ್ಯೆಗಳು ಮುಖ್ಯಮಂತ್ರಿಗಳ ಕಚೇರಿ ವರೆಗೆ ಹೋಗದಂತೆ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದ ಅವರು, ಜನರ ಸಮಸ್ಯೆ ಪರಿಹರಿಸುವಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಸರ್ಕಾರಿ ಜಮೀನು, ಪಾಲಿಕೆ ಆಸ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಜಾಗ ಗುರುತಿಸಿ, ಫಲಕ ಅಳವಡಿಸಬೇಕು. ಆ ಮೂಲಕ ಸರ್ಕಾರದ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಪ್ಪಿಸಬೇಕು. ಸ್ಥಳೀಯರಿಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗಾವಕಾಶ ಸೃಷ್ಟಿಸಬೇಕು. ಆ ಮೂಲಕ ವಲಸೆ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಬೇಕಿದೆ ಎಂದರು.
ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದ ಅವರು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಬೇಕು ಎಂದರು. ಉಚಿತ ಬಸ್‌ಪಾಸ್ ವಿತರಣೆಗೆ ಕ್ರಮವಹಿಸಲಾಗುವುದು ಎಂದ ಅವರು, ಪೊಲೀಸರು ಸೈಬರ್ ಕ್ರೈಂ, ಡ್ರಗ್ಸ್ ನಿಯಂತ್ರಿಸಬೇಕು ಎಂದರು.
100 ದಿನಗಳ ಅಭಿಯಾನ:
ಮುಖ್ಯಮಂತ್ರಿಗಳು ವಿವಿಧ ವಿಷಯಗಳ ಮೇಲೆ 100 ದಿನಗಳ ಅಭಿಯಾನ ಕೈಗೊಂಡಿದ್ದಾರೆ. ಇದರನ್ವಯ ಯುವ ಕ್ಲಬ್ ಸ್ಥಾಪಿಸಲಾಗುವುದು. ನಾಯಕತ್ವ, ಉದ್ಯೋಗ, ಕ್ರೀಡೆ ಮತ್ತು ಸಮುದಾಯ ಸೇವೆ ಮಾಡಲು ಯುವ ಕ್ಲಬ್ ಮುಂದಾಗಲಿವೆ. ವಾರ್ಷಿಕ ₹ 10 ಲಕ್ಷ ಬೆಂಬಲ ಹಣದಲ್ಲಿ 10 ಸಾವಿರ ಯುವ ಕ್ಲಬ್ ಕಾರ್ಯನಿರ್ವಹಿಸಲಿವೆ. ಶಾಲೆ, ಸಮುದಾಯ ಭವನ, ನಿರ್ಮಿತಿ ಕೇಂದ್ರಗಳಲ್ಲಿ ಯುವ ಕ್ಲಬ್‌ಗಳು ಕಾರ್ಯನಿರ್ವಹಿಸಲಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತವೆ. ಆದರೆ, ಯುವ ಕ್ಲಬ್‌ಗಳು ಯಾವುದೇ ರಾಜಕೀಯ ಕ್ಲಬ್‌ಗಳಾಗಿರುವುದಿಲ್ಲ ಎಂದು ಹೇಳಿದರು.
ಭೂ ಗ್ಯಾರಂಟಿ ಯೋಜನೆ ಮೂಲಕ ಒಂದು ವರ್ಷದಲ್ಲಿ 1 ಕೋಟಿ ಕುಟುಂಬಗಳಿಗೆ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಲಾಗುವುದು. ಆಂದೋಲನದ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು.
ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಸಾರ್ವಜನಿಕರು ದುಡ್ಡಿನ ಆಸೆಗಾಗಿ ಹೂಡಿಕೆ ಮಾಡುವ ಕಂಪನಿಗಳಲ್ಲಿ ಹಣ ವಿನಿಯೋಗಿಸಬಾರದು. ಹಳ್ಳಿಗಳಲ್ಲಿ ಮೋಸ ಮಾಡುವ ಜಾಲಗಳು ಹೆಚ್ಚಾಗಿದ್ದು ಈ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಅಂತಹ ಜಾಲಗಳು ಪತ್ತೆಯಾದಲ್ಲಿ, ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.