ಧಾರವಾಡದಲ್ಲಿ ಮಲೆನಾಡಿನ ಮಳೆ ವಾತಾವರಣ ಸೃಷ್ಟಿ!

KannadaprabhaNewsNetwork |  
Published : Aug 19, 2025, 01:00 AM IST
ನಿರಂತರ ಜಿಟಿ ಜಿಟಿ ಮಳೆಯನ್ನು ಸಾಕ್ಷೀಕರಿಸುತ್ತಿರುವ ಧಾರವಾಡದ ಹೊರವಲಯದ ರಸ್ತೆ | Kannada Prabha

ಸಾರಾಂಶ

ಕಳೆದ ಎರಡ್ಮೂರು ದಿನಗಳಿಂದ ತೀವ್ರ ಮೋಡ ಮುಸುಕಿದ ವಾತಾವರಣ, ತಂಪು ಗಾಳಿ ಹಾಗೂ ಜಿಟಿಜಿಟಿ ಮಳೆಯಾಗುತ್ತಿದ್ದು, ಧಾರವಾಡ ಪೂರ್ಣ ಮಲೆನಾಡಿನ ಮಳೆ ಪರಿಸರ ಸೃಷ್ಟಿ

ಧಾರವಾಡ: ಧಾರವಾಡ ಮಳಿ ನಂಬಾರ್ದು ಎನ್ನುವ ಮಾತು ಈ ವರ್ಷ ಸಂಪೂರ್ಣ ನಿಜವಾಗಿದೆ. ಈ ಮುಂಗಾರಿನ ಜೂನ್‌ನಿಂದ ಶುರುವಾಗಿರುವ ಮಳೆ ಇವತ್ತಿನ ವರೆಗೂ ನಿರಂತರವಾಗಿ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿದೆ.

ಇಷ್ಟು ದಿನಗಳ ಕಾಲ ಮಳೆ-ಬಿಸಿಲಿನ ನಿಯಮ ಕಾಪಾಡಿಕೊಂಡಿದ್ದು, ಈಗ ಕಳೆದ ಎರಡ್ಮೂರು ದಿನಗಳಿಂದ ತೀವ್ರ ಮೋಡ ಮುಸುಕಿದ ವಾತಾವರಣ, ತಂಪು ಗಾಳಿ ಹಾಗೂ ಜಿಟಿಜಿಟಿ ಮಳೆಯಾಗುತ್ತಿದ್ದು, ಧಾರವಾಡ ಪೂರ್ಣ ಮಲೆನಾಡಿನ ಮಳೆ ಪರಿಸರ ಸೃಷ್ಟಿಯಾಗಿದೆ. ಶಾಲೆಗೆ ಹೋಗುವ ಮಕ್ಕಳು, ನೌಕರಿಗೆ ಹೋಗುವವರು, ವ್ಯಾಪಾರಸ್ಥರು ಜಡಿ ಮಳೆಗೆ ಜಡ್ಡು ಬಂದವರಂತೆ ಮನೆಯಲ್ಲಿ ಬೆಚ್ಚಗೆ ಕೂರುವಂತಾಗಿದೆ.

ಬೆಚ್ಚನೆಯ ಧಿರಿಸು:ಎಲ್ಲಿ ನೋಡಿದರಲ್ಲಿ ಹಸಿರು ವಾತಾವರಣ, ಮಾರುಕಟ್ಟೆಗಳೆಲ್ಲವೂ ರಾಡಿ ರಾಡಿ. ರಸ್ತೆಗಳು ಸಹ ಕೆಸರು. ತಂಡಿಯ ಹೊಡೆತಕ್ಕೆ ಎಲ್ಲರೂ ರೇನ್‌ಕೋಟ್‌ ಅಥವಾ ಬೆಚ್ಚನೆಯ ಜಾಕೆಟ್‌, ಪಾದಚಾರಿಗಳು ಕಡ್ಡಾಯವಾಗಿ ಕೈಯಲ್ಲಿ ಛತ್ರಿ ಹಿಡಿದುಕೊಂಡೇ ಅಡ್ಡಾಡುವ ಪರಿಸ್ಥಿತಿ ಈ ವಾತಾವರಣ ತಂದಿಟ್ಟಿದೆ. ಇನ್ನು, ವಾತಾವರಣದ ಬದಲಾವಣೆಯಿಂದಾಗಿ ನೆಗಡಿ, ಕೆಮ್ಮು, ಜ್ವರ ಅಂತಹ ರೋಗಗಳು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದ್ದು ತೀವ್ರ ಚಳಿಗಾಳಿ, ಮಳೆಗೆ ಧಾರವಾಡ ಜನ ಅಕ್ಷರಶಃ ಮೆತ್ತಗಾಗಿದ್ದಾರೆ.

ನಿನ್ನೆ ರಾತ್ರಿಯಿಂದ ಪೂರ್ತಿ ಮಳೆಯಾಗುತ್ತಿದೆ. ಧಾರವಾಡದ ವಾತಾವರಣ ಪೂರ್ತಿ ಬದಲಾಗಿದ್ದು, ಮಲೆನಾಡಂತಾಗಿದೆ. ಅತೀವ ಥಂಡಿ ವಾತಾವರಣ. ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಮಳೆ ಜತೆಗೆ ತಂಪಾದ ಗಾಳಿ.ಮನೆ ಮಂದಿಗೆಲ್ಲ ಅರಾಮಿಲ್ಲ. ಬರೀ ಬೆಚ್ಚನೆ ನೀರು, ಬಿಸಿ ಊಟ ಮಾಡುವಂತಾಗಿದೆ. ಮಳೆ ಸಾಕಾಗಿ ಯಾವಾಗ ಬಿಸಿಲು ಬೀಳುತ್ತದೆಯೋ ಕಾಯುತ್ತಿದ್ದೇನೆ ಎಂದು ಧಾರವಾಡ ನಿವಾಸಿ ಗುರುರಾಜ ಪಿಸೆ ಹೇಳುತ್ತಾರೆ.

ಕೈ ಕೊಟ್ಟ ಮುಂಗಾರು: ನಗರವಾಸಿಗಳದ್ದು ಒಂಥರ ಸಮಸ್ಯೆಯಾದರೆ, ಹಳ್ಳಿಗರ ಸಮಸ್ಯೆ ಇನ್ನೊಂಥರ. ಮುಂಗಾರು ಬಿತ್ತನೆಯ ಸಮಯದಿಂದ ಇವತ್ತಿನ ವರೆಗೂ ಬೆಳೆ ಕಾಪಿಟ್ಟುಕೊಂಡು ಬಂದು ಈಗ ಇನ್ನೇನು ಬೆಳೆ ಕೈ ಬಂತು ಎನ್ನುವಷ್ಟರಲ್ಲಿ ಬಿಸಿಲು ಬಿದ್ದು ಒಣಬೇಕಾದ ಬೆಳೆಗಳು, ಮಳೆಯಿಂದ ತೊಯ್ದು ತೊಪ್ಪಿಟ್ಟಿವೆ. ಅದರಲ್ಲೂ ಕುಂದಗೋಳ, ನವಲಗುಂದ ಭಾಗದಲ್ಲಿ ಹಾಕಿದ್ದ ಹೆಸರು ಬೆಳೆಯಂತೂ ಮೊಳಕೆಯೊಡೆಯುವ ಸ್ಥಿತಿಗೆ ಬಂದಿದೆ. ಬಿತ್ತನೆ ಬೀಜ, ಗೊಬ್ಬರ, ಕೀಟಗಳ ನಿರ್ವಹಣೆ, ಕಳೆ ಎಂದೆಲ್ಲ ಎಕರೆ ಹೊಲಕ್ಕೆ ಹತ್ತಾರು ಸಾವಿರ ವೆಚ್ಚ ಮಾಡಿ ಕೈ ಬಂದ ಬೆಳೆ ತೆಗೆಯದ ಸ್ಥಿತಿ ರೈತರದ್ದಾಗಿದೆ.

ಉಪ್ಪಿನ ಬೆಟಗೇರಿ ರಸ್ತೆಗೆ ಹೊಂದಿಕೊಂಡು ಎರಡು ಎಕರೆ ಪೈಕಿ ಅರ್ಥ ಎಕರೆ ಶೇಂಗಾ, ಒಂದೂವರೆ ಏಕರೆ ಉದ್ದು ಬೆಳೆದಿದ್ದೇನೆ. ಇಲ್ಲಿಯ ವರೆಗೆ ಎಕರೆಗೆ ₹16 ಸಾವಿರ ವೆಚ್ಚ ಮಾಡಿದ್ದೇನೆ. ಇಷ್ಟು ದಿನ ಕೀಟಗಳು ಕಾಡಿದ್ದು, ಈಗ ಕೊನೆ ಕ್ಷಣದಲ್ಲಿ ಮಳೆ ಕಾಡುತ್ತಿದೆ. ಇನ್ನೊಂದೆರೆಡು ದಿನಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಸೃಷ್ಟಿಯಾಗದೇ ಇದ್ದಲ್ಲಿ ಎಲ್ಲ ರೈತರು ಮುಂಗಾರು ಬೆಳೆ ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತ ಮೃತ್ಯುಂಜಯ ಮಠಪತಿ ಹೇಳಿದರು.

ವಾಡಿಕೆಗಿಂತ ಹೆಚ್ಚಿನ ಮಳೆ: ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 2.9 ಮಿಮೀ ವಾಡಿಕೆ ಮಳೆ ಪೈಕಿ 12 ಮಿಮೀ ಆಗಿದೆ. ಧಾರವಾಡದಲ್ಲಿ 2.3 ಮಿಮೀ ವಾಡಿಕೆ, ಆಗಿದ್ದು 12.3 ಮಿಮೀ ಹುಬ್ಬಳ್ಳಿಯಲ್ಲಿ 2.6ರ ಪೈಕಿ 9 ಮಿಮೀ ಕಲಘಟಗಿಯಲ್ಲಿ 4.2ರ ಪೈಕಿ ಆಗಿದ್ದು 24.4. ಮಿಮೀ, ಕುಂದಗೋಳದಲ್ಲಿ 2.1ರ ಪೈಕಿ ಆಗಿದ್ದು 11.7 ಮಿಮೀ, ನವಲಗುಂದದಲ್ಲಿ 1.8ರ ಪೈಕಿ ಆಗಿದ್ದು 5.3 ಮಿಮೀ, ಹುಬ್ಬಳ್ಳಿ ನಗರದಲ್ಲಿ 1.8ರ ಪೈಕಿ 5.2 ಮಿಮೀ, ಅಳ್ನಾವರದಲ್ಲಿ 8.1ರ ಪೈಕಿ ಆಗಿದ್ದು 26.2 ಹಾಗೂ ಅಣ್ಣಿಗೇರಿಯಲ್ಲಿ 1.7ರ ಪೈಕಿ ಆಗಿದ್ದು 5.2 ಮಿಮೀ ಒಟ್ಟಾರೆ ಜಿಲ್ಲೆಯ ಎಲ್ಲ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚಾಗಿಯೇ ಮಳೆಯಾಗಿದೆ. ಮಳೆ ಜತೆಗೆ ಶೀತ ಗಾಳಿ ಜನರನ್ನು ಮೆತ್ತಗಾಗಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌