ಧಾರವಾಡ:
ಭಾನುವಾರ ನರಕ ಚತುರ್ದಶಿ ಆಗಿದ್ದು, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬಸಿದ ಶ್ಯಾವಿಗೆ ಪಾಯಿಸಾ ಉಣ್ಣುವುದು ಸಂಪ್ರದಾಯ. ಇನ್ನು, ಸೋಮವಾರ ಅಮವಾಸ್ಯೆ ಇದ್ದು ವಾಹನಗಳನ್ನು ತೊಳೆದು ಪೂಜೆ ಮಾಡಲಾಗುತ್ತದೆ. ಹಬ್ಬದ ಪ್ರಮುಖ ದಿನ ಪಾಢ್ಯೆ. ಮಂಗಳವಾರ ಇದನ್ನು ಆಚರಿಸುತ್ತಿದ್ದು, ರೈತರು, ವ್ಯಾಪಾರಸ್ಥರು, ಮಹಿಳೆಯರು-ಮಕ್ಕಳಾದಿಯಾಗಿ ಮೂರು ದಿನ ಹಬ್ಬದ ಸಂಭ್ರಮದಲ್ಲಿರುತ್ತಾರೆ.
ಉತ್ತರ ಕರ್ನಾಟಕದಲ್ಲಿ ದೀಪಾವಳಿಗೆ ವಿಶೇಷ ಮಹತ್ವವಿದೆ. ಕೃಷಿ ಮತ್ತು ಜಾನುವಾರುಗಳಿಗೆ ಸಂಬಂಧಿಸಿದ ಹಬ್ಬವಾಗಿದ್ದು, ದನ-ಕರುಗಳನ್ನು (ಹಟ್ಟಿ) ಪೂಜಿಸಲಾಗುತ್ತದೆ. ದೀಪಾವಳಿ ಪಾಡ್ಯದ ದಿನ ಬೆಳಗ್ಗೆ ಮಹಿಳೆಯರು ಮನೆ ಮುಂದೆ ಸೆಗಣಿಯಿಂದ ಪಾಂಡವರ ಪ್ರತಿಕೃತಿ ತಯಾರಿಸಿ ಪ್ರತಿಷ್ಠಾಪಿಸುತ್ತಾರೆ. ವನವಾಸ ಮುಗಿಸಿ ಮರಳಿದ ಪಾಂಡವರ ನೆನಪಿಗಾಗಿ ಹಾಗೂ ಸಮೃದ್ಧಿಗಾಗಿ ಈ ಆಚರಣೆ ಮಾಡಲಾಗುತ್ತದೆ. ಸೆಗಣಿ ಪಾಂಡವರಿಗೆ ಉತ್ತರಾಣಿ ಕಡ್ಡಿ, ಬಸವನ ಹೂವು ಮತ್ತು ಹೊಲ-ಗದ್ದೆಗಳ ಹೂವುಗಳಿಂದ ಅಲಂಕಾರ ಮಾಡಿ, ಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.ನಗರ ವಾಸಿಗಳು ಪಾಡ್ಯದ ದಿನ ಹೊಸ ವಾಹನಗಳಿಗೆ ಪೂಜೆ ಸಲ್ಲಿಸುವುದು, ಮನೆಯ ಮುಂದೆ ಬಣ್ಣ-ಬಣ್ಣದ ರಂಗೋಲಿ ಬಿಡಿಸಿ, ಮಾವಿನೆಲೆ ಹಾಗೂ ಬಾಳೆ-ತೆಂಗಿನ ಗರಿಗಳ ತೋರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಪ್ರತಿಯೊಬ್ಬರ ಮನೆಗೆ ವಿದ್ಯುತ್ ಅಲಂಕಾರವೇ ಚೆಂದ. ಜತೆಗೆ ಬಣ್ಣ-ಬಣ್ಣದ ತರಹೇವಾರಿ ಆಕಾಶ ಬುಟ್ಟಿ. ಹಾಗೆಯೇ, ಪಟಾಕಿ ಸಿಡಿಸಿ ಮಕ್ಕಳು ಹಬ್ಬಕ್ಕೆ ಮತ್ತಷ್ಟು ಸಂತೋಷ ಪಡುತ್ತಾರೆ.