ಧಾರವಾಡ:
ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಖಾಸಗಿ ಸಿಹಿ ಉತ್ಪದನಾ ಕಂಪನಿಗಳ ಮಾರುಕಟ್ಟೆಯ ಪೈಪೋಟಿ ಮಧ್ಯೆಯೂ ದಸರಾ-ದೀಪಾವಳಿಯ ಹಬ್ಬದಲ್ಲಿ ಧಾರವಾಡ ಹಾಲು ಒಕ್ಕೂಟವು ನಂದಿನಿ ಬ್ರ್ಯಾಂಡ್ ಅಡಿ ದಾಖಲೆಯ 19 ಟನ್ ಸಿಹಿ ತಿನಿಸು ಮಾರಾಟ ಮಾಡಿದೆ.ಹಲವು ಪ್ರತಿಷ್ಠಿತ ಪೇಢಾ ಕಂಪನಿಗಳು ಪೇಢೆ ಮಾತ್ರವಲ್ಲದೇ ನೂರಾರು ಸಿಹಿ ಖಾದ್ಯಗಳನ್ನು ದಶಕಗಳಿಂದ ಮಾರುಕಟ್ಟೆಯಲ್ಲಿ ತಮ್ಮದೇ ಬ್ರಾಂಡ್ ಅಡಿ ಮಾರಾಟ ಮಾಡುತ್ತಿವೆ. ಇಂತಹ ಪ್ರತಿಷ್ಠಿತ ಕಂಪನಿಗಳ ಮಧ್ಯೆ ಧಾರವಾಡ ಹಾಲು ಒಕ್ಕೂಟ ದಸರಾ-ದೀಪಾವಳಿ ವೇಳೆ 19 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿ ಅಂದಾಜು ₹ 80 ಲಕ್ಷ ವಹಿವಾಟು ನಡೆಸಿದೆ.
ಒಕ್ಕೂಟದ ಅಧಿಕಾರಿಗಳು ಈ ಬಾರಿ ಇಷ್ಟೊಂದು ಪ್ರಮಾಣದ ಸಿಹಿ ಉತ್ಪನ್ನಗಳ ಬೇಡಿಕೆ ಬರುತ್ತದೆ ಅಂದುಕೊಂಡಿರಲಿಲ್ಲ. ಹೀಗಾಗಿ 15 ಟನ್‌ಗಳ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ದಸರಾ ಮುಂಚಿನಿಂದಲೂ ಶುರುವಾದ ಬೇಡಿಕೆ ದೀಪಾವಳಿ ಮುಗಿದರೂ ನಿಂತಿರಲಿಲ್ಲ. ಹೀಗಾಗಿ ಹಗಲು-ರಾತ್ರಿ ಎನ್ನದೇ ಬಗೆ ಬಗೆಯ ಸಿಹಿ ಖಾದ್ಯ ತಯಾರಿಸಿದ್ದೇವೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಧಾರವಾಡ ಪೇಢಾ, ಬಿಳಿ ಪೇಢಾ, ಮೈಸೂರು ಪಾಕ, ಹೆಸರಿನ ಉಂಡೆ ಸೇರಿದಂತೆ ವಿವಿಧ ಸಿಹಿ ಹಾಗೂ ಖಾರದ ಉತ್ಪನ್ನಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೇ ಜನರ ಆರೋಗ್ಯಕ್ಕೆ ಅನುಕೂಲಕರ ತಿಂಡಿಗಳಿರುವ ಕಾರಣ ಜನರಿಂದ ಬೇಡಿಕೆ ಜಾಸ್ತಿ ಇದೆ. ಧಾರವಾಡದಲ್ಲಿ ಖಾಸಗಿಯಾಗಿ ಪ್ರತಿಷ್ಠಿತ ಕಂಪನಿಗಳಿದ್ದು, ಈ ಸ್ಪರ್ಧೆ ಮಧ್ಯೆಯೂ ಗುರಿ ಮೀರಿ ಸಿಹಿ ಉತ್ಪನ್ನಗಳ ಮಾರಾಟ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಧಾರವಾಡ ಹಾಲು ಒಕ್ಕೂಟವು ಹಾಲಿನ ಸಂಗ್ರಹದಲ್ಲಿಯೂ ಸಾಧನೆ ಮಾಡಿದೆ. ಮೂರೂ ಜಿಲ್ಲೆಗಳಿಂದ ದಿನವಹಿ ಸರಾಸರಿ 1,60,391 ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಆದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,23,023 ಲೀಟರ್ ಹಾಲು ಶೇಖರಣೆಯಾಗಿತ್ತು. ಇಂತಹ ಸಾಧನೆಯ ಜತೆಗೆ ಈ ಬಾರಿ ಎರಡೂ ಹಬ್ಬಗಳಲ್ಲಿ ಅತಿ ಹೆಚ್ಚು ಸಿಹಿ ಮಾರಾಟ ಮಾಡುವ ಮೂಲಕ ಒಕ್ಕೂಟ ಖಾಸಗಿ ಕಂಪನಿಗಳಿಗೂ ಸವಾಲೆಸೆದಿದೆ. ಇದು ಹೈನುಗಾರಿಕೆ ಮಾಡುವವರಿಗೂ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ.ಧಾರವಾಡ ಒಕ್ಕೂಟದ ಮುಖ್ಯ ಡೇರಿಯಿಂದ ದಸರಾದಿಂದ ಅ. 25ರ ವರೆಗೆ ಧಾರವಾಡ ಪೇಢಾ 6218 ಕೆಜಿ, ನಂದಿನಿ ವೈಟ್ ಪೇಢಾ 2702 ಕೆ.ಜಿ., 556 ಕೆಜಿ ಹೆಸರು ಕಾಳು ಲಾಡು ಸೇರಿ 11,325 ಕೆಜಿ ವಿವಿಧ ಸಿಹಿ ಉತ್ಪನ್ನ ಮಾರಾಟ ಮಾಡಿದರೆ, ಒಕ್ಕೂಟದ ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಡಿಪೋದಿಂದ 7839 ಕೆಜಿ ವಿವಿಧ ಸಿಹಿ ಉತ್ಪನ್ನ ಸೇರಿ ಒಟ್ಟು 19 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಲಾಗಿದೆ.ಡಿ.ಟಿ. ಕಳಸದ ವ್ಯವಸ್ಥಾಪಕ ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ