ಧಾರಾಕಾರ ವರ್ಷಧಾರೆಗೆ ಧಾರವಾಡ ತತ್ತರ!

KannadaprabhaNewsNetwork |  
Published : Jun 13, 2025, 02:59 AM IST
ರಕ್ಷಣಾಕಾರ್ಯ | Kannada Prabha

ಸಾರಾಂಶ

ನಿರಂತರ ಮಳೆಯಿಂದಾಗಿ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ ಮೂರು ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಧಾರವಾಡ: ಹವಾಮಾನ ಇಲಾಖೆಯ ರೆಡ್‌ ಅಲರ್ಟ್‌ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿ ಅನಾಹುತವನ್ನೇ ಸೃಷ್ಟಿಸಿದೆ.

ನಿರಂತರ ಮಳೆಯಿಂದ ಹಾನಿಯಾಗುವ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಜನ- ಜಾನುವಾರುಗಳನ್ನು ರಕ್ಷಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹುಬ್ಬಳ್ಳಿ ತಾಲೂಕಿನ ಇಂಗಳಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಣ್ಣಿಹಳ್ಳಕ್ಕೆ ನೀರು ಬಂದು ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾರರಾದ ಇಂಗಳಳ್ಳಿ ಗ್ರಾಮದ ಹುಸೇನಸಾಬ ತಹಶೀಲ್ದಾರ, ಚನಬಸಪ್ಪ ಕುರಿ ಮತ್ತು ಮೌಲಾಸಾಬ ನದಾಫ ಅವರನ್ನು ಪೊಲೀಸ್ ಹಾಗೂ ಅಗ್ನಿಶಾಮಕ ತಂಡಗಳು ರಕ್ಷಣೆ ಮಾಡಿದವು. ಈ ಮೂವರಿಗೆ ಸೇರಿದ್ದ 470 ಕುರಿ ಮತ್ತು ಆಡುಗಳನ್ನು ಅಗ್ನಿಶಾಮಕ ಇಲಾಖೆಯವರ ಸಹಾಯದಿಂದ ಬೋಟ್ ಮೂಲಕ ಹೊರಗಡೆ ತಗೆದು ರಕ್ಷಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ ಹತ್ತಿರದ ಬೆಣ್ಣಿಹಳ್ಳದಲ್ಲಿ ಸಿಲುಕಿದ ಮೊರಬ ಗ್ರಾಮದ ಮೂರು ಜನರನ್ನು ರಕ್ಷಣೆ ಮಾಡಲಾಗಿದ್ದು ಮತ್ತು 300 ಕುರಿಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.

45 ಮನೆಗಳಿಗೆ ಹಾನಿ: ನಿರಂತರ ಮಳೆಯಿಂದಾಗಿ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ ಮೂರು ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಅಚ್ಚು-ಕಟ್ಟು ಪ್ರದೇಶದ ಪ್ರಸ್ತುತ ಹಾಗೂ ಮುಂದಿನ ಒಂದು ವಾರ ಸಂಭವಿಸಬಹುದಾದ ಮಳೆ ಪ್ರಮಾಣದ ವಿವರಗಳನ್ನು ರಾಜ್ಯ ಹವಾಮಾನ ಇಲಾಖೆಯಿಂದ ಪಡೆದುಕೊಂಡು ತಾಲೂಕು ಅಧಿಕಾರಿ, ಸಿಬ್ಬಂದಿಗಳಿಗೆ ಈ ಕುರಿತು ಜಾಗೃತಿ ಹಾಗೂ ಮುನ್ನೆಚ್ಚರಿಕೆ ವಹಿಸಲು ಪ್ರಾಧಿಕಾರದಿಂದ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ದಡದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಕುರಿತು ಡಂಗುರ ಸಾರುವ ಮೂಲಕ ಹಾಗೂ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಸಹಾಯವಾಣಿ ಸಂಪರ್ಕಿಸಿ: ಮಳೆಯಿಂದ ಅವಾಂತರ ಸೃಷ್ಟಿಯಾದರೆ ಜಿಲ್ಲೆಯ ಜನರು ಈ ದೂರವಾಣಿ ಸಂಪರ್ಕಿಸಬಹುದು. ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ 0836-2445508 ಹಾಗೂ 1077, ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿ 0836-2233860, ಅಳ್ಳಾವರ 0836-2385544, ಹುಬ್ಬಳ್ಳಿ ನಗರ 0836-2358035, ಕಲಘಟಗಿ 08370-284535, ಕುಂದಗೋಳ 08304-290239, ನವಲಗುಂದ - 08380-229240, ಅಣ್ಣಿಗೇರಿ 8618442759 ಸಂಪರ್ಕಿಸಬಹುದು. ಜತೆಗೆ ಸಾರ್ವಜನಿಕರು ವಾಟ್ಸಆ್ಯಪ್ ಸಂದೇಶದ ಮೂಲಕ ಸಹಾಯವಾಣಿ 8277803778 ಗೆ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.ಇಂದು ಶಾಲಾ-ಕಾಲೇಜುಗಳಿಗೆ ರಜೆ: ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಜೂ. 13ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜೂ. 13 ರಂದು ಶಾಲಾ, ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಗುರುವಾರ ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿತ್ತು. ಮಳೆಯೂ ನಿರಂತರವಾಗಿ ಆಗುತ್ತಿರುವುದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಇಂದು ಲಾಡ್ ಜಿಲ್ಲಾ ಪ್ರವಾಸ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಉದ್ದೇಶದಿಂದ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೂ. 13ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ