33 ಎಕರೆ ನಿವೇಶನ ಅಭಿವೃದ್ಧಿಗೆ 30.2 ಕೋಟಿ ರು. ನೀಡಲು ಶಾಸಕರಿಂದ ವಸತಿ ಸಚಿವರಿಗೆ ಪ್ರಸ್ತಾವನೆ

KannadaprabhaNewsNetwork |  
Published : Jun 13, 2025, 02:58 AM IST
11ಕೆಎಂಎನ್ ಡಿ13 | Kannada Prabha

ಸಾರಾಂಶ

ಕಳೆದ ನಾಲ್ಕು ದಶಕಗಳ ಹಿಂದೆ ಶಾಂತಿ ಕಾಲೇಜು ಮುಂಭಾಗ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 33 ಎಕರೆ ಪ್ರದೇಶವನ್ನು ಮೀಸಲಿಡಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ ಪರಿಣಾಮ ನಿವೇಶನ ಹಂಚಿಕೆ ಮರೀಚಿಕೆಯಾಗಿಯೇ ಉಳಿದಿತ್ತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದ ನಿವೇಶನ ಅಭಿವೃದ್ಧಿಗೆ 30.2 ಕೋಟಿ ರು. ನೀಡುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಸ್ತಾವನೆ ಸಲ್ಲಿಸಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸಮಸ್ಯೆ ಬಹುಬೇಗ ಬಗೆಹರಿಯುವ ಭರವಸೆ ಫಲಾನುಭವಿಗಳಿಗೆ ಮೂಡಿಸಿದೆ.

ಕಳೆದ ನಾಲ್ಕು ದಶಕಗಳ ಹಿಂದೆ ಶಾಂತಿ ಕಾಲೇಜು ಮುಂಭಾಗ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 33 ಎಕರೆ ಪ್ರದೇಶವನ್ನು ಮೀಸಲಿಡಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ ಪರಿಣಾಮ ನಿವೇಶನ ಹಂಚಿಕೆ ಮರೀಚಿಕೆಯಾಗಿಯೇ ಉಳಿದಿತ್ತು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ನ್ಯಾಯಾಲಯದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದು, ಪುರಸಭೆ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ನಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೇಶನ ಅಭಿವೃದ್ಧಿಗೆ ಹಣ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಿರುವುದರಿಂದ ಸದ್ಯದಲ್ಲಿಯೇ 545 ಫಲಾನುಭವಿಗಳಿಗೆ ನಿವೇಶನ ಹಂಚಿಕೆಯ ಭರವಸೆ ಮೂಡಿಸಿದ್ದಾರೆ.

ಈ ಬಗ್ಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, 33 ಎಕರೆ ನಿವೇಶನಕ್ಕೆ ರಸ್ತೆ, ಚರಂಡಿ, ವಿದ್ಯುತ್, ಯುಜಿಡಿ ಸೇರಿದಂತೆ ನಿವೇಶನದ ಮೂಲ ಸೌಲಭ್ಯ ಒದಗಿಸಲು 30.2 ಕೋಟಿ ರು. ಅನುದಾನ ನೀಡುವಂತೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪಟ್ಟಣದ ಮಾರೇಹಳ್ಳಿ ಸಮೀಪ 14 ಎಕರೆಯ ಆಶ್ರಯ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ನಕಾಶೆಯನ್ನು ಬದಲಾಯಿಸಿ ರಸ್ತೆ ನಿರ್ಮಿಸಿ ಯಾರಿಗೂ ವಂಚಿತವಾಗದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬದಲಾದ ಬಡಾವಣೆ ನಕಾಶೆಯನ್ನು ತಯಾರು ಮಾಡಿ ಅನುಮೋದಿಸಿ ಅದರ ಮೂಲಕ ಪ್ರತ್ಯೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೊಳಗೇರಿ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡಬೇಕೆಂಬ ಮನವಿಗೆ ಸ್ಪಂದಿಸಿ ವಿಶೇಷ ಅನುದಾನದ ಜೊತೆಗೆ ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಸುಮಾರು 10 ಕೋಟಿ ರು. ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದಾರೆಂದು ಹೇಳಿದರು.

ಲಿಡ್ಕರ್ ಮನೆಗಳ ಫಲಾನುಭವಿಗಳ ವಂತಿಕೆ ಜೊತೆಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬಳಕೆ ಮಾಡಿಕೊಳ್ಳಬೇಕೆಂಬ ಮನವಿಗೆ ಸಚಿವರು ಪುರಸ್ಕರಿಸಿದ್ದಾರೆ. ಜೊತೆಗೆ ಹಲಗೂರು, ಮಳವಳ್ಳಿ ಹಾಗೂ ಕಿರುಗಾವಲು ಗ್ರಾಮಗಳಲ್ಲಿ ಶಾದಿ ಮಹಲ್ ನಿರ್ಮಿಸಲು ಒತ್ತು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ರಾಜೀವ್ ಗಾಂಧಿ ಕಾರ್ಪೋರೇಷನ್ ವ್ಯವಸ್ಥಾಪಕ ಪರಶುರಾಂ ಶಿನ್ನಾಳಕರ್, ಲಿಡ್ಕರ್ ಎಂ.ಡಿ ವಸುಂದುರ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?