ವಿಜಯನಗರ ಭಾರೀ ಮಳೆ: 35 ಹೆಕ್ಟೇರ್‌ ಬೆಳೆ ಹಾನಿ, 2 ಮನೆ ಕುಸಿತ

KannadaprabhaNewsNetwork |  
Published : Jun 13, 2025, 02:55 AM IST
12ಎಚ್‌ಪಿಟಿ1- ಹಂಪಿ ಪ್ರದೇಶದಲ್ಲಿ ಬಾಳೆ ಬೆಳೆಯಲ್ಲಿ ಮಳೆ ನೀರು ನುಗ್ಗಿದೆ. | Kannada Prabha

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ, ಗುರುವಾರ ಸುರಿದ ಧಾರಾಕಾರ ಮಳೆಗೆ 35 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎರಡು ಮನೆಗಳು ಬಿದ್ದಿವೆ. ಇನ್ನೂ ಕಮಲಾಪುರ ಕೆರೆ ಕೋಡಿ ಬಿದ್ದಿದ್ದು, ರೈತರ ಗದ್ದೆಗಳಿಗೆ ನೀರು ಹರಿಯುತ್ತಿದೆ.

ಕಮಲಾಪುರ ಕೆರೆ ಕೋಡಿ । ತುಂಬಿ ಹರಿದ ಹಳ್ಳ, ಕೊಳ್ಳ, ಜನಜೀವನ ಅಸ್ತವ್ಯಸ್ತ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ, ಗುರುವಾರ ಸುರಿದ ಧಾರಾಕಾರ ಮಳೆಗೆ 35 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎರಡು ಮನೆಗಳು ಬಿದ್ದಿವೆ. ಇನ್ನೂ ಕಮಲಾಪುರ ಕೆರೆ ಕೋಡಿ ಬಿದ್ದಿದ್ದು, ರೈತರ ಗದ್ದೆಗಳಿಗೆ ನೀರು ಹರಿಯುತ್ತಿದೆ.

ಜಿಲ್ಲೆಯಲ್ಲಿ 3 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 22.6 ಮಿಮೀ ಮಳೆಯಾಗಿದೆ. ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜೂ.13ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಜಿಲ್ಲೆಯ ಹರಪನಹಳ್ಳಿಯಲ್ಲಿ 20 ಹೆಕ್ಟೇರ್‌ ಮೆಕ್ಕೆಜೋಳ ಮತ್ತು ರಾಗಿ ಬೆಳೆ ಹಾನಿಗೀಡಾಗಿದ್ದರೆ, ಕೊಟ್ಟೂರಿನಲ್ಲಿ 15 ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಇನ್ನೂ ಹಂಪಿ, ಕಮಲಾಪುರ ಪ್ರದೇಶದಲ್ಲಿ ಬಾಳೆ, ಕಬ್ಬು ಹಾಗು ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

ವಿಜಯನಗರ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ನಗರದಲ್ಲಿ ಜನಜೀವನ ಕೂಡ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ರಸ್ತೆಗಳಲ್ಲಿ ನೀರು ನಿಂತಿದೆ. ಮಳೆ ನೀರು ನಿಂತಿರುವ ಹಿನ್ನೆಲೆ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನ ಕಡ್ಡಿರಾಂಪುರ, ವೆಂಕಟಾಪುರ ಕ್ಯಾಂಪ್‌, ಬುಕ್ಕಸಾಗರ ಭಾಗದಲ್ಲೂ ಕೆಲ ಮನೆಗಳಿಗೆ ನೀರು ನುಗ್ಗಿದೆ. ಕೆರೆ ತಾಂಡಾ ಹಾಗೂ ಹೊಸಮಲಪನಗುಡಿ ಗ್ರಾಮದ ನಡುವಿನ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿದ್ದು, ರೈತರು ಹಾಗು ಕೃಷಿ ಕೂಲಿಕಾರ್ಮಿಕರು ಹೊಲ, ಗದ್ದೆಗಳಿಗೆ ತೆರಳಲು ಪರದಾಡುವಂತಾಗಿದೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಗಳಿಗೂ ನೀರು ಹರಿದು ಬರತೊಡಗಿದೆ. ಈಗಾಗಲೇ ಜಿಲ್ಲಾಡಳಿತ ಕೂಡ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ