ನಿಮ್ಹಾನ್ಸ್‌ನಿಂದ 2 ತಾಲೂಕಲ್ಲಿ ಯೋಗ ಚಿಕಿತ್ಸಾ ಕೇಂದ್ರ

KannadaprabhaNewsNetwork |  
Published : Jun 13, 2025, 02:53 AM ISTUpdated : Jun 13, 2025, 02:54 AM IST
ನಿಮ್ಹಾನ್ಸ್‌  | Kannada Prabha

ಸಾರಾಂಶ

ಮಾನಸಿಕ ಆರೋಗ್ಯ ಸಮಸ್ಯೆಯನ್ನು ಯೋಗದ ಮೂಲಕ ಪರಿಹರಿಸುವ ಚಿಕಿತ್ಸಾ ಪದ್ಧತಿಯನ್ನು ವ್ಯಾಪಕವಾಗಿಸಲು ಮುಂದಾಗಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಆರಂಭಿಕವಾಗಿ ರಾಜ್ಯದ ಎರಡು ತಾಲೂಕುಗಳಲ್ಲಿ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆ ಪ್ರಯೋಗಕ್ಕೆ ಮುಂದಾಗಿದೆ.

ಮಯೂರ್ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾನಸಿಕ ಆರೋಗ್ಯ ಸಮಸ್ಯೆಯನ್ನು ಯೋಗದ ಮೂಲಕ ಪರಿಹರಿಸುವ ಚಿಕಿತ್ಸಾ ಪದ್ಧತಿಯನ್ನು ವ್ಯಾಪಕವಾಗಿಸಲು ಮುಂದಾಗಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಆರಂಭಿಕವಾಗಿ ರಾಜ್ಯದ ಎರಡು ತಾಲೂಕುಗಳಲ್ಲಿ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆ ಪ್ರಯೋಗಕ್ಕೆ ಮುಂದಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ, ತುಮಕೂರಿನ ತುರುವೇಕೆರೆಯಲ್ಲಿ ಮುಂದಿನ ಮೂರು ವರ್ಷ ಯೋಗ ಚಿಕಿತ್ಸೆಯನ್ನು ನಿಮ್ಹಾನ್ಸ್‌ ಪ್ರಾಯೋಗಿಕವಾಗಿ ನಡೆಸಲಿದೆ. ಇದಕ್ಕಾಗಿ ‘ಯೆಸ್‌’ (ಯೋಗ ಬೇಸ್ಡ್‌ ಎಕ್ಸ್‌ಟೆನ್ಷನ್‌ ಸರ್ವೀಸಸ್‌) ಎಂಬ ಯೋಜನೆ ರೂಪಿಸಿದೆ. ಭವಿಷ್ಯದಲ್ಲಿ ಇತರೆ ಜಿಲ್ಲೆ, ತಾಲೂಕುಗಳಲ್ಲಿ ವಿಸ್ತರಿಸಲು ನಿರ್ಧರಿಸಿದೆ.

ಕಳೆದ 10 ವರ್ಷದಿಂದ ನಿಮ್ಹಾನ್ಸ್‌ ಸಂಯೋಜಿತ ಚಿಕಿತ್ಸಾ ವಿಭಾಗದ ಯೋಗ ಕೇಂದ್ರದಲ್ಲಿ ಮಾನಸಿಕ ಕಾಯಿಲೆಗಳಿಗೆ ಯೋಗ ಚಿಕಿತ್ಸೆ ಕುರಿತು ಸಂಶೋಧನೆ ನಡೆಯುತ್ತಿದೆ. ಭಾವನೆ, ವರ್ತನೆ ಮೇಲೆ ಪರಿಣಾಮ ಬೀರುವ ಸ್ಕಿಜೋಫ್ರೇನಿಯಾ, ಉದ್ವೇಗ, ಖಿನ್ನತೆ ಸೇರಿ ಸಾಕಷ್ಟು ಸಮಸ್ಯೆಗೆ ವಿಶೇಷ ಯೋಗ ಚಿಕಿತ್ಸೆ ಸಂಯೋಜಿಸಿದೆ. ಪ್ರತಿ ತಿಂಗಳು ಸುಮಾರು 3000 ಮಾನಸಿಕ ಸಮಸ್ಯೆಯುಳ್ಳವರು ಈ ಯೋಗಾಧಾರಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕಷ್ಟು ಮಂದಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಿದ್ದು, ಗುಣಮುಖರಾಗಿದ್ದಾರೆ.

ಹೀಗಾಗಿ ಆಸ್ಪತ್ರೆ ಹಂತದಿಂದ ಸಮುದಾಯ ಮಟ್ಟದಲ್ಲಿ ಯೋಗ ಚಿಕಿತ್ಸೆಯ ಪ್ರಯೋಗ ನಡೆಸಲು ನಿಮ್ಹಾನ್ಸ್‌ ಮುಂದಾಗಿದೆ. 2009ರಿಂದ ತುರುವೇಕೆರೆ, ತೀರ್ಥಹಳ್ಳಿ ತಾಲೂಕಲ್ಲಿ ನಿಮ್ಹಾನ್ಸ್‌ನಿಂದ ಮಾನಸಿಕ ಆರೋಗ್ಯ ಚಿಕಿತ್ಸಾ ಯೋಜನೆಗಳು ನಡೆಯುತ್ತಿವೆ. ತೀರ್ಥಹಳ್ಳಿಯಲ್ಲಿ 325 ಸ್ಕಿಜೋಫ್ರೇನಿಯಾ ಸೇರಿ 2000 ಜನರಿಗೆ ಮಾನಸಿಕ ಚಿಕಿತ್ಸೆ ನೀಡಲಾಗಿದೆ. ತುರುವೇಕೆರೆಯಲ್ಲಿ 3500ಕ್ಕೂ ಹೆಚ್ಚಿನವರಿಗೆ ಚಿಕಿತ್ಸೆ ಒದಗಿಸಲಾಗಿದೆ. ಇವೆರಡು ತಾಲೂಕಲ್ಲಿ ಇದೀಗ ಯೋಗ ಚಿಕಿತ್ಸೆಯ ಪ್ರಯೋಗವನ್ನು ನಿಮ್ಹಾನ್ಸ್‌ ನಡೆಸಲಿದೆ.

ನಿಮ್ಹಾನ್ಸ್‌ ಯೋಗ ವಿಭಾಗದ ಸಹ ಸಂಶೋಧಕ ಡಾ.ಹೇಮಂತ್‌ ಭಾರ್ಗವ್‌ ಮಾತನಾಡಿ, ಯೋಗ ಯಾವ ರೀತಿ ಮೆದುಳಿನ ರಾಸಾಯನಿಕ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತಿದೆ ಎಂಬುದರ ಮೇಲೆ ಹತ್ತು ವರ್ಷದಿಂದ ಸಂಶೋಧನೆ ನಡೆಸಿದ್ದೇವೆ. ಸಾಮಾನ್ಯರು ಮಾಡುವ ಯೋಗಕ್ಕಿಂತ ನಾವು ಚಿಕಿತ್ಸಾ ರೂಪದಲ್ಲಿ ಮಾಡಿಸುವ ಯೋಗ ಭಿನ್ನ ಸ್ವರೂಪದಲ್ಲಿದೆ. ಯೋಗವನ್ನು ಟ್ಯಾಬ್ಲೆಟ್‌ನಂತೆ ಗುಣವಾದ ಬಳಿಕ ಬಿಟ್ಟುಬಿಡುತ್ತೇವೆ ಎಂದರಾಗಲ್ಲ, ಬದಲಾಗಿ ಜೀವನ ಪದ್ಧತಿಯ ಭಾಗವಾಗಿ ಮುಂದುವರಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಂಶೋಧನೆ ಆಧರಿಸಿ ಮಾನಸಿಕ ಆರೋಗ್ಯದಲ್ಲಿ ವಿಜ್ಞಾನ ಮತ್ತು ಯೋಗ ಎಂಬ ಗ್ರಂಥ ರೂಪಿಸಲಾಗಿದೆ. ಉದಾಹರಣೆಯಾಗಿ ಖಿನ್ನತೆಗೆ ಕಪಾಲಬಾತಿ, ಓಂಕಾರ ಪಠಣ, ಉದ್ವೇಗಕ್ಕೆ ಭ್ರಮರಿ ಪ್ರಾಣಾಯಾಮ, ಸ್ಕಿಜೋಫ್ರೇನಿಯಾಗೆ ಸೂರ್ಯನಮಸ್ಕಾರ, ಪಾದಹಸ್ತಾಸನ ರೀತಿಯ ಪ್ರಾಣಾಯಾಮ ಸಂಯೋಜಿಸಲಾಗಿದೆ ಎಂದು ವಿವರಿಸಿದರು.

‘ಯೆಸ್‌’ ಯೋಜನೆಯ ಮುಖ್ಯಸ್ಥೆ ಡಾ.ಆರತಿ ಜಗನ್ನಾಥನ್‌ ಮಾತನಾಡಿ, ಪ್ರಾಥಮಿಕವಾಗಿ ಮೊದಲ 6 ತಿಂಗಳು ಒಂದು ತಾಲೂಕಿನ ಕಾಯಿಲೆಯುಳ್ಳವರಿಗೆ ಮಾತ್ರ ಚಿಕಿತ್ಸೆ ನೀಡಿ, ಇನ್ನೊಂದು ತಾಲೂಕನ್ನು ಹಾಗೆಯೇ ಬಿಡಲಾಗುವುದು. ನಂತರ ಇನ್ನೊಂದು ತಾಲೂಕಿನಲ್ಲಿ ಚಿಕಿತ್ಸೆ ನೀಡಲಾಗುವುದು. ಇದರಿಂದ ತುಲನಾತ್ಮಕ ಅಧ್ಯಯನ ಸಾಧ್ಯವಾಗುತ್ತದೆ ಎಂದರು.ಯೋಗ ಚಿಕಿತ್ಸೆಯನ್ನು ಯಾವ ರೀತಿ ಕೊಡಬೇಕು, ಅಂದರೆ ವ್ಯಕ್ತಿಗತವಾಗಿ ಕಲಿಸಿಕೊಡಬೇಕೇ ಅಥವಾ ಟೆಲಿ ಯೋಗ ಮಾದರಿ ಅನುಸರಿಸಬೇಕೇ ಎಂದು ಶೀಘ್ರ ನಿರ್ಧರಿಸುತ್ತೇವೆ. ಆರು ಸೆಷನ್‌ಗಳಲ್ಲಿ ಚಿಕಿತ್ಸೆ ಕೊಡಲಾಗುವುದು. ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗೆ ರೋಗಿಗಳನ್ನು ಕರೆಸಿ ಮುಖಾಮುಖಿ ಸಮಾಲೋಚನೆ ನಡೆಸಿ ಆರೋಗ್ಯದ ಅಪ್‌ಡೇಟ್‌ ಪಡೆಯುತ್ತೇವೆ ಎಂದು ತಿಳಿಸಿದರು.

ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಯೋಗ ಚಿಕಿತ್ಸ ಪರಿಣಾಮಕಾರಿ. ಈವರೆಗೆ ಇದು ಆಸ್ಪತ್ರೆಮಟ್ಟದಲ್ಲಿ ನಡೆಸಲಾಗುತ್ತಿತ್ತು. ಶೀಘ್ರ ತೀರ್ಥಹಳ್ಳಿ, ತುರುವೇಕೆರೆಯಲ್ಲಿ ಯೋಗ ಚಿಕಿತ್ಸೆಯ ಪ್ರಯೋಗ ಆರಂಭಿಸಿ ಬಳಿಕ ರಾಜ್ಯದ ಇತರೆಡೆ ವಿಸ್ತರಿಸಲಾಗುವುದು.

ಡಾ. ಆರತಿ ಜಗನ್ನಾಥನ್‌, ಪ್ರಧಾನ ಸಂಶೋಧಕಿ, ಯೆಸ್‌ ಯೋಜನೆ, ನಿಮ್ಹಾನ್ಸ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ