ಗುಂಡ್ಲುಪೇಟೆ ಜೋಡಿ ರಸ್ತೆಯಲ್ಲಿ ಬೀಡಾಡಿ ದನ, ಕರುಗಳು ಮಲಗಿರುವುದು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪರಿಮಿತಿಯಲ್ಲಿ ಬೀಡಾಡಿ ದನಗಳ ಹಾವಳಿ ಮತ್ತೆ ಹೆಚ್ಚಿದ್ದು ಸವಾರರು ಹೈರಾಣರಾಗಿದ್ದಾರೆ. ಬೀಡಾಡಿ ದನ, ಕರುಗಳಿಗೆ ಕಡಿವಾಣ ಹಾಕಬೇಕಾದ ಪುರಸಭೆ ಹಾಗೂ ಪೊಲೀಸರು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 32 ಮಂದಿ ಸದಸ್ಯರು ಹಾಗೂ ಮುಖ್ಯಾಧಿಕಾರಿ ಇದ್ದರೂ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ತಪ್ಪಿಸಲು ಆಗಿಲ್ಲ. ಇನ್ನಾದರೂ ಪುರಸಭೆ ಹಾಗೂ ಪೊಲೀಸರು ಆಸಕ್ತಿ ವಹಿಸುವರೇ ಎಂದು ವಾಹನ ಸವಾರರ ಪ್ರಶ್ನೆಯಾಗಿದೆ. ಪಟ್ಟಣದ ನಡುವೆ ಮೈಸೂರು-ಊಟಿ ಹೆದ್ದಾರಿ ಹಾಗೂ ಚಾಮರಾಜನಗರ ರಸ್ತೆ, ಜೋಡಿ ರಸ್ತೆ ಬದಿಯಲ್ಲಿ ಸರ್ವೀಸ್ ರಸ್ತೆ ಇರದ ಕಾರಣ ಪಾದಚಾರಿಗಳು ಹೆದ್ದಾರಿಯಲ್ಲಿ ನಡೆದು ಹೋಗುವ ಸ್ಥಿತಿಯಿದೆ. ಹೆದ್ದಾರಿ ಬದಿಯಲ್ಲಿ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ನಡೆದು ಹೋಗುವಾಗ ಬೀಡಾಡಿ ದನಗಳು ಎಲ್ಲೆಂದರಲ್ಲಿ ದಿಢೀರ್ ನುಗ್ಗುವ ಕಾರಣ ವಾಹನಗಳು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ಕಳೆದ ತಿಂಗಳ ಹಿಂದೆ ಪಟ್ಟಣದ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬೀಡಾಡಿ ದನ ಕೊಂಬಿನಿಂದ ಗುದ್ದಿ ಗಾಯಗೊಳಿಸಿದೆ ಎಂದು ಬೈಕ್ ಸವಾರ ಹೇಳಿದ್ದಾರೆ.
ಪುರಸಭೆ ಎಚ್ಚೆತ್ತುಕೊಳ್ಳಲಿ:
ಪಟ್ಟಣದಲ್ಲಿ ಬೀಡಾಡಿ ದನಗಳು ಅಡ್ಡಾದಿಡ್ಡಿ ಓಡಾಟದಲ್ಲಿ ದಿಢೀರ್ ರಸ್ತೆಗೆ ನುಗ್ಗವ ಕಾರಣ ವಾಹನಗಳ ಸವಾರರು ಅಪಘಾತ ನಡೆವ ಸಂಭವ ಹೆಚ್ಚಿದೆ ಎಂದು ಪಟ್ಟಣದ ನಿವಾಸಿ ವೆಂಕಟೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜಿನ ಮಕ್ಕಳು ಸಂಚರಿಸುವ ಸಮಯದಲ್ಲಿ ಬೀಡಾಡಿ ದನಗಳ ತಪ್ಪಿಸಿಕೊಳ್ಳಲು ಹೋಗಿ ವಾಹನಗಳಿಂದ ಅಪಘಾತವಾದರೆ ಪುರಸಭೆ ಅಥವಾ ಪೊಲೀಸರು ಹೊಣೆ ಹೊರುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಸ್ಥಳೀಯ ಪೊಲೀಸರು ಕನಿಷ್ಠ ಜನನಿಬಿಡ ಸ್ಥಳಗಳಲ್ಲಿ ಓರ್ವ ಪೇದೆ ಕೂಡ ನಿಲ್ಲುತ್ತಿಲ್ಲ. ಊಟಿ ವೃತ್ತದ ಬಳಿ ಸಿಗ್ನಲ್ ಹಾಕಲಾಗಿದೆ. ಅಲ್ಲೂ ಪೊಲೀಸರು ಇರುವುದಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಮಡಹಳ್ಳಿ ವೃತ್ತ, ಕೋಡಹಳ್ಳಿ ವೃತ್ತ, ಕೆಆರ್‌ಸಿ ರಸ್ತೆಯಲ್ಲಿ ಜನಸಂದಣಿ ಸದಾ ಇರುತ್ತದೆ. ಆದರೂ ಪೊಲೀಸರು ನಿಯೋಜಿಸುವ ಕೆಲಸ ಸ್ಥಳೀಯ ಅಧಿಕಾರಿಗಳಿಂದ ಆಗಿಲ್ಲ. ಇನ್ನಾದರೂ ನೂತನ ಪೊಲೀಸ್ ಇನ್ಸ್‌ಪೆಕ್ಟರ್ ಕೆಲಸ ಮಾಡುವರೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.ಪಟ್ಟಣದಲ್ಲಿ ಬೀಡಾಡಿ ದನಗಳು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ನಿಜ. ಸ್ಥಳೀಯ ಪೊಲೀಸರೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುತ್ತೇವೆ.
-ಎಸ್.ಶರವಣ, ಮುಖ್ಯಾಧಿಕಾರಿ, ಗುಂಡ್ಲುಪೇಟೆಪಟ್ಟಣದ ವ್ಯಾಪ್ತಿಯೊಳಗೆ ಹೆದ್ದಾರಿಗಳಲ್ಲಿ ಬೀಡಾಡಿ ದನ, ಕರುಗಳು ನಿಲ್ಲುತ್ತಿವೆ. ಈ ಸಂಬಂಧ ಪುರಸಭೆಗೆ ಪತ್ರ ಬರೆದು ದನ, ಕರುಗಳು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಲು ನಾನು ಕೂಡ ಮಾತನಾಡುತ್ತೇನೆ.-ಎನ್.ಜಯಕುಮಾರ್, ಪಿಐ, ಗುಂಡ್ಲುಪೇಟೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.