ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ 136 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಸಮಾರಂಭದಲ್ಲಿ ಹಾವೇರಿ ಗೆಳೆಯರ ಬಳಗದ ಅಧ್ಯಕ್ಷ ಡಾ. ಸುದೀಪ ಪಂಡಿತ್ ಅವರಿಗೆ ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿಯನ್ನು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಪ್ರದಾನ ಮಾಡಿದರು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕನ್ನಡ ನೆಲ, ಭಾಷೆ ವಿಷಯದಲ್ಲಿ ಹೋರಾಟಕ್ಕೆ ಅಣಿಯಾದ ಕರ್ನಾಟಕ ವಿದ್ಯಾವರ್ಧಕ ಸಂಘ ನಿರಂತರವಾಗಿ ಕನ್ನಡ ಪರ ಹೋರಾಟ ಮಾಡಿದೆ. ಅದರಂತೆ ಕನ್ನಡ ಕಟ್ಟುವ ಕೆಲಸ ಮಾಡಿದವರನ್ನು ಗುರುತಿಸಿದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು, ಶಶಿಧರ ತೋಡಕರ, ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ಮಹೇಶ ಹೋರಕೇರಿ ಇತರರಿದ್ದರು.ವಿವಿಧ ಕಾರ್ಯಕ್ರಮಗಳು: ಜು. 21ರ ಸಂಜೆ 5.30ಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಭಾನು ಮುಷ್ತಾಪ್ ಕಥೆಗಳಾಧರಿಸಿದ ಮಾಯಾಮೃಗ, ಎದೆಯ ಹಣತೆ ನಾಟಕ ಜನಮನದಾಟವು ಅಭಿನಯ ಮಾಡಲಿದೆ. ಜು. 22ಕ್ಕೆ ಶ್ರೀನಿವಾಸ ವೈದ್ಯರ ಕಥೆ ಆಧಾರಿತ ಬಾಸಿಂಗ ಬಲ, ಜು. 23ರ ಸಂಜೆ 5.30ಕ್ಕೆ ಡಾ. ನಿಂಗು ಸೊಲಗಿ ಅವರ ನನ್ನಿನ್ನ ನಗೆ ನೋಡಿ ಪ್ರೇಮ ಪತ್ರಗಳ ಕೃತಿಯರಂಗ ಪ್ರಯೋಗ ದಾಂಪತ್ಯ ಗೀತ ನಾಟಕ ಪ್ರದರ್ಶನ ನಡೆಯಲಿದೆ. ಸಮಾರಂಭದಲ್ಲಿ ಮೂರು ದಿನಗಳ ಕಾಲ ಕಲಾವಿದರಿಂದ ಸುಗಮ ಸಂಗೀತ ಜರುಗಲಿದೆ.
ಜು. 26ರ ಸಂಜೆ 5.30ಕ್ಕೆ ₹50 ಸಾವಿರ ನಗದು ಒಳಗೊಂಡ ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಶಾ.ಮಂ. ಕೃಷ್ಣರಾಯ ಅವರಿಗೆ ಕವಿವಿಯ ಕುಲಪತಿ ಡಾ. ಎ.ಎಂ. ಖಾನ್ ಪ್ರದಾನ ಮಾಡಲಿದೆ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ.