ಕನ್ನಡಪ್ರಭ ವಾರ್ತೆ ನಂಜನಗೂಡು
ಸೋಮವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀರು ಇಲ್ಲದ ಆಸ್ಪತ್ರೆಯ ದುಸ್ಥಿತಿ ಸಂಬಂಧ, ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಡಿಎಚ್ಓ ಸಮ್ಮುಖದಲ್ಲಿ ಸಭೆ ನಡೆಸಿದ ನಂತರ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಸೋಮವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀರಿನ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದರಿಂದ ಬೆಳಗಿನಿಂದ ಸಂಜೆವರೆಗೂ ನೀರು ಇರಲಿಲ್ಲ, ಆದರೆ ಕಾಮಗಾರಿ ಮುಗಿದ ನಂತರವೂ ಸಹ ನೀರು ಸರಬರಾಜು ಮಾಡದೇ ಇರುವುದು ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಆದ್ದರಿಂದ ಗ್ರೂಪ್ ಡಿ ನೌಕರರಾದ ಲಕ್ಷ್ಮಿ, ವೆಂಕಟೇಶ್ ಅವರನ್ನು ಅಮಾನತುಗೊಳಿಸಲಾಗಿದೆ, ಜೊತೆಗೆ ರಾತ್ರಿ ಹತ್ತು ಗಂಟೆಯಾದರೂ ರಾತ್ರಿ ಪಾಳಿಯ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿರುವುದು, ನಾಚಿಕೆಗೇಡಿನ ಸಂಗತಿಯಾಗಿದೆ, ವೈದ್ಯೆ ಇರ್ಫಾನ್ ಖಾದ್ರಿ, ನರ್ಸಿಂಗ್ ಸಿಬ್ಬಂದಿ ಪುಟ್ಟರತ್ನ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ, ಆಸ್ಪತ್ರೆಯ ಆಡಳಿತ ಅಧಿಕಾರಿ ನಾಗರಾಜು ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಆಸ್ಪತ್ರೆಯ ಸೇವೆಯಲ್ಲಿ ಸುಧಾರಣೆ ಕಾಣದಿದ್ದಲ್ಲಿ ಅವರ ಮೇಲು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ನಾಮಫಲಕ ಅಳವಡಿಸಿ ಪ್ರತಿನಿತ್ಯ ಪಾಳಿಯ ಆಧಾರದ ಮೇಲೆ ಕರ್ತವ್ಯ ನಿರತ ವೈದ್ಯರು, ಮತ್ತು ನರ್ಸ್ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ಹೆಸರು ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು, ಅಲ್ಲದೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಟಿಎಚ್ಒ ಮತ್ತು ಡಿಎಚ್ಒ ಅವರ ದೂರವಾಣಿ ಸಂಖ್ಯೆಯನ್ನು ನಮೂದಿಸಿ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ, ಒಂದು ವೇಳೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ನೇರವಾಗಿ ಸಾರ್ವಜನಿಕರು ನನ್ನ ಗಮನಕ್ಕೆ ತರುವಂತೆ ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಟಿಎಚ್ಒ ಈಶ್ವರ್ ಕಾನಟ್ಕೆ ಇದ್ದರು.