ಕನ್ನಡಪ್ರಭ ವಾರ್ತೆ ಹನೂರು
ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಂಸದ ದಿ.ಆರ್ ಧ್ರುವನಾರಾಯಣ ರವರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿ.ಆರ್ ಧ್ರುವನಾರಾಯಣ ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎರಡು ಅವಧಿಗೆ ಸಂಸದರಾಗಿದ್ದ ಆರ್.ಧ್ರುವನಾರಾಯಣರವರು ಇಡೀ ದೇಶದಲ್ಲಿಯೇ ಮಾದರಿ ಸಂಸದರಾಗಿದ್ದರು. ರಾಜ್ಯದ ನಂಬರ್ ಒನ್ ಸಂಸದರಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದರು. ದೇಶದಲ್ಲಿಯೇ ಸದ್ದು ಮಾಡಿದ್ದ ಸುಳ್ವಾಡಿ ಮಾರಮ್ಮ ವಿಷಪ್ರಸಾದ ಪ್ರಕರಣ ನಡೆದ ಸಂದರ್ಭದಲ್ಲಿ ಸಂಸತ್ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿ ಮೃತಪಟ್ಟಿದ್ದ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ಕೊಡಿಸಿದ್ದರು. ಇದಲ್ಲದೆ ಚಿಕಿತ್ಸೆಗೆ ದಾಖಲಾಗಿದ್ದ ಬಾಧಿತರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿ ಪ್ರತಿದಿನ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೂ ಸಹ ಪರಿಹಾರ ಕೊಡಿಸಿದ್ದರು. ಇದಲ್ಲದೆ ಹನೂರು ವಿಧಾನಸಭಾ ಕ್ಷೇತ್ರದ ರಸ್ತೆ, ಸಮುದಾಯ ಭವನ ಗಳಿಗೆ ಹೆಚ್ಚಿನ ಅನುದಾನ ನೀಡಿದ್ದರು ಶೈಕ್ಷಣಿಕವಾಗಿ ಹನೂರು ಕ್ಷೇತ್ರಕ್ಕೆ ಹೆಚ್ಚಿನ ವಸತಿ ಶಾಲೆಗಳನ್ನು ತರವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ಪಕ್ಷ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಹಿರಿಯರು ನನ್ನ ಆತ್ಮೀಯರಾಗಿದ್ದ ಧ್ರುವನಾರಾಯಣ ಇಲ್ಲ ಎಂಬುದನ್ನೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡಿದ ಪರಿಣಾಮ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಯಿತು. ಸದಾ ಕಾರ್ಯಕರ್ತರ ಕಷ್ಟ ಸುಖದಲ್ಲಿ ಭಾಗಿಯಾಗಿ ಸದಾ ಅವರ ಬೆನ್ನೆಲುಬಾಗಿದ್ದರು ಎಂದು ಅವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದಿ.ಧ್ರುವನಾರಾಯಣ ರವರ ಒಡನಾಟವನ್ನು ಹಂಚಿಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್, ಮುಕುಂದವರ್ಮ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಮುಖಂಡರಾದ ಕೊಪ್ಪಳ ಮಹದೇವ ನಾಯಕ್ ಮುರುಡೇಶ್ವರ ಸ್ವಾಮಿ, ಮಂಗಲ ಪುಟ್ಟರಾಜು, ಪಾಳ್ಯ ಕೃಷ್ಣ, ಪೆದ್ದನ ಪಾಳ್ಯ ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.