ಕನ್ನಡಪ್ರಭ ವಾರ್ತೆ ತಿಪಟೂರು
ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಅದ್ಭುತವಾದ ಆಟವಾಡಿ, ಓಲಂಪಿಕ್ಸ್ ನಲ್ಲಿ ಮೂರು ಬಾರಿ ಚಿನ್ನದ ಪದಕ ಪಡೆದು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದವರೇ ಮೇಜರ್ ಧ್ಯಾನ್‌ಚಂದ್ ಎಂದು ಎಸ್.ವಿ.ಪಿ.ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣಕಯ್ಯ ತಿಳಿಸಿದರು.ನಗರದ ಎಸ್.ವಿ.ಪಿ. ಪದವಿಪೂರ್ವ ಕಾಲೇಜು, ಎನ್.ಎಸ್.ಎಂ. ಬಾಲಕಿಯರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರೀಡೆ ಎಂಬುದು ಯುವಕರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವ ಮತ್ತು ದೇಶದ ಘನತೆ ಗೌರವವನ್ನು ಕಾಪಾಡುವುದಾಗಿದೆ. ಧ್ಯಾನ್‌ಚಂದ್‌ರವರು ಚಿಕ್ಕವಯಸ್ಸಿನಲ್ಲಿಯೇ ಹಾಕಿ ಆಟದ ಸ್ಟಿಕ್‌ನ್ನು ಕಂಡು ಆಕರ್ಷಿತರಾಗಿ ಆ ಆಟದಲ್ಲಿಯೇ ನಾನು ಬಹು ದೊಡ್ಡ ಸಾಧನೆ ಮಾಡಬೇಕೆಂದು ತೀರ್ಮಾನಿಸಿ ತರಬೇತಿ ಪಡೆದು ದೈಹಿಕ ಹಾಗೂ ಮಾನಸಿಕ ಬಲವನ್ನು ಸದೃಢಗೊಳಿಸಿಕೊಂಡರು. ಅನಂತರ ಬರ್ಲಿನ್‌ನಲ್ಲಿ ನಡೆದ ಓಲಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಪಡೆದು ವಿಶ್ವವಿಖ್ಯಾತಿಯಾದರು. ತನ್ನ ಜೀವನವನ್ನು ಈ ಹಾಕಿ ಆಟಕ್ಕಾಗಿ ಮುಡುಪಾಗಿರಿಸಿದ್ದರು. ಇಂತಹ ಮಹಾನ್ ಆಟಗಾರನ ಸಾಧನೆಗಳನ್ನು ಸ್ಮರಿಸುವ ಹಾಗೂ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಭಾರತ ಸರ್ಕಾರ ೨೦೧೨ರಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು. ಇವರ ಅಪಾರ ಕ್ರೀಡಾಭಿಮಾನಕ್ಕೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದರಿಂದ ಉತ್ತೇಜನಗೊಂಡ ಧ್ಯಾನ್‌ಚಂದ್‌ರವರು ವಿಶ್ವವೇ ಬೆರಗಾಗುವಂತಹ ೪೦೦ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ಸಿಡಿಸಿ, ಕ್ರೀಡೆಯ ಹಿರಿಮೆಯನ್ನು ಹೆಚ್ಚಿಸಿದ್ದರು. ಜರ್ಮನಿಯ ಹಿಟ್ಲರ್ ಇವರ ರೋಮಾಂಚನಕಾರಿ ಗೋಲುಗಳನ್ನು ನೋಡಿ ಆಶ್ಚರ್ಯಚಕಿತರಾಗಿ ಇವರಿಗೆ ಜರ್ಮನ್ ದೇಶದ ಪೌರತ್ವದೊಂದಿಗೆ ಗೌರವ ಮತ್ತು ಉನ್ನತ ಹುದ್ದೆ ನೀಡುವುದಾಗಿ ತಿಳಿಸಿದ್ದರು. ಆದರೆ ಧ್ಯಾನ್‌ಚಂದ್‌ರವರು ಭಾರತ ದೇಶದ ಬಗ್ಗೆ ಅಪಾರ ಅಭಿಮಾನ ಇರಿಸಿಕೊಂಡಿದ್ದರಿಂದ ಅದನ್ನು ನಯವಾಗಿಯೇ ತಿರಸ್ಕರಿಸಿ ಕ್ರೀಡಾ ಜಗತ್ತಿನಲ್ಲಿ ಅಮರರಾಗಿದ್ದಾರೆ. ಇವರ ಹೆಸರಿನಲ್ಲಿ ಸರ್ಕಾರ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್‌ಚಂದ್ ಖೇಲ್ ರತ್ನಪ್ರಶಸ್ತಿ ನೀಡುವುದರ ಮೂಲಕ ಕ್ರೀಡಾಸಾಧಕರಿಗೆ ಗೌರವಿಸುತ್ತ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ ಎಂದರು. ದೈಹಿಕ ಶಿಕ್ಷಕ ಉದಯ್‌ಶಂಕರ್ ಮಾತನಾಡಿ ಮೇಜರ್ ಧ್ಯಾನ್‌ಚಂದ್‌ರವರು ದೇಶದ ಜನರಲ್ಲಿ ಕ್ರೀಡಾಭಿಮಾನ ಬೆಳೆಸಿದವರು. ಸ್ವಾರ್ಥಕ್ಕಾಗಿ ಸಾಧನೆ ಮಾಡದೆ ದೇಶಕ್ಕಾಗಿ ದುಡಿಯಬೇಕೆಂಬ ಪ್ರಜ್ಞೆಯನ್ನು ಅರಳಿಸಿದವರು. ಸರ್ಕಾರವೆ ಕ್ರೀಡೆಗಳಿಗೆ ವಿಶೇಷ ಒತ್ತುಕೊಡುವಂತೆ ಮಾಡಿ ಆರೋಗ್ಯವಂತ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ಯುವಸಮುದಾಯ ವಹಿಸುವಂತೆ ನೋಡಿಕೊಂಡರು. ಆದುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಅವಧಿಯಲ್ಲಿ ಮಾನಸಿಕ, ಭೌತಿಕ ಸದೃಢತೆಗೆ ಕ್ರೀಡೆಗಳಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳುತ್ತ ಆರೋಗ್ಯದ ಜೊತೆಜೊತೆಗೆ ಉತ್ತಮ ಭವಿಷ್ದಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕರುಗಳಾದ ವಿ.ಎಂ. ಅರ್ಕಚಾರಿ, ವಿಜಯಕುಮಾರಿ, ಬಿಂದು ಎನ್, ಶಿಕ್ಷಕರುಗಳಾದ ಪದ್ಮ ಪಿ. ವೀರೇಶ್, ಜುಂಜಪ್ಪ, ಬಸವರಾಜು, ದೇವರಾಜು, ಸಂತೋಷ್, ಸಿದ್ದೇಶ್, ಕುಮುದ ವಸಂತ ಮತ್ತಿತರಿದ್ದರು.