ದೊಡ್ಡಬಳ್ಳಾಪುರ: ಒತ್ತಡದ ಬದುಕು, ದೈಹಿಕ ಚಟುವಟಿಕೆ ಇಲ್ಲದಿರುವುದು, ಅನಿಯಮಿತ ಆಹಾರ ಪದ್ಧತಿಯಿಂದ ಮಧುಮೇಹ ಬರಲು ಕಾರಣವಾಗಿವೆ. ಇತರೆ ಕಾಯಿಲೆಗಳಿಗೂ ಕಾರಣವಾಗಿರುವ ಮಧುಮೇಹದ ಜಾಗೃತಿ ಮೂಡಿಸಿ, ರೋಗ ನಿಯಂತ್ರಣದ ಅಂಶಗಳನ್ನು ತಿಳಿಸುವ ಸಲುವಾಗಿ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಡಾ.ಕೆ.ವಿ.ರಾಘವೇಂದ್ರ ತಿಳಿಸಿದರು.
ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿ, ಇಂದು ವಿಶ್ವ ಮಧುಮೇಹ ದಿನಾಚರಣೆ. ಆರೈಕೆಯ ಅಡೆತಡೆಗಳನ್ನು ತೊಡೆದುಹಾಕಿ ಚಿಕಿತ್ಸೆಯ ಅಂತರವನ್ನು ನಿವಾರಿಸುವುದು. ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಶುಶ್ರೂಷಾ ವಿದ್ಯಾರ್ಥಿಗಳು ಮತ್ತು ಭವಿಷ್ಯದ ಆರೋಗ್ಯ ವೃತ್ತಿಪರರಾಗಿ, ಇದನ್ನು ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸುತ್ತೀರಿ. ನಿಮ್ಮ ಸಮರ್ಪಣೆ, ಸಹಾನುಭೂತಿ ಮತ್ತು ಪರಿಣತಿಯು ಮಧುಮೇಹ ಆರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಈ ಸ್ಥಿತಿಯಿಂದ ಪೀಡಿತರನ್ನು ಬೆಂಬಲಿಸುತ್ತದೆ. ಮಧುಮೇಹ, ಅದರ ಅಪಾಯಗಳು ಮತ್ತು ನಿರ್ವಹಣೆಯ ಬಗ್ಗೆ ನಮಗೆ ಮತ್ತು ಇತರರಿಗೆ ಶಿಕ್ಷಣ ನೀಡೋಣ. ಮಧುಮೇಹದಿಂದ ಬಳಲುತ್ತಿರುವವರನ್ನು ಬೆಂಬಲಿಸೋಣ, ಕಾಳಜಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ನೀಡೋಣ. ಎಲ್ಲರಿಗೂ ಮಧುಮೇಹ ಆರೈಕೆಯ ಪ್ರವೇಶವನ್ನು ಸುಧಾರಿಸುವ ನೀತಿಗಳು ಮತ್ತು ಉಪಕ್ರಮಗಳಿಗಾಗಿ ನಾವು ಪ್ರತಿಪಾದಿಸೋಣ ಎನ್ನುವ ಸಂಕಲ್ಪ ಮಾಡಬೇಕಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಚ್.ನಾಗರಾಜು ಮಾತನಾಡಿ, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರೊಂದಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತಿರುವುದು ಆತಂಕದ ವಿಚಾರ. ಮಕ್ಕಳಿಗೆ ಜಂಕ್ ಫುಡ್ಗಳನ್ನು ಹೆಚ್ಚಾಗಿ ತಿನ್ನಲು ಕೊಡುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಚಿಕ್ಕ ವಯಸ್ಸಿಗೇ, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಬರುತ್ತಿವೆ. ಆರೋಗ್ಯವೇ ಭಾಗ್ಯ ಎನ್ನುವ ನುಡಿಯಂತೆ ಆರೋಗ್ಯಕ್ಕೆ ನಾವು ಪ್ರಾತಿನಿಧ್ಯ ನೀಡಬೇಕಿದೆ. ತರಕಾರಿ ಸೊಪ್ಪುಗಳನ್ನೊಳಗೊಂಡಂತೆ ಪೌಷ್ಟಿಕ ಆಹಾರ ಸೇವನೆ, ಕ್ರೀಡೆ, ಯೋಗ, ವ್ಯಾಯಾಮದ ಚಟುವಟಿಕೆಗಳು ನಮ್ಮನ್ನು ಸದೃಢಗೊಳಿಸಲಿದ್ದು, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಸುಜ್ಞಾನ ದೀಪಿಕಾ ಸಂಚಾಲಕ ಎಂ.ಎಸ್.ಮಂಜುನಾಥ್, ಸೂರ್ಯ ಪ.ಪೂ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್ , ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಉಪನ್ಯಾಸಕರಾದ ಅಂಜಲಿ ಕುಮಾರಿ, ಲಾವಣ್ಯ ಮತ್ತಿತರರು ಭಾಗವಹಿಸಿದ್ದರು.
15ಕೆಡಿಬಿಪಿ1- ದೊಡ್ಡಬಳ್ಳಾಪುರದ ಶ್ರೀ ರಾಮ ನರ್ಸಿಂಗ್ ಕಾಲೇಜು ಮತ್ತು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ನಡೆಯಿತು.