ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ತಾಲೂಕಿನ ಅಚ್ಚಪ್ಪನ ಕೊಪ್ಪಲು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಬಲ್ಲೆನಹಳ್ಳಿ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ ಹಾಗೂ ಮಧುಮೇಹ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಅತಿಯಾದ ತೂಕ, ಚಟುವಟಿಕೆ ರಹಿತ ಜೀವನ, ಅತಿಯಾದ ಧೂಮಪಾನ, ಮಧ್ಯಪಾನ, ಅನುವಂಶೀಯತೆ, ಅನಾರೋಗ್ಯಕರ ಆಹಾರ ಸೇವನೆ, ಒತ್ತಡ, ಅತಿಯಾದ ಉಪ್ಪು ಬಳಕೆ ಮತ್ತು ಎಣ್ಣೆಯಿಂದ ಮಾಡಿದ ಖಾದ್ಯಗಳ ಸೇವನೆ ಮಧುಮೇಹ ಖಾಯಿಲೆ ಬರಲು ಕಾರಣಗಳಾಗಿವೆ ಎಂದರು.ಹಿತಮಿತವಾದ ಆಹಾರ ಸೇವನೆ, ಪ್ರತಿದಿನ ನಿಯಮಿತವಾಗಿ, ಸಕಾಲಿಕವಾಗಿ ಆಹಾರ ಸೇವನೆ, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಪದಾರ್ಥಗಳನ್ನು ತ್ಯಜಿಸಬೇಕು. ಜೊತೆಗೆ ಯಚೆತ್ತವಾಗಿ ಹಣ್ಣು, ತರಕಾರಿ ಸೇವನೆ, ತೂಕ ನಿಯಂತ್ರಣ, ದಿನಕ್ಕೆ 7 ರಿಂದ 8 ಗಂಟೆ ನಿದ್ರೆ, ಬೇಗ ಎದ್ದು ಸೂರ್ಯ ಕಿರಣಗಳಿಗೆ ಮೈ ಒಡ್ಡುವಂತ ವ್ಯಾಯಾಮ, ಯೋಗ, ವೈದ್ಯರು ಸೂಚಿಸುವ ಔಷಧಿಗಳನ್ನು ಚಾಚು ತಪ್ಪದೇ ನಿಯಮಿತವಾಗಿ ಸಕಾಲದಲ್ಲಿ ಸೇವಿಸುದರಿಂದ ಮಧುಮೇಹ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜು ಮಾತನಾಡಿ, ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಈ ವೇಳೆ ಸಮುದಾಯ ಆರೋಗ್ಯ ಅಧಿಕಾರಿ ಮಹೇಶ, ಮುಖಂಡರಾದ ಚಲುವರಾಜು, ಈಶ್ವರ ಆಶಾ ಕಾರ್ಯಕರ್ತೆ ಪ್ರಭಾ, ರತ್ನಾ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.