ಸಂಡೂರು: ಪಟ್ಟಣದ ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಆರಂಭಿಸಲಾದ ಅತ್ಯಾಧುನಿಕ ರೋಟರಿ ಡಯಾಗ್ನೋಸ್ಟಿಕ್ ಕೇಂದ್ರವನ್ನು ಗುರುವಾರ ಶಾಸಕಿ ಈ.ಅನ್ನಪೂರ್ಣ ತುಕಾರಾಂ ಉದ್ಘಾಟಿಸಿ, ಶುಭ ಕೋರಿದರು.ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಡಾ. ಸಿ.ಎ. ಸಾಧು ಗೋಪಾಲಕೃಷ್ಣ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆಗೆ ಹೆಸರಾಗಿದೆ. ಜಗತ್ತಿನಾದ್ಯಂತ ಪೋಲಿಯೊ ನಿರ್ಮೂಲನೆ, ಶಿಕ್ಷಣದ ಅಭಿವೃದ್ಧಿ ಮುಂತಾದ ಸಮಾಜ ಸೇವಾ ಕಾರ್ಯದಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಈಗಾಗಲೆ ರೋಟರಿ ಸಂಸ್ಥೆಯಿಂದ ಪಟ್ಟಣದಲ್ಲಿ ಶಾಲೆಯನ್ನು ನಡೆಸಲಾಗುತ್ತಿದೆ. ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಸಂಸ್ಥೆಯಿಂದ ಡಯಾಗ್ನೋಸ್ಟಿಕ್ ಕೇಂದ್ರವನ್ನು ಆರಂಭಿಸಿರುವುದು ಇಲ್ಲಿನ ಜನತೆಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಜನತೆ ಕೇಂದ್ರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ರೋಟರಿ ಸಂಸ್ಥೆಯ ಜೆ.ಎಂ. ಬಸವರಾಜ, ರೋಟರಿ ಸಂಸ್ಥೆಯಿಂದ ಸುಮಾರು ₹60 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನೊಳೊಂದಿಗೆ ಡಯಾಗ್ನೋಸ್ಟಿಕ್ ಕೇಂದ್ರ ಆರಂಭಿಸಲಾಗಿದೆ. ಕೇಂದ್ರದಲ್ಲಿ ರಕ್ತ ಪರೀಕ್ಷೆ, ಎಕ್‌ರೇ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತಿದೆ. ಜನತೆ ಈ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಂಸದ ಈ.ತುಕಾರಾಂ, ರೋಟರಿ ಸಂಸ್ಥೆಯ ವಿವಿಧ ರೋಟರಿ ಜಿಲ್ಲೆಗಳ ಹಾಲಿ ಹಾಗೂ ಮಾಜಿ ಗವರ್ನರ್‌ಗಳಾದ ಡಾ.ಸಿ.ಎ. ರವಿ ವಾಡ್ಲಮಣಿ, ಬಿ.ಚಿನ್ನಪ್ಪರೆಡ್ಡಿ, ತ್ರಿವಿಕ್ರಮ್ ಜೋಷಿ, ಆರ್.ಗೋಪಿನಾಥ್, ತಿರುಪತಿ ನಾಯ್ಡು, ಡಾ. ಕೆ.ಜಿ. ಕುಲಕರ್ಣಿ, ಸಹಾಯಕ ಗವರ್ನರ್ ಮಹೇಶ್ ಸಾಗರ್, ಸಂಡೂರು ಕ್ಲಬ್‌ನ ಚೇರ್‌ಮನ್ ಮಾರುತಿರಾವ್ ಭೋಸ್ಲೆ, ಅಧ್ಯಕ್ಷ ಸುರೇಶ್‌ಗೌಡ, ಕಾರ್ಯದರ್ಶಿ ಪ್ರಕಾಶ್ ಜೈನ್, ಸದಸ್ಯರಾದ ಬಿ.ಆರ್. ಮಸೂತಿ, ಜೆ.ಎಂ. ಅನ್ನದಾನಸ್ವಾಮಿ, ಕೆ.ಶಿವಪ್ಪ, ಬಿ.ಶಿವಕುಮಾರ್, ಎಂ.ವಿ. ಹಿರೇಮಠ್, ಫಾರುಕ್, ಕೆ. ನಾಗರಾಜ, ಗೌರೀಶ್, ಆಶಾಲತಾ ಸೋಮಪ್ಪ ಉಪಸ್ಥಿತರಿದ್ದರು.
ಸಂಡೂರಿನಲ್ಲಿ ರೋಟರಿ ಸಂಸ್ಥೆಯಿಂದ ಆರಂಭಿಸಲಾದ ರೋಟರಿ ಡಯಾಗ್ನೋಸ್ಟಿಕ್ ಕೇಂದ್ರವನ್ನು ಶಾಸಕಿ ಅನ್ನಪೂರ್ಣ ತುಕಾರಾಂ ಉದ್ಘಾಟಿಸಿದರು.