ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನ ದುರ್ಬಲಗೊಳಿಸುವ ಯತ್ನ:ರಾಜೀವ್

KannadaprabhaNewsNetwork | Published : Jun 26, 2024 12:37 AM

ಸಾರಾಂಶ

ತುರ್ತು ಪರಿಸ್ಥಿತಿ ವಿಧಿಗೆ ಅಂಕಿತ ಹಾಕಿದ ಆಗಿನ ರಾಷ್ಟ್ರಪತಿಯವರು ಸಂವಿಧಾನಬದ್ಧವಾಗಿ ತಮಗಿದ್ದ ವಿವೇಚನಾ ಅಧಿಕಾರ ಬಳಸಿ ಪ್ರಶ್ನಿಸಿದ್ದರೆ ದೇಶದ ಇತಿಹಾಸವೇ ಬದಲಾಗುತ್ತಿತ್ತು

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಧಿಕಾರದಾಸೆಗಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಿಸಿದ್ದರು ಎಂದು ಮಾಜಿ ಶಾಸಕ ಪಿ. ರಾಜೀವ್ ಆರೋಪಿಸಿದರು.

ನಗರದ ಕಲಾಮಂದಿರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆಯು ಮಂಗಳವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ವಿಧಿಗೆ ಅಂಕಿತ ಹಾಕಿದ ಆಗಿನ ರಾಷ್ಟ್ರಪತಿಯವರು ಸಂವಿಧಾನಬದ್ಧವಾಗಿ ತಮಗಿದ್ದ ವಿವೇಚನಾ ಅಧಿಕಾರ ಬಳಸಿ ಪ್ರಶ್ನಿಸಿದ್ದರೆ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ತುರ್ತು ಪರಿಸ್ಥಿತಿ ಜಾರಿ ಮಾಡಬೇಕಾದರೆ ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ಸಂಸತ್ತಿನಲ್ಲಿ ಅನುಮೋದನೆ ಪಡೆದು ಜಾರಿ ಮಾಡಬೇಕು ಎಂದು ನಿಯಮ ರೂಪಿಸಿದ್ದರು. ಆದರೆ, ಇಂದಿರಾ ಗಾಂಧಿ ಅವರು ಇದ್ಯಾವುದನ್ನು ಮಾಡದೇ, ತಮ್ಮ ಅಧಿಕಾರದಾಸೆಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು ಎಂದು ಅವರು ದೂರಿದರು.

ಸ್ವಾತಂತ್ರ್ಯ ಬಂದ ಬಳಿಕ ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಿಂದ ದೇಶ ಮತ್ತೆ ಸಂಪೂರ್ಣ ಸ್ವಾತಂತ್ರ್ಯವನ್ನು ಕಳೆದುಕೊಂಡಿತು. ಬ್ರಿಟಿಷರು ದೇಶದ ಜನರಿಗೆ ಬದುಕುವ ಹಕ್ಕನ್ನು ನೀಡಿದ್ದರೆ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಮೂಲಕ ನೈತಿಕ ಮೌಲ್ಯಗಳ ಮೇಲೆ ನಿರಂತರ ದೌರ್ಜನ್ಯ ಎಸಗಿದರು. ತುರ್ತು ಪರಿಸ್ಥಿತಿಯಿಂದ ಸಿಕ್ಕ ಅಧಿಕಾರವನ್ನು ಯಾರು ಪ್ರಶ್ನಿಸಬಾರದು ಎಂದು ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದರು ಎಂದರು.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬೈರತಿ ಬಸವರಾಜ್ ಮಾತನಾಡಿ, ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನ ರಕ್ಷಣೆಗೆ ಬಿಜೆಪಿ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಸಿ. ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಕೇಬಲ್ ಮಹೇಶ್, ಗಿರಿಧರ್, ನಗರ ಉಪಾಧ್ಯಕ್ಷ ಜೋಗಿ ಮಂಜು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಿ. ಲೋಹಿತ್, ಸಚಿನ್, ಪಾಲಿಕೆ ಮಾಜಿ ಸದಸ್ಯೆ ವೇದಾವತಿ, ಮಾಜಿ ಉಪ ಮೇಯರ್ ವಿ. ಶೈಲೇಂದ್ರ, ಎಸ್.ಕೆ. ದಿನೇಶ್ ಮೊದಲಾದವರು ಇದ್ದರು.

Share this article