ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಗೆ ಹೊರ ತೆಗೆಯಲಾಯಿತು.
ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು ಹೂವಿನ ಹಾರ ತೊಡಿಸಿ ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು. ಅಧಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.ಪೂಜೆ ಮುಗಿಸಿ ಆಭರಣಗಳ ಗಂಟುಗಳನ್ನು ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕಂ ಅವರಿಗೆ ಹಸ್ತಾಂತರಿಸಲಾಯಿತು. ಬೆಳಗ್ಗೆ 7.20ಗಂಟೆಗೆ ಖಜಾನೆ ಆವರಣದಿಂದ ವಾಹನ ನಿರ್ಗಮಿಸಿತು.
ವಾಹನವೇರಿದ ವೈರಮುಡಿ :
ಖಜಾನೆಯಿಂದ ಹೊರಟ ವಾಹನವು ನಂತರ ನಗರದ ಶ್ರೀ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯಕ್ಕೆ ತೆರಳಿತು. ಮಂಗಳವಾದ್ಯಗಳ ಸದ್ದಿನೊಂದಿಗೆ ದೇವಾಲಯ ಅವರಣದಲ್ಲಿ 7.30ಕ್ಕೆ ವೈರಮುಡಿ ಆಭರಣಕ್ಕೆ ಸ್ವಾಗತ ಕೋರಲಾಯಿತು. ಅಲ್ಲಿನ ಮಂಟಪದಲ್ಲಿ ವೈರಮುಡಿ ವಜ್ರಾಭರಣವಿರುವ ಪೆಟ್ಟಿಗೆಗಳನ್ನು ಇಟ್ಟು ಶ್ರೀ ಚೆಲುವನಾರಾಯಣಸ್ವಾಮಿ ದೇವರ ಒಕ್ಕಲಿನವವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಅಲ್ಲಿಂದ 7.45ಕ್ಕೆ ವಾಹನವು ಮೇಲುಕೋಟೆಯತ್ತ ಸಾಗಿತು.
ದಾರಿಯುದ್ದಕ್ಕೂ ಸ್ವಾಗತ :ಮೇಲುಕೋಟೆಗೆ ತೆರಳುವ ಮಾರ್ಗಮಧ್ಯೆ ಸಿಗುವ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ, ಕಾಳೇನಹಳ್ಳಿ, ರಾಗಿಮುದ್ದನಹಳ್ಳಿ, ಕೋಡಿಶೆಟ್ಟಿಪುರ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ತೆರಳಿತು. ವೈರಮುಡಿ, ರಾಜಮುಡಿ ಹೊತ್ತ ವಾಹನ ಮೇಲುಕೋಟೆಗೆ ಸಂಜೆ ವೇಳೆಗೆ ತಲುಪಿತು.