ಅತಿಸಾರ ಭೇದಿ ತಡೆಯುವಿಕೆ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Jun 25, 2025, 11:47 PM IST
ಅತಿಸಾರ ಬೇಧಿ ತಡೆಯುವಿಕೆ ಅಭಿಯಾನಕ್ಕೆ ಚಾಲನೆ | Kannada Prabha

ಸಾರಾಂಶ

ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ (ಮಕ್ಕಳ ವಿಭಾಗ) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಸ್ಟಾಪ್ ಡೈಯೇರಿಯ ಕ್ಯಾಂಪೇನ್ ಅನ್ನು ಜುಲೈ 31ರ ವರೆಗೆ ಆಯೋಜಿಸಲಾಗಿದೆ. ಎಲ್ಲ ಐದು ವರ್ಷದ ಒಳಗಿನ ಮಕ್ಕಳಿಗೆ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಒಂದು ಮಗುವಿಗೆ ಎರಡು ಪ್ಯಾಕೆಟ್ ಓಆರ್‌ಎಸ್ ಮತ್ತು ಒಂದು ಪ್ಯಾಕೆಟ್ ಜಿಂಕ್ ಮಾತ್ರೆಯನ್ನು ನೀಡಲಾಗುವುದು. ಭೇದಿ ಆದಲ್ಲಿ ಮಾತ್ರ ಜಿಂಕ್ ಮಾತ್ರೆಯನ್ನು 14 ದಿನಗಳ ವರೆಗೆ ಉಪಯೋಗಿಸುವುದು. ಈ ಮಾಹಿತಿಯು ಪ್ರತಿಯೊಬ್ಬ ಪೋಷಕರಿಗೂ ತಿಳಿದಿರಬೇಕು. ಗುಣಮುಖವಾಗದಿದ್ದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಅತಿಸಾರ ಭೇದಿಯಿಂದ ಉಂಟಾಗುವ ಮರಣವನ್ನು ತಪ್ಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಅತಿಸಾರ ಭೇದಿಯಿಂದ ಶೂನ್ಯ ಮರಣ ಎಂಬ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್, ಗ್ರಾಮ ಆರೋಗ್ಯ ದಿನಾಚರಣೆ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಅಂಗನವಾಡಿ ಮತ್ತು ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಎಲ್ಲಾ ಸ್ವಸಹಾಯ ಗುಂಪುಗಳಲ್ಲಿ ಸಭೆ ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ. ಸ್ವಚ್ಛತೆ ಬಗ್ಗೆ ಮತ್ತು ಕೈ ತೊಳೆಯುವ ಬಗ್ಗೆ ಮಾಹಿತಿ ನೀಡಿ ಮಾಹಿತಿ ಶಿಕ್ಷಣದ ಪೋಸ್ಟರ್ಸ್ ಮತ್ತು ಬ್ಯಾನರ್‌ಗಳನ್ನು ವಿತರಿಸಲಾಗಿದೆ ಹಾಗೂ ಅನಾವರಣಗೊಳಿಸಲಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್‌ ಮಾತನಾಡಿ, ಇದು ಬರಿ ಕಾರ್ಯಕ್ರಮವಲ್ಲ, ಅನುಷ್ಠಾನಕ್ಕೆ ಬರಬೇಕು. ನಿರ್ಜಲೀಕರಣ ಆಗದಂತೆ ದಿವ್ಯ ಔಷಧವಾದ ಒಆರ್‌ಎಸ್ ಮತ್ತು ಜಿಂಕ್ ಮಕ್ಕಳಿಗೆ ಕೊಡಿಸಿ ಎಂದು ಸಲಹೆ ನೀಡಿದರು.

ಡಾ.ದಿವ್ಯರಾಣಿ ಮತ್ತು ಡಾ.ಸಲ್ಮಾ ಅವರು ಅತಿಸಾರ ಬೇಧಿ ಆದಾಗ ತಕ್ಷಣವೇ ತಯಾರಿಸುವ ಮನೆಮಟ್ಟದ ಒಆರ್‌ಎಸ್ (6 ಟೀ ಸ್ಪೂನ್ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಗೂ ಒಂದು ಲೀಟರ್ ಶುದ್ಧ ಕುಡಿಯುವ ನೀರು) ಈ ಬಗ್ಗೆ ಮಾಹಿತಿ ನೀಡಿದರು.

ಯಾವುದೇ ಕಾರಣಕ್ಕೂ ಹುಳಿ ಅಂಶ ಮಿಶ್ರಣ ಮಾಡುವಂತಿಲ್ಲ, ಹಣ್ಣಿನ ಜ್ಯೂಸ್‍ಗೆ ಕೂಡ ಸಕ್ಕರೆ ಮಿಶ್ರಣ ಮಾಡಬಾರದು ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ನಿರೂಪಿಸಿ, ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ ಮತ್ತು ಪುಟಾಣಿ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

PREV

Recommended Stories

ಒಳಮೀಸಲಡಿ 101 ಜಾತಿಗೂ ನ್ಯಾಯ : ತಂಗಡಗಿ
ನಾಡಿದ್ದಿನಿಂದ ನೀವೂ ರಾಜಭವನ ವೀಕ್ಷಿಸಿ : ಉಚಿತ ಪ್ರವೇಶ