ಕನಕಪುರ: ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿದ್ದ ವೇಳೆ ಪೊಲೀಸರ ಸಮವಸ್ತ್ರ ಕಳಚಿ, ಕೇಸರಿ ಬಟ್ಟೆ ಹಾಕಿಸಿದ್ದನ್ನು ಅಶೋಕ್ ಮರೆತಿರುವಂತೆ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಅಶೋಕ್ ಗೆ ತಿರುಗೇಟು ನೀಡಿದರು.
ವಾಲ್ಮೀಕಿ ನಿಗಮದ ಹಣ ದುರುಪಯೋಗ ಹಾಗೂ ಅಧಿಕಾರಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪಕ್ಷ ಜೂನ್ 6ರವರೆಗೆ ಗಡವು ನೀಡಿರುವ ಬಗ್ಗೆ ಉತ್ತರಿಸಿದ ಅವರು, ಅಲ್ಲಿಯವರೆಗೂ ಕಾಯುವುದೇಕೆ? ಈಗಿನಿಂದಲೇ ಹೋರಾಟ ಮಾಡಲಿ ಬೇಡ ಎಂದವರು ಯಾರು? ಅವರು ಯಾವ ವಿಚಾರಕ್ಕೆ ಬಾಯಿ ಬಿಡಬೇಕಾಗಿತ್ತೊ ಅದನ್ನು ಮಾಡದೇ ಬೇಡದ ವಿಷಯದ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಛೇಡಿಸಿದರು. ಈ ಪ್ರಕರಣದ ತನಿಖೆಯಲ್ಲಿ ವಾಸ್ತವಾಂಶದ ಪರಿಶೀಲನೆ ನಡೆಯಲಿ. ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಈಶ್ವರಪ್ಪ ಪ್ರಕರಣಕ್ಕೂ ಇದಕ್ಕೂ ಒಂದೇ ಎಂದು ಹೇಳಲಾಗದು ಎಂದು ತಿಳಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರ ಬಳಿ ನಮ್ಮ ಅಭ್ಯರ್ಥಿ ರಾಮೋಜಿಗೌಡರ ಪರ ಪ್ರಚಾರ ಮಾಡಿ, ಈ ಚುನಾವಣೆಯಲ್ಲಿ ನಮ್ಮ ನಾಯಕರಿಗೆ ಜವಾಬ್ದಾರಿ ವಹಿಸಲು ಕನಕಪುರಕ್ಕೆ ಬಂದಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ದಳದವರು ಮೈತ್ರಿಯಾಗಿದ್ದಾರೆ. ಮೈತ್ರಿಯಿಂದ ಅ.ದೇವಗೌಡರು ಸ್ಪರ್ಧೆ ಮಾಡಿದ್ದು ಅವರು ದಳದಲ್ಲಿದ್ದರು, ನಂತರ ಬಿಜೆಪಿಗೆ ಹೋದರು. ಈಗ ಬಿಜೆಪಿಯವರು ದಳದವರು ಒಂದಾಗಿರುವುದರಿಂದ ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ನಮ್ಮ ಅಭ್ಯರ್ಥಿ ಅವರಿಗಿಂತ ಉತ್ತಮವಾಗಿ ಕೆಲಸ ಮಾಡುವ ವಿಶ್ವಾಸವಿದ್ದು ಪದವೀಧರ ಮತದಾರರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಮೇಲ್ಮನೆ ಚುನಾವಣೆ ಸಂಬಂಧ ಉತ್ತರಿಸಿದ ಅವರು, ನಾನು ಸಿದ್ದರಾಮಯ್ಯನವರು ಈಗಾಗಲೇ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ಪಟ್ಟಿ ಕೊಟ್ಟು ಬಂದಿದ್ದೇವೆ. ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ನಿಮ್ಮ ಹಾಗೂ ಸರ್ಕಾರದ ವಿರುದ್ಧ ಕೇರಳ ರಾಜ್ಯದಲ್ಲಿ ಯಾಗ ಮಾಡುತ್ತಿರುವ ಬಗ್ಗೆ ಉತ್ತರಿಸಿದ ಅವರು, ಯಾಗ ಯಾರು ಮಾಡಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ನಮಗೆ ಆಶೀರ್ವಾದ ಮಾಡಲು ನೀವು ಹಾಗೂ ಜನರು ಇದ್ದಾರೆ. ನಾನು ನಂಬಿರುವ ಶಕ್ತಿ ನನ್ನ ಜೊತೆ ಇದ್ದು ಇದರ ಜೊತೆಗೆ ರಾಜ್ಯದ ಜನರ ಪ್ರಾರ್ಥನೆ ನಮ್ಮನ್ನು ಕಾಪಾಡಲಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಬಂಧನದ ಬಗ್ಗೆ ಮಾಧ್ಯಮಗಳ ವೀಕ್ಷಣೆಯಿಂದ ತಿಳಿದು ಬಂದಿದ್ದು ಈ ವಿಚಾರವಾಗಿ ಎಸ್‌ಐಟಿ ಪ್ರಕರಣ ತನಿಖೆ ನಡೆಸುತ್ತಿದೆ. ಇದರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ ಎಂದರು.ಈ ವೇಳೆ ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿಗೌಡ, ಪಕ್ಷದ ಮುಖಂಡರಾದ ವಿಜಯ್ ದೇವ್, ಎಸ್. ಎಸ್. ಶಂಕರ್ ಸೇರಿದಂತೆ ಹಲವು ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 03:ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕನಕಪುರದಲ್ಲಿ ಸಭೆ ನಡೆಸಿದರು.