ಎಸ್‌ಐಟಿ ಬಳಿ ಬುರುಡೆ ಗ್ಯಾಂಗ್‌ ಜಾತಕ ಬಿಚ್ಚಿಟ್ಟ ಚಿನ್ನಯ್ಯ? ಪ್ಯಾಂಟ್‌ ಕೊಟ್ಟ ಪೊಲೀಸರು

KannadaprabhaNewsNetwork |  
Published : Aug 26, 2025, 01:04 AM ISTUpdated : Aug 26, 2025, 09:28 AM IST
Dharmasthala Mask Man Chinnayya

ಸಾರಾಂಶ

ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣದಲ್ಲಿ ಬಂಧಿತ ಅನಾಮಿಕ ಚಿನ್ನಯ್ಯನ ವಿಚಾರಣೆ ಮೂರನೇ ದಿನವಾದ ಸೋಮವಾರವೂ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಮುಂದುವರಿಯಿತು.

 ಮಂಗಳೂರು :  ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣದಲ್ಲಿ ಬಂಧಿತ ಅನಾಮಿಕ ಚಿನ್ನಯ್ಯನ ವಿಚಾರಣೆ ಮೂರನೇ ದಿನವಾದ ಸೋಮವಾರವೂ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಮುಂದುವರಿಯಿತು. ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದೆ ಬುರುಡೆ ಪ್ರಕರಣದ ಷಡ್ಯಂತ್ರದ ಬಗ್ಗೆ ಎಲ್ಲ ವಿಚಾರಗ‍ಳನ್ನು ಚಿನ್ನಯ್ಯ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅಲ್ಲದೆ, ಈ ವಿಚಾರವನ್ನು ಆತ ತನ್ನ ಅಣ್ಣ ತಾನಾಸಿಯಲ್ಲಿಯೂ ಹೇಳಿದ್ದು, ಆತನ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿಯ ತಂಡ ಚಿನ್ನಯ್ಯನ ಹುಟ್ಟೂರು ತಮಿಳುನಾಡಿನ ಚಿಕ್ಕರಸಿ ಹಾಗೂ ಮಂಡ್ಯಕ್ಕೆ ತೆರಳಿ ತನಿಖೆ ನಡೆಸಿದೆ.

ಚಿನ್ನಯ್ಯನ ಹುಟ್ಟೂರು ತಮಿಳುನಾಡಿನ ಚಿಕ್ಕರಸಿ ಪಾಳ್ಯಕ್ಕೆ ತೆರಳಿ ಅಲ್ಲಿ ಆತನ ಎರಡನೇ ಪತ್ನಿ ಹಾಗೂ ಪುತ್ರಿ, ಅಣ್ಣ ತಾನಾಸಿಯ ವಿಚಾರಣೆ ನಡೆಸಲಾಗಿದೆ. ಮಂಡ್ಯದಲ್ಲಿ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು, ಆತನ ಸ್ನೇಹಿತರು, ಸಂಬಂಧಿಕರಿಂದಲೂ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.

ಈ ಮಧ್ಯೆ, ಎಸ್‌ಐಟಿ ಮುಂದೆ ಬುರುಡೆ ವೃತ್ತಾಂತದ ಬಗ್ಗೆ ಆತ ಕೂಲಂಕಷವಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಬುರುಡೆ ವೃತ್ತಾಂತದ ಬಗ್ಗೆ ಬುರುಡೆ ಟೀಂ ಯೋಜನಾಬದ್ಧವಾಗಿ ಸುಳ್ಳುಗಳನ್ನು ಹೆಣೆದಿರುವುದನ್ನೂ ಚಿನ್ನಯ್ಯ ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ, ಈ ಸಂಬಂಧ ಬುರುಡೆ ಟೀಂಗೆ ನೋಟಿಸ್‌ ನೀಡಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. 

ಪೊಲೀಸ್‌ ಪ್ರಕ್ರಿಯೆ ಪಡೆದೇ ಶವ ಹೂಳ್ತಿದ್ದ ಚಿನ್ನಯ್ಯ:

ಈ ಮಧ್ಯೆ, ಚೆನ್ನಯ್ಯನಿಗೆ ಕೆಲಸ ಕೊಟ್ಟಿದ್ದ ಉಜಿರೆ ರಾಮಚಂದ್ರ ಶೆಟ್ಟಿಯವರು ಮಾತನಾಡಿ, ಚಿನ್ನಯ್ಯ 2021-22ರಲ್ಲಿ ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಉಜಿರೆ ಪರಿಸರದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಬಂದ ಶವಗಳನ್ನೂ ಸಹಿತ ಪೊಲೀಸ್‌ ಪ್ರಕ್ರಿಯೆ ನಡೆದ ಬಳಿಕವೇ ಹೂಳುತ್ತಿದ್ದ ಎಂದು ತಿಳಿಸಿದ್ದಾರೆ.

ಊರಿನಿಂದ ಬಂದ ಬಳಿಕ ಆತ ನನ್ನ ಜೊತೆ ಕೆಲಸಕ್ಕೆ ಸೇರಿದ್ದ. ಸ್ವಚ್ಛತಾ ಕಾರ್ಮಿಕರ ಕೆಲಸದ ಗುತ್ತಿಗೆಯನ್ನು ನಾನು ಪಡೆದಿದ್ದೆ. ಚಿನ್ನಯ್ಯ ಮತ್ತು ಆತನ ಪತ್ನಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಅತ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ. ಆಗ ಸ್ನಾನಘಟ್ಟದ ಬಳಿ ಇದ್ದ ನನ್ನ ಅಂಗಡಿಗೆ ಆತ ಬರುತ್ತಿದ್ದ. ಆತ ಅಲ್ಲಿ ಹೆಣ ಹೂಳುತ್ತಾ ಇದ್ದುದು ನಿಜ, ಅದರಲ್ಲಿ ಸುಳ್ಳು ಇಲ್ಲ. ಆದರೆ, ಅದೆಲ್ಲಾ ಪೊಲೀಸ್ ಪ್ರಕ್ರಿಯೆ ನಡೆದು ಹೂತ ಹೆಣಗಳು. ಆತ ಹೇಳುವಂತೆ ಅನಧಿಕೃತ ಹೂತ ಯಾವುದೇ ಹೆಣಗಳು ಇಲ್ಲ. ಅಲ್ಲಿ ಆತ್ಮಹತ್ಯೆ, ಅಸಹಜ ಸಾವುಗಳಾದಾಗ ಪಂಚಾಯಿತಿ ಹೇಳಿದಂತೆ ಇವರು ಹೆಣ ಹೂಳುತ್ತಾ ಇದ್ದರು.

ನನ್ನ ಬಳಿ ಕೆಲಸ ಮಾಡುವಾಗ ಅವನನ್ನು ಯಾರೂ ಸಂಪರ್ಕ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಆದರೆ, ಆ ಬಳಿಕ ಕೆಲವರು ಸಂಪರ್ಕ ಮಾಡಿರಲೂಬಹುದು ಎಂದಿದ್ದಾರೆ.  

ಚಿನ್ನಯ್ಯನಿಗೆ ಲುಂಗಿ ಬದಲು ಪ್ಯಾಂಟ್‌ ಕೊಟ್ಟ ಪೊಲೀಸರು:

ಬಂಧನ ಬಳಿಕ ಲುಂಗಿಯಲ್ಲೇ ಇದ್ದ ಚಿನ್ನಯ್ಯನಿಗೆ ಪೊಲೀಸರೇ ಪ್ಯಾಂಟ್‌ ತೆಗೆಸಿಕೊಟ್ಟಿದ್ದಾರೆ. ಯಾವಾಗಲೂ ಲುಂಗಿಯಲ್ಲೇ ಇರುತ್ತಿದ್ದ ಚಿನ್ನಯ್ಯನಿಗೆ ಪೊಲೀಸರು ಪ್ಯಾಂಟ್ ಹಾಕಲು ಸೂಚಿಸಿದ್ದರು. ಅದರಂತೆ ಚಿನ್ನಯ್ಯ ಪ್ಯಾಂಟ್ ಧರಿಸಿಯೇ ಸೋಮವಾರ ವಿಚಾರಣೆಗೆ ಹಾಜರಾಗಿದ್ದ.

ಪೊಲೀಸ್ ಠಾಣೆಯ ಒಂದು ಕೊಠಡಿಯಲ್ಲಿ ಚಿನ್ನಯ್ಯಗೆ ಇರಲು ಅವಕಾಶ ಕಲ್ಪಿಸಲಾಗಿದೆ. ಆತನಿಗೆ ಚಾಪೆ, ಹಾಸಿಗೆ, ದಿಂಬನ್ನು ಪೊಲೀಸರು ನೀಡಿದ್ದಾರೆ. ಮಾಂಸಾಹಾರಿ ಪ್ರಿಯ ಮಾಸ್ಕ್‌ಮ್ಯಾನ್‌ಗೆ ನಾನ್‌ವೆಜ್ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. 

ತಿಮರೋಡಿ ಬಂಧನ ವೇಳೆ ಠಾಣೆಗೆ ನಕಲಿ ಅಧಿಕಾರಿಗಳು?:

ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಬಂಧನ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಗಿರೀಶ್‌ ಮಟ್ಟಣ್ಣವರ್‌ ಸಹಿತ ಹಲವರ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆ ಗಿರೀಶ್ ಮಟ್ಟಣ್ಣವರ್ ತನ್ನ ಸಂಗಡಿಗರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದರು. ಆಗ ಅವರು ತಮ್ಮೊಂದಿಗೆ ಬಂದವರು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಎಂದು ಪೊಲೀಸರಿಗೆ ಹೇಳಿದ್ದಾರೆ. ಆದರೆ, ಅಸಲಿಗೆ ಅವರು ಕರೆ ತಂದಿರುವುದು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳೇ ಅಲ್ಲ. ಬದಲಾಗಿ, ಅದರಲ್ಲೊಬ್ಬರು ಹುಬ್ಬಳ್ಳಿ ಮೂಲದ ನಟೋರಿಯಸ್ ರೌಡಿ ಮದನ್ ಮುಗಡಿ ಎಂದು ಹೇಳಲಾಗಿದೆ. 

ಕೋಟ್ ಹಾಕ್ಕೊಂಡು ಬಂದಿದ್ದ ಈತನನ್ನು ಗಿರೀಶ್ ಮಟ್ಟಣ್ಣವರ್ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪರಿಚಯಿಸಿದ್ದಾರೆ. ಆದರೆ, ಇತ್ತೀಚೆಗೆ ಹುಬ್ಬಳ್ಳಿ ನಗರ ಪೊಲೀಸ್ ಕಮಿಷನರ್ ನಡೆಸಿದ ರೌಡಿ ಶೀಟರ್ ಪರೇಡ್‌ನಲ್ಲಿ ಈತನೂ ಇದ್ದ ಎನ್ನುವುದು ಬಹಿರಂಗವಾಗಿದೆ. ಈತನ ವಿಚಾರಣೆ ಮಾಡುವ ವೀಡಿಯೋ ಇದೀಗ ವೈರಲ್ ಆಗಿದೆ.

ಇವರ ಜೊತೆಗಿದ್ದ ಇನ್ನೊಬ್ಬರು ಜಾನ್ ಸೈಮನ್‌ ಎಂಬ ಬೆಂಗಳೂರು ಮೂಲದ ವ್ಯಕ್ತಿ. ಇವರು ಕೂಡ ಮಾನವ ಹಕ್ಕು ಆಯೋಗದ ಹೆಸರಲ್ಲಿ ಬೆಳ್ತಂಗಡಿಗೆ ಬಂದಿರುವುದು ಪತ್ತೆಯಾಗಿದೆ. ಇವರು ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಓಡಾಡುತ್ತ ಪೊಲೀಸರನ್ನೇ ಬೆದರಿಸಿ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿವೆ. ದೊಡ್ಡಬಳ್ಳಾಪುರದಲ್ಲಿ ತನ್ನದೇ ಚರ್ಚ್ ನಡೆಸಿಕೊಂಡು, ಅಲ್ಲಿ ಪಾದ್ರಿಯಾಗಿದ್ದಾರೆ. ಅವರು ‘ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ನ್ಯಾಯ ಆಯೋಗ’ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದೇನೆ ಎಂದು ಪೋಸು ಕೊಡುತ್ತಾರೆ. ಪೊಲೀಸರಿಂದ ಹಿಂಸೆಯಾದರೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಾರೆ ಎಂಬ ಆರೋಪಗಳಿವೆ. ಹೀಗಾಗಿ, ಪೊಲೀಸರು ಇವರ ಮೇಲೆ ಕೇಸು ದಾಖಲಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

ಯೂಟ್ಯೂಬರ್‌ ಸಮೀರ್‌ಗೆ ನಿನ್ನೆಯೂ 6 ಗಂಟೆ ಕಾಲ ಪೊಲೀಸರಿಂದ ಗ್ರಿಲ್‌ : ಕೃತಕ ಬುದ್ಧಿಮತ್ತೆ (ಎಐ) ಟೂಲ್‌ ಬಳಸಿ ಧರ್ಮಸ್ಥಳ ಕ್ಷೇತ್ರ ನಿಂದನೆ ಮಾಡಿದ ಆರೋಪದಲ್ಲಿ 2ನೇ ದಿನವಾದ ಸೋಮವಾರವೂ ಬೆಳ್ತಂಗಡಿ ಪೊಲೀಸರು ‘ದೂತ’ ಯೂಟ್ಯೂಬ್‌ ಚಾನೆಲ್‌ನ ಸಮೀರ್‌ ಎಂ.ಡಿ.ಯನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ, ಯೂಟ್ಯೂಬ್‌ ಚಾನೆಲ್‌ನಿಂದ ಬರುವ ಆದಾಯ, ಹಂಚಿಕೆ ಇತ್ಯಾದಿಗಳ ಬಗ್ಗೆ ತನಿಖಾಧಿಕಾರಿ ನಾಗೇಶ್‌ ಕದ್ರಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ದೇವಸ್ಥಾನ ಅವಹೇಳನ ಕೃತ್ಯಕ್ಕೆ ಬಳಸಿದ ಎಐ ವಿಡಿಯೋದ ತಾಂತ್ರಿಕ ಸಾಧನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಮೀರ್‌ ಸೋಮವಾರ ಕೂಡ ತನ್ನ ವಕೀಲರ ಜೊತೆ ಸೌಜನ್ಯ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಕಾರಿನಲ್ಲಿ ಪೊಲೀಸ್‌ ಠಾಣೆಗೆ ಆಗಮಿಸಿದರು. ಮಧ್ಯಾಹ್ನ 12.30ರ ಸುಮಾರಿಗೆ ಠಾಣೆಗೆ ಆಗಮಿಸಿದ್ದು, ಸಂಜೆ 6 ಗಂಟೆಯವರೆಗೂ ವಿಚಾರಣೆ ನಡೆಯಿತು. ಇಡೀ ವಿಚಾರಣೆಯ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ.

ತಾಂತ್ರಿಕ ಸಾಕ್ಷ್ಯ ಸಂಗ್ರಹ:

ಸಂಜೆ ವೇಳೆಗೆ ಬೆಳ್ತಂಗಡಿ ಠಾಣೆಗೆ ಎಫ್‌ಎಸ್‌ಎಲ್‌ ವಿಭಾಗದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು (ಸೀನ್‌ ಆಫ್‌ ಕ್ರೈಂ ಆಫೀಸರ್‌) ಆಗಮಿಸಿದರು. ಎಐ ವಿಡಿಯೋಗೆ ಸಂಬಂಧಿಸಿದ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ಸೋಕೋ ತಂಡ ವಶಕ್ಕೆ ಪಡೆದಿದೆ.ಸಮೀರ್‌ ಉಪಯೋಗಿಸಿದ ಹಾರ್ಡ್‌ ಡಿಸ್ಕ್‌, ಪೆನ್‌ ಡ್ರೈವ್‌, ಮೆಮೋರಿ ಕಾರ್ಡ್‌, ಕ್ಯಾಮರಾ, ಮೈಕ್‌, ಮೂಲ ವಿಡಿಯೋ ಸೇರಿದಂತೆ ವಿವಿಧ ವಸ್ತುಗಳನ್ನು ಸೋಕೋ ತಂಡ ವಶಕ್ಕೆ ಪಡೆದಿದೆ. ಇದೇ ವೇಳೆ ದೂತ ಯೂಟ್ಯೂಬ್‌ ಚಾನೆಲ್‌ನ ಲಾಗಿನ್‌ ವಿವರವನ್ನೂ ಪಡೆದುಕೊಂಡಿದೆ. ವಿಡಿಯೋ ಅಪ್‌ಲೋಡ್‌ ಮಾಡಿದ ಸಮಯ, ಲೊಕೇಷನ್‌, ಐಪಿ ವಿಳಾಸ, ಅಪ್‌ಲೋಡ್‌ಗೆ ಬಳಸಿದ ಉಪಕರಣದ ಡಿವೈಸ್‌ ಮತ್ತಿತರ ಸಾಧನಗಳನ್ನು ವಶಪಡಿಸಲಾಗಿದೆ.

ಆದಾಯ ಮೂಲದ ತನಿಖೆ:ಸೋಮವಾರ ಮುಖ್ಯವಾಗಿ, ಸಮೀರ್‌ನ ಯೂಟ್ಯೂಬ್ ಆದಾಯದ ಮೂಲದತ್ತ ಪೊಲೀಸರ ತನಿಖೆ ಕೇಂದ್ರೀಕೃತವಾಗಿತ್ತು. ಪ್ರಕರಣದ ತನಿಖೆಗೆ ಬಹಳ ಮುಖ್ಯವಾದ ಹಣಕಾಸು ವ್ಯವಹಾರದ ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ.

ಹೆಚ್ಚಿನ ಆದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಲು ದಾಖಲೆ ಕೇಳಿದ್ದಾರೆ. ಯೂಟ್ಯೂಬ್‌ ಮಾನಿಟೈಸೇಷನ್‌ ಮೂಲಕ ಬಂದ ಆದಾಯ, ಬ್ಯಾಂಕ್‌ ಖಾತೆಗೆ ವರ್ಗಾವಣೆಯಾದ ಹಣದ ದಾಖಲೆ ಬಗ್ಗೆ ಪ್ರಶ್ನಿಸಲಾಗಿದೆ. ಯೂಟ್ಯೂಬ್ ಚಾನಲ್‌ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬ ವಿವರವನ್ನೂ ತನಿಖಾಧಿಕಾರಿಗಳು ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌