ಶರಣು ಸೊಲಗಿ
ಮುಂಡರಗಿ: ಡಿ. 8ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಹೀಗಾಗಿ ಉತ್ತ ಕರ್ನಾಟಕದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಆಶಯ ಹೊಂದಲಾಗಿದ್ದು, ಈ ಪೈಕಿ ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಮುಂಡರಗಿ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುವುದೇ ಎಂಬ ನಿರೀಕ್ಷೆ ಗರಿಗೆದರಿದೆ.2008ರ ಕ್ಷೇತ್ರ ಮರುವಿಂಗಡನೆಯಲ್ಲಿ ಮುಂಡರಗಿ ಮತಕ್ಷೇತ್ರ ರದ್ದಾಗಿ ಅರ್ಧಭಾಗ ಶಿರಹಟ್ಟಿ ಕ್ಷೇತ್ರಕ್ಕೆ, ಇನ್ನರ್ಧ ಭಾಗ ರೋಣ ಕ್ಷೇತ್ರಕ್ಕೆ ಹಂಚಿಹೋಯಿತು. ಅಂದಿನಿಂದ ಮುಂಡರಗಿ ತಾಲೂಕಿಗೆ ಅನಾಥಪ್ರಜ್ಞೆ ಕಾಡುತ್ತಿದ್ದು, ಎರಡೂ ಕ್ಷೇತ್ರದ ಶಾಸಕರೂ ಸ್ಪಂದಿಸುತ್ತಿದ್ದರಾದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕೆಲಸ, ವಿಶೇಷ ಯೋಜನೆಗಳಾಗಲಿ ಜಾರಿಯಾಗಿಲ್ಲ.
ವಿಳಂಬ ನೀತಿ: ಜಾಲವಾಡಗಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆಗೆ ಈ ಹಿಂದಿನ ಬಿಜೆಪಿ ಸರ್ಕಾರ ₹197.50 ಕೋಟಿ ಹಣ ಕಾಯ್ದಿರಿಸಿತ್ತು. ಹಾಲಿ ಸರ್ಕಾರ ಹಣವನ್ನು ಬಿಡುಗಡೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದೆ. ಆ ಮೂಲಕ ಈ ಭಾಗದಲ್ಲಿನ ರೈತರಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಶಿರಹಟ್ಟಿ, ಗದಗ ಹಾಗೂ ರೋಣ ಮತಕ್ಷೇತ್ರಗಳ ಸುಮಾರು 31 ಕೆರೆಗಳನ್ನು ತುಂಬಿಸಲು ಅನುಕೂಲವಾಗುತ್ತಿದ್ದು, ಹೆಚ್ಚಿನ ಕೆರೆಗಳನ್ನು ಹೊಂದಿರುವ ಗದಗ ಕ್ಷೇತ್ರದ ಶಾಸಕರೇ ಸಚಿವರಾಗಿರುವುದರಿಂದ ಇದಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಹಣವನ್ನು ಬಿಡುಗಡೆ ಮಾಡಿಸಬೇಕಿದೆ.ಸ್ಥಳಾಂತರ ಗ್ರಾಮಗಳ ಸ್ಥಿತಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ತಾಲೂಕಿನ ಬಿದರಳ್ಳಿ, ಗುಮ್ಮಗೋಳ ಹಾಗೂ ವಿಠಲಾಪುರ ಗ್ರಾಮಗಳು ಮುಳುಗಡೆಯಾಗುತ್ತಿದ್ದು, ಈಗಾಗಲೇ ನವಗ್ರಾಮಕ್ಕಾಗಿ ಬಿದರಹಳ್ಳಿ ಹಾಗೂ ಗುಮ್ಮಗೋಳ ಗ್ರಾಮಕ್ಕೆ ಪರಿಹಾರ ನೀಡಿ ನಿವೇಶನಗಳನ್ನೂ ಹಂಚಿಕೆ ಮಾಡಲಾಗಿದೆ.
ಬಿದರಹಳ್ಳಿ ಗ್ರಾಮವು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ನವಗ್ರಾಮಕ್ಕೆ ಸ್ಥಳಾಂತರಗೊಂಡಿದೆ. ಗುಮ್ಮಗೋಳ ಗ್ರಾಮದಲ್ಲಿ ಹೆಚ್ಚಿನ ಮನೆಗಳು ಸ್ಥಳಾಂತರಗೊಂಡಿಲ್ಲ. ಕೇಳಿದರೆ 2010ರಲ್ಲಿ ಪರಿಹಾರ ನೀಡಿದ್ದು, 2016- 17ರಲ್ಲಿ ನಿವೇಶನ ಹಂಚಿಕೆಯಾಗಿದೆ. ಮನೆ ನಿರ್ಮಾಣಕ್ಕೆ ಹಣ ಇಲ್ಲ ಎನ್ನುತ್ತಿದ್ದಾರೆ. ಸರ್ಕಾರ ವಿಶೇಷ ಯೋಜನೆಯಲ್ಲಿ ಎರಡೂ ಗ್ರಾಮಗಳ ಜನರಿಗೆ ಬೇಕಾಗುವಷ್ಟು ಮನೆಗಳನ್ನು ಮಂಜೂರು ಮಾಡಿಸುವುದರ ಜತೆಗೆ ವಿಠಲಾಪುರ ಗ್ರಾಮದ ಸ್ಥಳಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.ಕಪ್ಪತ್ತಗುಡ್ಡ ಅಭಿವೃದ್ಧಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡವನ್ನು ಸರ್ಕಾರ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿದ್ದು, ಇಲ್ಲಿರುವ ನೂರಾರು ಔಷಧಿ ಸಸ್ಯಗಳನ್ನು ಸಂರಕ್ಷಿಸುವುದಕ್ಕಾಗಿ ವಿಶೇಷ ಅನುದಾನ ನೀಡುವುದರ ಜತೆಗೆ ಇಲ್ಲೊಂದು ಆಯುರ್ವೇದ ವಿಶ್ವವಿದ್ಯಾಲಯ ಮಂಜೂರು ಮಾಡಬೇಕಿದೆ. ಆ ಮೂಲಕ ನಶಿಸುತ್ತಿರುವ ಆಯುರ್ವೇದಕ್ಕೆ ಮರುಜೀವ ನೀಡಬೇಕು. ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಉದ್ಯಾನವನ ನಿರ್ಮಿಸಬೇಕೆನ್ನುವುದು ಪರಿಸರವಾದಿಗಳ ಒತ್ತಾಯವಾಗಿದೆ. ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ವಿಶೇಷ ಅನುದಾನ ನೀಡಬೇಕು.
ನಿವೇಶನ ಹಂಚಿಕೆ: ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಮಕೃಷ್ಣ ದೊಡ್ಡಮನಿ ಶಾಸಕರಾಗಿದ್ದಾಗ ಪುರಸಭೆ ವ್ಯಾಪ್ತಿಯ ನಿರಾಶ್ರಿತರಿಗೆ ನಿವೇಶನ ಹಂಚಿಕೆಗಾಗಿ 24 ಎಕರೆ ಜಮೀನು ಖರೀದಿಸಿದ್ದು, ಇದುವರೆಗೂ ನಿವೇಶನ ಹಂಚಿಕೆಯಾಗುತ್ತಿಲ್ಲ. ಶಾಸಕರಾಗಿದ್ದ ರಾಮಣ್ಣ ಲಮಾಣಿ ಅಲ್ಲಿನ ಜಾಗದಲ್ಲಿ 750 ಮನೆಗಳನ್ನು ಮಂಜೂರು ಮಾಡಿಸಿದ್ದರು. ನಿವೇಶನವೇ ಹಂಚಿಕೆಯಾಗದ ಹಿನ್ನೆಲೆ ಮನೆಗಳೂ ನಿರ್ಮಾಣವಾಗಲಿಲ್ಲ.ಇದೀಗ ಪುರಸಭೆಗೆ ಆಡಳಿತಾಧಿಕಾರಿ ನೇಮಿಸಿದ್ದು, ಎಲ್ಲ ನಿರಾಶ್ರಿತರಿಗೆ ನಿವೇಶನ ಹಂಚಿ ಸರ್ಕಾರದಿಂದ ವಿಶೇಷ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡಿಸಬೇಕೆನ್ನುವುದು ನಿರಾಶ್ರಿತರ ಆಗ್ರಹ. ಮುಂಡರಗಿ ಪಟ್ಟಣದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇದ್ದು, ಇಲ್ಲೊಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡುವುದರಿಂದ ಐಟಿಐ ಮುಗಿಸಿದ ಯುವಕರಿಗೆ ಕೌಶಲ್ಯಾಭಿವೃದ್ಧಿಗೊಳಿಸಿಕೊಳ್ಳಲು ಮುಂದಿನ ಕಲಿಕೆಗೆ ಅನುಕೂಲವಾಗುತ್ತದೆ.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಡೆಸುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ತಾಲೂಕಿನ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.ಕೆರೆ ತುಂಬಿಸಿ: ಜಾಲವಾಡಗಿ ಏತ ನೀರಾವರಿ ಯೋಜನೆ ಬಹುದಿನಗಳ ಬೇಡಿಕೆ. ಸರ್ಕಾರ ಶೀಘ್ರವೇ ಟೆಂಡರ್ ಕರೆಯುವ ಮೂಲಕ ಯೋಜನೆ ಪ್ರಾರಂಭಿಸಿ ಮುಂಡರಗಿ, ಶಿರಹಟ್ಟಿ ಗದಗ ಮೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಮೂಲಕ ಎಲ್ಲ ಗ್ರಾಮಗಳ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಾಲವಾಡಗಿ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ ತಿಳಿಸಿದರು.