ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಹಿಂದು ನಿಂದನೆ ಆರೋಪಕ್ಕೆ ಒಳಗಾಗಿರುವ ನಗರದ ಖಾಸಗಿ ಶಾಲೆಯ ಪ್ರಕರಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಯಿತೇ?ಹೀಗೊಂದು ಚರ್ಚೆ ನಾಗರಿಕ ವಲಯದಲ್ಲಿ ವ್ಯಕ್ತವಾಗತೊಡಗಿದೆ. ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಬಿದ್ದು ಪೊಲೀಸರು ಪ್ರಕರಣ ದಾಖಲಿಸಿದರೇ ಎಂಬ ಮಾತು ಕೇಳಿಬರತೊಡಗಿದೆ.
ಜೆರೋಸಾ ಶಾಲೆ ಪ್ರತಿಭಟನೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಇರಲೇ ಇಲ್ಲ. ಹಾಗಿದ್ದರೂ ಅವರ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಮಕ್ಕಳ ಪೋಷಕರ ಪೈಕಿ ಅನಿಲ್ ಜೆರಾಲ್ಡ್ ಲೋಬೋ ಎಂಬವರು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪಡೆಯದೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾಗಿ ಆರೋಪಿಸಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಬಿದ್ದು ಪೊಲೀಸರು ಕೇಸು ದಾಖಲಿಸಿದರೇ ಎಂದು ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಪ್ರಶ್ನಿಸುವಂತಾಗಿದೆ.ಶಾಲಾ ಗೇಟ್ ಬಳಿ ಶಾಸಕ ಭರತ್ ಶೆಟ್ಟಿಯಿಂದಲೂ ಪ್ರಚೋದನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಡಾ.ಭರತ್ ಶೆಟ್ಟಿ ಮತ್ತು ಶರಣ್ ಪಂಪ್‌ವೆಲ್ ಅವರು ದ.ಕ. ಜಿ.ಪಂ ಡಿಡಿಪಿಐ ಕಚೇರಿ ಬಳಿಗೆ ಮಾತ್ರ ಆಗಮಿಸಿದ್ದರು. ಅಲ್ಲಿ ಪೋಷಕರ ಜೊತೆ ತೆರಳಿ ಇವರಿಬ್ಬರು ಡಿಡಿಪಿಐಗೆ ದೂರು ನೀಡಿದ್ದರು. ನಂತರ ಬೆಂಗಳೂರು ಅಧಿವೇಶನಕ್ಕೆ ತೆರಳಲು ಶಾಸಕ ಡಾ.ಭರತ್ ಶೆಟ್ಟಿ ಅವರು ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆಹೋಗಿದ್ದರು. ಶರಣ್ ಪಂಪ್‌ವೆಲ್ ಕೂಡ ಜಿ.ಪಂ.ನಿಂದ ನಿರ್ಗಮಿಸಿದ್ದರು. ಹೀಗಾಗಿ ಇದು ಯಾರದ್ದೋ ಒತ್ತಡಕ್ಕೆ ಬಿದ್ದು ಅನಿಲ್ ಲೋಬೋ ಅವರು ಪೊಲೀಸರಿಗೆ ದೂರು ನೀಡಿದರೇ ಎಂದು ಶಂಕೆ ಪಡುವಂತಾಗಿದೆ.
ತಡರಾತ್ರಿ ವರೆಗೆ ಕಾದು ದೂರು: ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಮುಖಂಡರ ವಿರುದ್ಧ ಪೊಲೀಸರಿಗೆ ದೂರು ನೀಡುವಲ್ಲಿ ಪೋಷಕರಿಗೆ ಸಾಥ್ ನೀಡಿದ್ದು ಕಾಂಗ್ರೆಸ್ ನಾಯಕರು. ಮಾಜಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಬುಧವಾರ ಸಂಜೆಯೇ ದೂರು ನೀಡಲು ನಿಯೋಗ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿತ್ತು. ಆದರೆ ದೂರಿನ ಸತ್ಯಾಸತ್ಯತೆ ಹಾಗೂ ಯಾವ ಸೆಕ್ಷನ್‌ಗಳಡಿ ದೂರು ದಾಖಲಿಸಬಹುದು ಎಂಬ ಬಗ್ಗೆ ಪೊಲೀಸರಿಗೂ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧ ಏಕಾಏಕಿ ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ ಕೇಸು ದಾಖಲಿಸಿದರೆ ಮಾತ್ರ ವಾಪಸ್ ತೆರಳುವುದು ಎಂದು ನಿಯೋಗ ಪಟ್ಟುಹಿಡಿದಿತ್ತು.ಇದೇ ವೇಳೆ ಬೆಂಗಳೂರಿನಲ್ಲಿ ಅಧಿವೇಶನ ನಡೆಯುತ್ತಿದ್ದುದರಿಂದ ಅಲ್ಲಿಂದಲೂ ಸರ್ಕಾರ ಹಾಗೂ ಸಂಬಂಧಪಟ್ಟವರ ಒಪ್ಪಿಗೆ, ಕಾನೂನು ಸಲಹೆ ಪಡೆಯುವಾಗ ವಿಳಂಬವಾಗಿತ್ತು. ಅಂತೂ ಕೊನೆಗೂ ರಾತ್ರಿ 11 ಗಂಟೆ ಕೇಸು ದಾಖಲಿಸಲು ಸಾಧ್ಯವಾಯಿತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತರಗತಿಯಲ್ಲಿ ಹಿಂದು ನಿಂದನೆ ಎಸಗಿಲ್ಲ:ಶಾಲಾ ಆಡಳಿತ ಹೇಳಿಕೆಮಂಗಳೂರು: ತರಗತಿಯಲ್ಲಿ ಹಿಂದು ನಿಂದನೆ ಆರೋಪಕ್ಕೆ ಒಳಗಾಗಿರುವ ಮಂಗಳೂರಿನ ಸಂತ ಜೆರೋಸಾ ಶಾಲಾ ಆಡಳಿತ ಮೌನ ಮುರಿದಿದ್ದು, ಬೇರೆ ಧರ್ಮದ ಧಾರ್ಮಿಕ ಭಾವನೆ ನೋಯಿಸುವ ಕೃತ್ಯ ನಡೆಸಿಲ್ಲ, ನಮ್ಮದೇನು ತಪ್ಪಿಲ್ಲ, ಶಾಸಕರೇ ಹಿಂದುತ್ವವಾದಿಗಳೊಂದಿಗೆ ಆಗಮಿಸಿ ಶಾಲೆ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ಶಾಸಕರ ವಿರುದ್ಧ ಹೇಳಿಕೆ ನೀಡಿದೆ.
ಶಾಲೆಯ ಮುಖ್ಯಗುರು ಅನಿತಾ ಹೆಸರಿನಲ್ಲಿ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಹಿಂದು ನಿಂದನೆ ಆರೋಪಕ್ಕೆ ಒಳಗಾದ ಶಿಕ್ಷಕಿಯ ಪಾಠದ ಬಗ್ಗೆ ಸಮರ್ಥನೆ ಮಾಡಲಾಗಿದೆ. ಅಲ್ಲದೆ ಶಿಕ್ಷಕಿ ವಿರುದ್ಧ ಆಡಿಯೋ ಹರಿಯಬಿಟ್ಟ ಪೋಷಕರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿಯೂ ಹೇಳಲಾಗಿದೆ.ಸಂತೆ ಜೆರಾಸೋ ಶಾಲೆಗೆ 60 ವರ್ಷದ ಇತಿಹಾಸ ಇದೆ. ಆರೋಪಕ್ಕೆ ಒಳಗಾಗಿರುವ ಶಿಕ್ಷಕಿ ಕಳೆದ ಐದು ವರ್ಷದಿಂದ ಪಾಠ ಮಾಡುತ್ತಿದ್ದಾರೆ. ಅವರ ವಿರುದ್ಧ ಇದುವರೆಗೂ ಯಾವುದೇ ದೂರು ಕೇಳಿಬಂದಿರಲಿಲ್ಲ. ರವೀಂದ್ರನಾಥ ಠಾಗೂರ್ ರಚಿಸಿದ ‘ವರ್ಕ್ ಈಸ್ ವರ್ಶಿಪ್’ ಎಂಬ ಕವನವನ್ನು ಬೋಧಿಸುವಾಗ ಶಿಕ್ಷಕಿ ಪ್ರಭಾ ಅವರು ಹಿಂದು ಧರ್ಮ ಮತ್ತು ಪ್ರಧಾನಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಫೆ.10ರಂದು ಕೆಲವು ಪೋಷಕರು ದೂರಿದ್ದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆವು. ಆದರೆ ವಿಚಾರಣೆ ವೇಳೆ ಶಿಕ್ಷಕರು ಆರೋಪವನ್ನು ನಿರಾಕರಿಸಿದ್ದರು. ಅಲ್ಲದೆ ಕವನದಲ್ಲಿದ್ದಂತೆ ಪಾಠ ಮಾಡಿದ್ದೇ ವಿನಃ ಬೇರೇನನ್ನೂ ಹೇಳಿರಲಿಲ್ಲ. ಆದರೆ ಶಾಲಾ ಶಿಕ್ಷಕಿ ವಿರುದ್ಧ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಹಿಂದು ನಿಂದನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ ಎಂದಿದ್ದಾರೆ.
ಈ ಕುರಿತು ಫೆ.12ರಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ವಿವರಣೆ ನೀಡಲಾಗಿದೆ. ಶಾಲೆಗೆ ಭೇಟಿ ನೀಡಿದಾಗಲೂ ಮಾಹಿತಿ ನೀಡಲಾಗಿದೆ. ನಂತರ ಶಾಸಕರು ಆಗಮಿಸಿದಾಗಲೂ ಅವರನ್ನು ಗೌರವದಿಂದ ಶಾಲೆಗೆ ಆಹ್ವಾನಿಸಲಾಗಿದೆ. ಆದರೆ ಅವರು ಒಳಗೆ ಬರಲು ನಿರಾಕರಿಸಿದ್ದಾರೆ. ಶಾಲೆ ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿದ್ದಾರೆ. ಶಾಸಕರೇ ಮಕ್ಕಳನ್ನು ಸೇರಿಸಿ ಶಾಲೆ ವಿರುದ್ಧವೇ ಘೋಷಣೆ ಕೂಗಲು ಪ್ರಚೋದಿಸಿದ್ದಾರೆ. ಬಳಿಕ ನಾನು ಗೇಟಿನ ಬಳಿ ತೆರಳಿದಾಗ, ತಕ್ಷಣವೇ ತಪ್ಪಿತಸ್ಥ ಶಿಕ್ಷಕಿಯನ್ನು ವಜಾಗೊಳಿಸುವಂತೆ ಶಾಸಕರು ಆಗ್ರಹಿಸಿದ್ದಾರೆ. ವಿಚಾರಣೆ ನಡೆಸದೆ ವಜಾಗೊಳಿಸುವಂತಿಲ್ಲ ಎಂದು ನಾನು ಮನವರಿಕೆ ಮಾಡಿದರೂ ಅವರು ಒತ್ತಡ ಹಾಕಿದ್ದಾರೆ. ಹಾಗಾಗಿ ನಾನು ಪರಿಸ್ಥಿತಿ ನಿಭಾಯಿಸಲು ಶಿಕ್ಷಕಿಯನ್ನು ವಜಾಗೊಳಿಸುವುದಾಗಿ ಹೇಳಲಾಯಿತು ಎಂದು ಮುಖ್ಯಶಿಕ್ಷಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.