ಕನಕಗಿರಿ: ನಾನು ಸಂಸ್ಕಾರವಂತ ಕುಟುಂಬದಿಂದ ಬಂದಿದ್ದು, ಬಿಜೆಪಿಯವರಂತೆ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸುವ ಕೆಲಸ ಮಾಡಿಲ್ಲ ಎಂದು ಮಾಜಿ ಶಾಸಕ ಬಸವರಾಜ ದಡೇಸ್ಗೂರು ವಿರುದ್ಧ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಹರಿಹಾಯ್ದರು.
ಕ್ಷೇತ್ರದಲ್ಲಿ ಎಲ್ಲೇ ಹೋಗಲಿ ಜನತೆ ರಸ್ತೆ ರಸ್ತೆ ಎಂದು ಕೇಳುತ್ತಿದ್ದಾರೆ. ಈ ಹಿಂದಿನ ಶಾಸಕ ರಸ್ತೆ ಅಭಿವೃದ್ಧಿ ಮಾಡದಿರುವುದೇ ಇದಕ್ಕೆಲ್ಲ ಕಾರಣ. ರಸ್ತೆ ನಿರ್ಮಾಣಕ್ಕೆ ಅತಿ ಹೆಚ್ಚಿನ ಅನುದಾನ ತರಲಾಗುತ್ತಿದೆ. ಬೆರಳೆಣಿಕೆಯಷ್ಟು ಗ್ರಾಮಗಳಿಗೆ ತಗಲುವ ಕನಕಗಿರಿಯಿಂದ ಯತ್ನಟ್ಟಿ ರಸ್ತೆ ನಿರ್ಮಾಣಕ್ಕೆ ₹೩೮ ಕೋಟಿ ವ್ಯಯ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ. ಅಲ್ಲದೇ ೬.೩ ಕಿಮೀ ಬಸರಿಹಾಳ ನಾಗಲಾಪುರ ರಸ್ತೆ ಸುಧಾರಣೆ ಮಾಡಲಾಗುತ್ತಿದ್ದು, ₹ ೭.೫ ಕೋಟಿ ವೆಚ್ಚದಲ್ಲಿ ಕನಕಗಿರಿಯಿಂದ ಚಿಕ್ಕತಾಂಡಾ ೫.೮ ಕಿಮೀ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ₹೩೫ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಾಗುವುದು. ಕನಕಗಿರಿಯಿಂದ ದೇವಲಾಪುರ ರಸ್ತೆಗೆ ₹೨೦ ಕೋಟಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಸ್ಥರಿಂದ ಮನವಿ: ಬಸರಿಹಾಳ ಗ್ರಾಮದಲ್ಲಿ ವಸತಿ ಶಾಲೆ ಆರಂಭಿಸಬೇಕು ಹಾಗೂ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಬೇಕು. ಶಾಲೆಗೆ ಶಿಕ್ಷಕರ ಕೊರತೆಯಿದ್ದು, ಶಿಕ್ಷಕರನ್ನು ಒದಗಿಸಬೇಕು. ₹೨ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.ಗ್ರಾಮಸ್ಥರ ಮನವಿಗೆ ಉತ್ತರಿಸಿದ ಸಚಿವರು, ₹೨ ಕೋಟಿ ವೆಚ್ಚದಲ್ಲಿ ಕನಕಗಿರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ. ವಸತಿ ಶಾಲೆ ಆರಂಭಕ್ಕೆ ಕೆಲ ಷರತ್ತುಗಳಿವೆ ಎಂದ ಅವರು, ಪ್ರೌಢಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ಭಾಗದ ಶಿಕ್ಷಕರೇ ನೇಮಕವಾಗುವುದರಿಂದ ಶೀಘ್ರವೇ ಶಿಕ್ಷಕರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಡಿಸಿಸಿ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ಶರಣೇಗೌಡ, ಅನಿಲ್‌ಕುಮಾರ ಬಿಜ್ಜಳ, ರಾಜಾಸಾಬ್ ನಂದಾಪುರ, ನಾಗಪ್ಪ ಹುಗ್ಗಿ ಇತರರಿದ್ದರು.