ಕನ್ನಡಪ್ರಭ ವಾರ್ತೆ ನಾಗಮಂಗಲ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಮಠವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಕ್ಷೇತ್ರದಲ್ಲಿ ಬೆಳಗಿನಿಂದಲೇ ಹೋಮ ಹವನಾದಿ ಪೂಜಾ ಕೈಂಕರ್ಯಗಳು ನಡೆದವು. ಕ್ಷೇತ್ರದ ಅಧಿದೇವತೆಗಳಾದ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ, ಅಭಿಷೇಕಾದಿ ಕೈಂಕರ್ಯಗಳು ನೆರವೇರಿದವು. ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥಸ್ವಾಮಿ ಅವರ ಪಾದುಕಾಭಿಷೇಕವನ್ನು ಚುಂಚಶ್ರೀಗಳು ಸಾಂಗವಾಗಿ ನೆರವೇರಿಸಿದರು.
ಅಖಂಡ ಭಜನೆ:ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಠದಲ್ಲಿ ಆಯೋಜಿಸಿದ್ದ ಅಖಂಡ ಭಜನೆ ಕಾರ್ಯಕ್ರಮಕ್ಕೆ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬೆಳಗ್ಗೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಜಾನಪದ ಕಲಾವಿದರು, ಶ್ರೀಮಠದ ಸಾಧು ಸಂತರು, ವಿದ್ಯಾರ್ಥಿಗಳು, ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು.
ಜ್ವಾಲಾಪೀಠಾರೋಹಣ:
ಕ್ಷೇತ್ರದ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವನ್ನು ಶ್ರೀಗಳು ನೆರವೇರಿಸಿದರು. ನಿರ್ಮಲಾನಂದನಾಥಶ್ರೀಗಳು ಉಪವಾಸವಿದ್ದು, ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಕುಳಿತು ಶ್ರೀ ಕಾಲಭೈರವಸ್ವಾಮಿ ಸೇರಿದಂತೆ ಶ್ರೀಕ್ಷೇತ್ರದ ದೇವತೆಗಳಿಗೆ ತ್ರಿಕಾಲ ಪೂಜೆ ನೆರವೇರಿಸಿದರು.ಜ್ವಾಲಾಪೀಠಾರೋಹಣಕ್ಕೂ ಮೊದಲು ಶ್ರೀಗಳು ಸರ್ವಾಲಂಕಾರಭೂಷಿತರಾಗಿ ಚಿನ್ನದ ಕಿರೀಟವನ್ನು ಧರಿಸಿ ಶ್ರೀಮಠದ ವೇದ ಪಂಡಿತರು ಮತ್ತು ವಟುಗಳ ವೇದ ಘೋಷಣೆಯೊಂದಿಗೆ ಸಾವಿರಾರು ಭಕ್ತರ ನಡುವೆ ರಾಜ ಗಾಂಭೀರ್ಯದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು.
ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಮತ್ತು ಪರಿವಾರ ದೇವತೆಗಳಿಗೆ ಪೂಜೆ ನೆರವೇರಿಸಿದರು. ನಂತರ ಮೆರವಣಿಯಲ್ಲೇ ಸಾಗಿ ಬಂದು ಶ್ರೀಮಠದ ಸಂಪ್ರದಾಯದಂತೆ ಜ್ವಾಲಾಪೀಠಕ್ಕೆ ಪೂಜೆ ನೆರವೇರಿಸಿ ಜ್ವಾಲಾಪೀಠಾರೋಹಣ ನೆರವೇರಿಸಿದರು.ಜ್ವಾಲಾಪೀಠದ ಮಹಿಮೆ:
ಜ್ವಾಲಾಪೀಠಾರೋಹಣ ಸ್ಥಳ ಪರಶಿವರನು ತಪಸ್ಸನ್ನು ಮಾಡಿದ ಸ್ಥಳವೆಂಬ ಐತಿಹ್ಯವಿದೆ. ಶ್ರೀಮಠದ ಪೀಠಾಧ್ಯಕ್ಷರು ವರ್ಷದಲ್ಲಿ ಮೂರು ಬಾರಿ ಮಾತ್ರ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವರು. ಜಾತ್ರಾ ಸಮಯದಲ್ಲಿ, ಶರನ್ನವರಾತ್ರಿ ಮತ್ತು ಮಹಾಶಿವರಾತ್ರಿಯಂದು ಪೀಠಾರೋಹಣ ನಡೆಯಲಿದೆ.ಬುಧವಾರ ಮಹಾಶಿವರಾತ್ರಿಯಂದು ಚುಂಚಶ್ರೀಗಳು ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ಶ್ರೀಗಳು ಜ್ವಾಲಾಪೀಠದಲ್ಲಿ ಧ್ಯಾನಸ್ಥರಾಗಿ ಕುಳಿತು ದರ್ಶನ ನೀಡುವುದು ಕೈಲಾಸದಲ್ಲಿ ಪರಶಿವನನ್ನು ದರ್ಶನ ಮಾಡಿದಷ್ಟೇ ಫಲಾಪೇಕ್ಷೆ ಸಿಗುತ್ತದೆ ಎಂಬುದು ಶ್ರೀಕ್ಷೇತ್ರದ ಭಕ್ತರ ನಂಬಿಕೆ.