ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಶನಿವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥ ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಶ್ರೇಷ್ಠ ಪರಂಪರೆ, ಸಂಸ್ಕೃತಿ ಇದೆ. ಜಗತ್ತಿನಲ್ಲಿಯೇ ಅತ್ಯಂತ ಸಿರಿವಂತ ಭಾಷೆ ಕನ್ನಡವಾಗಿದೆ. ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಯಾಗಿದ್ದರೂ, ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಉಳಿಸಲು ಹೋರಾಡುವ ಪರಿಸ್ಥಿತಿ ಬಂದೊದಗಿದೆ ಎಂದರು.
ರಾಷ್ಟ್ರದಲ್ಲಿಯೇ ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕವಾಗಿದೆ, ಆದರೆ ಕೇಂದ್ರದಿಂದ ಬರುವ ಅನುದಾನ ಮಾತ್ರ ಇತರೆ ಎಲ್ಲಾ ರಾಜ್ಯಗಳಿಗಿಂತಲೂ ಕಡಿಮೆ. ಇಂತಹ ತಾರತಮ್ಯ ಹೋಗಲಾಡಿಸುವ ಕಾರ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಕ್ಕೋರಲಿನಿಂದ ಹೋರಾಟ ಮಾಡಬೇಕಿದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿ ಮಾತನಾಡಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಉತ್ಕೃಷ್ಟ ಸಮ್ಮೇಳನವಾಗಿದೆ. ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಹೊರಡಿಸುತ್ತಿರುವುದು ಇದು ಪ್ರಥಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಮಂಡ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ತಿಳಿಸಿದರು.
ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ :
ಭಾಲ್ಕಿ ತಾಲೂಕಿನ ಗಡಿ ಸಾಯಿಗಾಂವ್ ಹತ್ತಿರ ಶನಿವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥಯಾತ್ರೆಗೆ ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಿಕೊಳ್ಳಲಾಯಿತು. ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೆರೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಇದ್ದರು.