ಆಹಾರವನ್ನು ಜೀರ್ಣವಾಗಿಸಿ ದೇಹಕ್ಕೆ ಚೈತನ್ಯವನ್ನು ತುಂಬುವುದು ಜಠರಾಗ್ನಿಯ ದೊಡ್ಡ ಪವಾಡವಾಗಿದ್ದು, ಸೇವಿಸಿದ ಆಹಾರವನ್ನೇ ದೇಹ ಹಾಗೂ ಜೀವಿಯ ಭಾವವನ್ನಾಗಿ ಪರಿವರ್ತಿಸುವುದು ನಿಜವಾಗಿ ಚಮತ್ಕಾರವೇ ಆಗಿದೆ.
ಪ್ರತಿಯೊಬ್ಬ ಜೀವಿಯೊಳಗೂ ಅಗ್ನಿರೂಪದಲ್ಲಿ ಭಗವಂತ ನೆಲೆಸಿದ್ದಾನೆ । ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಮೂಲಗಳೇ ದೇವರು
ಕನ್ನಡಪ್ರಭ ವಾರ್ತೆ ಗೋಕರ್ಣ
ಆಹಾರವನ್ನು ಜೀರ್ಣವಾಗಿಸಿ ದೇಹಕ್ಕೆ ಚೈತನ್ಯವನ್ನು ತುಂಬುವುದು ಜಠರಾಗ್ನಿಯ ದೊಡ್ಡ ಪವಾಡವಾಗಿದ್ದು, ಸೇವಿಸಿದ ಆಹಾರವನ್ನೇ ದೇಹ ಹಾಗೂ ಜೀವಿಯ ಭಾವವನ್ನಾಗಿ ಪರಿವರ್ತಿಸುವುದು ನಿಜವಾಗಿ ಚಮತ್ಕಾರವೇ ಆಗಿದೆ. ಈ ಕ್ರಿಯೆ ನಿತ್ಯ ಸ್ವಯಂಚಾಲಿತವಾಗಿ ನಡೆಯುತ್ತಿರುವುದರಿಂದ ಇದು ದೊಡ್ದ ಪವಾಡವೆಂಬುದು ನಮಗೆ ಭಾಸವಾಗುತ್ತಿಲ್ಲವಷ್ಟೇ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಗುರುವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಜಠರಾಗ್ನಿಯ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ವಾಹನದಲ್ಲಿ ಸ್ಪಾರ್ಕ್ ಪ್ಲಗ್ ಶಕ್ತಿಯನ್ನು ಹೊತ್ತಿಸಿ ವಾಹನ ಚಲಿಸುವಂತೆ ಮಾಡುತ್ತದೆ. ಹಾಗೆಯೇ ಜಠರಾಗ್ನಿಯು ಆಹಾರವನ್ನು ಶಕ್ತಿಯಾಗಿಸಿ ದೇಹಕ್ಕೆ ಚೈತನ್ಯ ಒದಗಿಸುತ್ತದೆ. ಆಹಾರ ಸೇವನೆಯ ಬಳಿಕ ದೇಹದಲ್ಲಿ ಜೀರ್ಣಕ್ರಿಯೆ ಆರಂಭವಾಗುತ್ತದೆ. ಹಸಿವು, ಜೀರ್ಣಕ್ರಿಯೆ ಹಾಗೂ ದೇಹದ ಉಷ್ಣತೆಯೊಂದಿಗೆ ಜಠರಾಗ್ನಿಗೆ ಸಂಬಂಧವಿದೆ ಎಂದು ಭಾರತೀಯ ವೈದ್ಯಪರಂಪರೆ ವಿವರಿಸುತ್ತದೆ. ಈ ಅಗ್ನಿಯ ಸಮತೋಲನದಲ್ಲಿ ವ್ಯತ್ಯಯ ಉಂಟಾದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಮೂಲಗಳನ್ನು ದೇವರೆಂದು ಭಾವಿಸಲಾಗಿದೆ. ಆಹಾರವನ್ನು ಜೀರ್ಣವಾಗಿಸಿ, ದೇಹಕ್ಕೆ ಶಕ್ತಿತುಂಬುವ ಜಠರಾಗ್ನಿಯನ್ನೂ ದೇವರೆಂದೇ ಪರಿಭಾವಿಸಲಾಗಿದ್ದು, ಬ್ರಹ್ಮ ರೂಪವಾದ ಅನ್ನವನ್ನೇ ಜೀರ್ಣಮಾಡುತ್ತದೆ ಎಂದರೆ ಅಗ್ನಿಯು ಅಷ್ಟೇ ದೊಡ್ದ ಶಕ್ತಿಯಾಗಿರಲೇ ಬೇಕು. ಆಧುನಿಕ ವಿಜ್ಞಾನವು ಜಠರಾಗ್ನಿಯನ್ನು ಸ್ಟೊಮಕ್ ಆಸಿಡ್ ಎಂದು ಹೇಳಿದ್ದು, ಇದು ಅಗ್ನಿಯ ಗುಣಲಕ್ಷಣಗಳನ್ನೇ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಪಶ್ಚಿಮಘಟ್ಟ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಸಾಮಾಜಿಕ ಕಾರ್ಯಕರ್ತ ಡಾ. ಜಿ.ಜಿ. ಹೆಗಡೆ, ಜಿ.ಎಸ್. ಹೆಗಡೆ ಶ್ರೀಗಳಿಂದ ಆಶೀರ್ವಾದ ಪಡೆದರು.
ಕುಮಟಾ ಹವ್ಯಕ ಮಂಡಲದ ಮೂರೂರು ಕಲ್ಲಬೆ, ಹೆಗಡೆ, ಗುಡೆ ಅಂಗಡಿ, ಉಪ್ಪಿನ ಪಟ್ಟಣ, ಗೋವಾ, ಅಚವೆ ಹವ್ಯಕ ವಲಯಗಳ ಪರವಾಗಿ ದತ್ತಾತ್ರೆಯ ಚಂದ್ರಶೇಖರ್ ಭಟ್ ದಂಪತಿ ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ವೇ.ಮೂ. ಕೇಶವಪ್ರಸಾದ್ ಭಟ್ಟ ಕೂಟೇಲು, ಜಿ.ಎಸ್. ಭಟ್ಟ ಉಪ್ಪುಂದ, ಸೌಮ್ಯ ಮಧ್ಯಸ್ಥ, ದಿನ ಪ್ರಧಾನ ಸುಬ್ರಾಯ ಹೆಗಡೆ ಮಾನ್ಯ ದಂಪತಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.