ಅಂಚೆ ಸೇವೆ ಹೆಸರಿನಲ್ಲಿ ವಂಚನೆ : ವೈದ್ಯರಿಂದ 21 ಲಕ್ಷ ರೂ. ಕಸಿದುಕೊಂಡ ಕಿಲಾಡಿಗಳು

KannadaprabhaNewsNetwork | Updated : Sep 03 2024, 05:31 AM IST

ಸಾರಾಂಶ

ಭಾರತೀಯ ಅಂಚೆ ಸೇವೆಯ ಹೆಸರಿನಲ್ಲಿ ಕರೆ ಮಾಡಿ ವೈದ್ಯರೊಬ್ಬರಿಗೆ ಸುಮಾರು 21,37,530 ರೂಗಳನ್ನು ವಂಚಿಸಲಾಗಿದೆ. ವಂಚಕರು ವೈದ್ಯರ ಮೊಬೈಲ್‌ಗೆ ಕರೆ ಮಾಡಿ ಅಂತಾರಾಷ್ಟ್ರೀಯ ಪಾರ್ಸೆಲ್ ಹಿಂತಿರುಗಿ ಬಂದಿದೆ ಎಂದು ತಿಳಿಸಿ, ನಂತರ ಪೊಲೀಸ್ ಐಡಿ ಮತ್ತು ನಿಷಿದ ವಸ್ತುಗಳು ಪತ್ತೆಯಾಗಿವೆ ಎಂದು ಹೆದರಿಸಿದ್ದಾರೆ.

 ದಾಬಸ್‌ಪೇಟೆ : ಭಾರತೀಯ ಅಂಚೆ ಸೇವೆಯ ಹೆಸರಿನಲ್ಲಿ ಕರೆ ಮಾಡಿ ವೈದ್ಯರೊಬ್ಬರಿಗೆ ಸುಮಾರು 21,37,530 ರೂಗಳನ್ನು ವಂಚಿಸಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಕೃಷ್ಣಾಪುರ ಗ್ರಾಮದ ವೈದ್ಯ ಡಾ.ಶುಭಾಕರ್ ಎಂಬುವವರ ಮೊಬೈಲ್ ನಂಬರ್ ಗೆ ಆ.29ರಂದು ಬೆಳಿಗ್ಗೆ 9 ಗಂಟೆಗೆ 9111162506 ನಂಬರ್ ನಿಂದ ಕರೆ ಬಂದಿದ್ದು, ನಾವು ಭಾರತೀಯ ಅಂಚೆ ಸೇವೆಯಿಂದ ಮಾತನಾಡುತ್ತಿದ್ದು, ನೀವು ಕಳುಹಿಸಿರುವ ಅಂತಾರಾಷ್ಟ್ರೀಯ ಪಾರ್ಸಲ್ ಹಿಂದುರುಗಿ ಬಂದಿದ್ದು, ನೀವು ಕಳುಹಿಸಿಲ್ಲವಾದರೆ ನಾವು ಹೇಳುವ ಐದು ಸಂಖ್ಯೆಯನ್ನು ಒತ್ತಿ ದೂರು ನೀಡುವಂತೆ ತಿಳಿಸಿದ್ದು, ಅದರಂತೆ ಇವರು ಐದು ಸಂಖ್ಯೆಯನ್ನು ಒತ್ತಿದ್ದಾರೆ. 

ನಂತರ ನೀವು ಮುಂಬೈನಿಂದ ದುಬೈಗೆ ಕಳುಹಿಸಿದ್ದ ಪಾರ್ಸಲ್ ನಲ್ಲಿ ಪೊಲೀಸ್ ಯೂನಿಫಾರ್ಮ 13 ಪೊಲೀಸ್ ಐಡಿಗಳು, 150 ಗ್ರಾಂ ಕಿಮಿಟನ್ ಔಷಧಿ, 3 ಡೆಬಿಟ್ ಕಾರ್ಡ್ಗಳಿವೆ ಎಂದು ಹೇಳಿದ್ದಾರೆ ಆಗ ಇವರು ನಾನು ಯಾವುದೇ ಪಾರ್ಸ ಲ್ ಕಳುಹಿಲ್ಲ ಎಂದು ಹೇಳಿದರೂ ಅವರು ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಯಾರಿಗೂ ಕರೆಯನ್ನು ವರ್ಗಾವಣೆ ಮಾಡಿದ್ದು ಅವರು ಮುಂಬೈ ಪೊಲೀಸ್ ಎಂದು ಮಾತನಾಡಿದ್ದಾರೆ.

ಆಗ ಅವರು 9038467587 ನಂಬರ್ ನಿಂದ ವಾಟ್ಸ್ ಪ್ ವಿಡಿಯೋ ಕಾಲ್ ಮಾಡಿ ವೆರಿಫೆಕೇಷನ್ ಮಾಡಬೇಕೆಂದು ಆಧಾರ್ ಕಾರ್ಡ್ ಹಾಗೂ ಪೋಟೋವನ್ನು ತೆಗೆದುಕೊಂಡಿದ್ದು, ನಿಮ್ಮ ಆಧಾರ್ ಸಂಖ್ಯೆಯ ಮೇಲೆ ಭಯೋತ್ಪಾದನೆ, ಮನುಷ್ಯರ ಕಳ್ಳ ಸಾಗಣೆ, ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದು, ನಿಮ್ಮನ್ನು ತ್ವರಿತಗತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕು. ನಿಮಗೆ ಯಾವುದೇ ಜಾಮೀನು ಸಿಗುವುದಿಲ್ಲ, ನಿಮ್ಮ ಕೇಸ್ ನ್ನು ನಾವೇ ತನಿಖೆಗೆ ಮಾಡುತ್ತೇವೆಂದು ಎಂದು ಹೆದರಿಸಿದ್ದಾರೆ.

ನಂತರ ಆ.30ರ ಸಂಜೆ 6 ಗಂಟೆಯುವರೆಗೂ ಅನ್ ಲೈನ್ ನಲ್ಲಿಯೇ ಇರುವಂತೆ ಮಾಡಿ ಇವರ ಮೊಬೈಲ್ ನ್ನು ಸ್ಕ್ರೀನ್ ಶೇರಿಂಗ್ ಮೂಲಕ ಅವರ ಹತೋಟಿಗೆ ತೆಗೆದುಕೊಂಡು ಕುಟುಂಬದ ಸದಸ್ಯರ ವಿವರಗಳನ್ನು ಪಡೆದುಕೊಂಡು, ನೀವು ವೈದ್ಯರಾಗಿದ್ದು, ಚಿಕ್ಕ ಮಗು ಇದೆ ನಾವು ಹೇಳಿದಂತೆ ನೀವು ಕೇಳಿದರೆ ನಿಮ್ಮನ್ನು ಈ ಕೇಸ್ ನಿಂದ ಪಾರು ಮಾಡುತ್ತೇವೆಂದು ತಿಳಿಸಿ ಈ ವಿಷಯವನ್ನು ಯಾರಿಗೂ ತಿಳಿಸಬಾರದು ಹಾಗೂ ಯಾರ ಜೊತೆಯೂ ಮಾತನಾಡಬಾರದು. ಇಲ್ಲದಿದ್ದರೆ ನಿಮ್ಮ ಗೌರವವನ್ನು ಹಾಳು ಮಾಡುತ್ತೇವೆ ಎಂದು ಹೆದರಿಸಿದ್ದಾರೆ.

ನಂತರ ನಮ್ಮ ಡಿಸಿಪಿ ಅವರು ಮಾತನಾಡುತ್ತಾರೆಂದು ಹೇಳಿ ಬೇರೆಯವರಿಗೆ ಪೋನ್ ಕೊಟ್ಟಿದ್ದು ಅವರು ಆರ್ ಬಿ ಐ ಮಾರ್ಗಸೂಚಿಯಂತೆ ತನಿಖೆಗೆ ಸಹಕರಿಸಿ ಎಂದು ಹೇಳಿ ನಮ್ಮ ಆರ್ ಬಿ ಐ ಅಡಿಟರ್ ಜೊತೆಯಲ್ಲಿ ಮಾತನಾಡಿ ಎಂದು ಹೇಳಿದಾಗ ಆತ ನಾನು ಮ್ಯಾಥೂಸ್ ಅಂತ ಪರಿಚಯ ಮಾಡಿಕೊಂಡಿದ್ದು, ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಬೇಕಿದೆ ಹಣದ ಅವಶ್ಯಕತೆಯಿದೆ ಎಂದು ಹೇಳಿ ಮಾಹಿತಿ ಪಡೆದು ಖಾತೆಯಿಂದ ಹಂತ ಹಂತವಾಗಿ ಒಟ್ಟು 21,37,530 ರು.ಗಳನ್ನು ಆರ್ ಟಿಜಿಎಸ್ ಮುಖಾಂತರ ಪಡೆದು ವಂಚಿಸಿದ್ದಾರೆ. ಮೊದಲ ದಿನ ಸುಮ್ಮನಿದ್ದ ವೈದ್ಯರು ಮರುದಿನ ತಮ್ಮ ಸ್ನೇಹಿತರ ಬಳಿ ಘಟನೆ ಕುರಿತು ಹೇಳಿದಾಗ ತಾವು ವಂಚನೆಗೆ ಒಳಪಟ್ಟಿರುವ ಗೊತ್ತಾಗಿದೆ. ಈ ಬಗ್ಗೆ ದಾಖಲೆ ಸಮೇತ ವೈದ್ಯ ಡಾ.ಶುಭಾಕರ್ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share this article