ಡಿಜಿಟಲ್‌ ಅರೆಸ್ಟ್ ಸೈಬರ್‌ ಕ್ರೈಮ್‌ನ ಹೊಸ ವರಸೆ!

KannadaprabhaNewsNetwork |  
Published : Oct 19, 2024, 12:16 AM IST
18ಕೆಪಿಎಲ್21 ಡಿಜಿಟಲ್ ಆರೆಸ್ಟ್ ಕುರಿತು ಕೊಪ್ಪಳ ಪೊಲೀಸ್ ಇಲಾಖೆಯಿಂದ ಜಾಗೃತಿ. | Kannada Prabha

ಸಾರಾಂಶ

ಕೊಪ್ಪಳದ ಯುವಕನೊಬ್ಬನಿಗೆ ದೂರವಾಣಿ ಕರೆ ಮಾಡಿ ಬೆದರಿಸಿ, ಡಿಜಿಟಲ್ ಅರೆಸ್ಟ ಮಾಡಲಾಗಿದೆ. ಆತನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಪ್ರಯತ್ನ ನಡೆದಿದೆ. ಆದರೆ ಸ್ಥಳೀಯ ಪೊಲೀಸ ಅಧಿಕಾರಿ ಮಧ್ಯಪ್ರವೇಶಿಸಿ ತಡೆದಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ನಿಮ್ಮನ್ನು ನಿಮ್ಮ ಮನೆಯಲ್ಲಿಯೇ ಸಿಬಿಐ ಅಧಿಕಾರಿಗಳು ಬಂಧಿಸಬಹುದು!

ಹೌದು, ಆದರೆ, ಇವರು ಅಸಲಿ ಅಧಿಕಾರಿಗಳು ಅಲ್ಲವೇ ಅಲ್ಲ. ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಯ ಅಧಿಕಾರಿಗಳ ಅಥವಾ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಖರೀಮರು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಬಹುದು. ಇದಾದ ಮೇಲೆ ತನಿಖೆಯ ನೆಪದಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರ, ಪಾಸ್‌ವರ್ಡ್, ಒಟಿಪಿ ಪಡೆದು, ನಿಮ್ಮ ಖಾತೆಯಲ್ಲಿರುವ ಹಣ ಪೀಕಬಹುದು ಅಥವಾ ಬೆದರಿಸಿಯಾದರೂ ನಿಮ್ಮಿಂದ ಹಣ ಕೀಳಬಹುದು.

ನಿಮ್ಮಿಂದಲೇ ನಿಮ್ಮ ವಿವರ ಪಡೆದುಕೊಂಡು, ನಿಮಗೆ ಪಾರ್ಸಲ್ ಬಂದಿದೆ ಎಂದು ಹೇಳುವುದು, ಇದಾದ ಬಳಿಕ ಬಂದಿರುವ ಪಾರ್ಸಲ್‌ನಲ್ಲಿ ಗಾಂಜಾ, ಚರಸ್ ಮೊದಲಾದ ವಸ್ತುಗಳಿವೆಯಲ್ಲ ಎಂದು ಹೇಳಿ, ನಿಮ್ಮನ್ನು ನಿಮ್ಮ ಮನೆಯಲ್ಲಿಯೇ ಡಿಜಿಟಲ್ ಅರೆಸ್ಟ್ ಮಾಡುತ್ತಾರೆ. ನೀವು ಭಯಗೊಂಡಿದ್ದನ್ನು ಖಚಿತಪಡಿಸಿಕೊಂಡು, ಹಣ ವಸೂಲಿ ಮಾಡುತ್ತಾರೆ. ಇದರಿಂದ ನಿಮ್ಮನ್ನು ಪಾರು ಮಾಡುತ್ತೇವೆ ಎಂದು ಹೇಳಿ ಸುಲಿಗೆ ಮಾಡುತ್ತಾರೆ.

ಸಿಕ್ಕಿಬಿದ್ದಿದ್ದ ಕೊಪ್ಪಳ ಯುವಕ: ಹೀಗೆ ಕೊಪ್ಪಳ ಯುವಕನೋರ್ವನಿಗೆ ಆನ್‌ಲೈನ್ ಕರೆ ಬಂದಿದೆ. ನಿಮಗೆ ಪಾರ್ಸಲ್‌ ಬಂದಿದೆ ಎಂದಿದ್ದಾರೆ. ಅದರಲ್ಲಿ ಲ್ಯಾಪ್‌ಟಾಪ್ ಇದೆ ಎಂದಿದ್ದಾರೆ. ಆನಂತರ ವಿಳಾಸ ಖಚಿತ ಮಾಡಿದ ಮೇಲೆ ಮತ್ತೊಬ್ಬರು ಕರೆ ಮಾಡಿ ಪಾರ್ಸಲ್‌ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಅದಾದ ಮೇಲೆ ಪಾರ್ಸಲ್‌ನಲ್ಲಿ ಗಾಂಜಾ, ಚರಸ್ ಮೊದಲಾದ ವಸ್ತುಗಳಿವೆ ಎಂದು ಹೆದರಿಸಿದ್ದಾರೆ. ಅವರು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ತಕ್ಷಣ ಮುಂಬೈಗೆ ಬನ್ನಿ, ತನಿಖೆ ಮಾಡಬೇಕು ಎಂದಿದ್ದಾರೆ. ಇದರಿಂದ ಯುವಕ ಸುಸ್ತಾಗಿದ್ದಾನೆ.

ಬರಲು ಕಷ್ಟವಾದರೆ ತಕ್ಷಣ ಸ್ಕೈಪ್‌ (ಇದರಲ್ಲಿ ಕರೆ, ದೂರವಾಣಿ ಸಂಖ್ಯೆಯ ಮಾಹಿತಿ ಸಿಗುವುದಿಲ್ಲ. ಇದಕ್ಕಾಗಿಯೇ ಈ ಆ್ಯಪ್ ಮೂಲಕ ವ್ಯವಹರಿಸುತ್ತಾರೆ) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮನೆಯಿಂದಲೇ ತನಿಖೆಗೆ ಸಹಕರಿಸಿ ಎಂದಿದ್ದಾರೆ.

ಸ್ಕೈಪ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಮೇಲೆ ವಿಡಿಯೋ ಕಾಲ್ ಮಾಡಿದ್ದಾರೆ. ವಿಡಿಯೋ ಕಾಲ್ ಮೂಲಕ ಸಿಬಿಐ ಅಧಿಕಾರಿಗಳ ವೇಷದಲ್ಲಿ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದ್ದಾರೆ. ನಿಮ್ಮದೇ ಹೆಸರಿನ ಪಾರ್ಸಲ್ ಬಂದಿದೆಯಲ್ಲ, ಅದರಲ್ಲಿ ಏನೇನಿದೆ ಗೊತ್ತಾ ಎಂದೆಲ್ಲ ದಬಾಯಿಸಿದ್ದಾರೆ. ಹಾಗೆ ಮಾತನಾಡುತ್ತಲೇ ಅವರ ವಿರುದ್ಧ ಸಿಬಿಐ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದ್ದ ಪ್ರತಿ ಕಳುಹಿಸಿದ್ದಾರೆ. ಇದನ್ನು ನೋಡಿದ ಯುವಕ ಮತ್ತಷ್ಟು ಗಾಬರಿಯಾಗಿದ್ದಾನೆ. ಹೀಗೆ ಹೇಳುತ್ತಲೇ ನಿಮ್ಮೆಲ್ಲ ಬ್ಯಾಂಕ್ ಖಾತೆಯ ವಿವರ ತನಿಖೆ ಮಾಡಬೇಕು ಎಂದು ವಿವರ ಪಡೆದಿದ್ದಾರೆ.

ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯ ವಿವರ ಪಡೆದರೆ ನಿನ್ನೆಲ್ಲ ದಂಧೆ ಗೊತ್ತಾಗುತ್ತದೆ ಎಂದು ಹೆದರಿಸಿದ್ದಾರೆ. ಸಿಬಿಐ ತನಿಖೆ ಮುಗಿಯುವರೆಗೂ ವಿಡಿಯೋ ಕಾಲ್‌ನಲ್ಲಿಯೇ ಇರಬೇಕು. ಎಲ್ಲಿಯೂ ಹೋಗಕೂಡದು ಎಂದು ಖಡಕ್ ಎಚ್ಚರಿಕೆ ನೀಡಿ, ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಯುವಕ ಮನೆಯಿಂದ ಆಚೆ ಹೋಗದೆ ಹಾಗೆ ಕುಳಿತುಕೊಂಡಿದ್ದಾನೆ. ಅವರ ಮನೆಯವರೆಲ್ಲ ಗಾಬರಿಯಾಗಿದ್ದಾರೆ. ಅವರ ಪತ್ನಿ ನೀಡಿದ ಮಾಹಿತಿಯನ್ನಾಧರಿಸಿ ಸೆನ್ ಪೊಲೀಸ್ ಠಾಣೆಯ ಕೊಪ್ಪಳ ಡಿವೈಎಸ್ಪಿ ಯಶವಂತಕುಮಾರ ಅವರು ಮನೆಗೆ ಹೋಗಿದ್ದಾರೆ. ಸಿಬಿಐ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದರಿಂದ ಪೊಲೀಸ್ ಅಧಿಕಾರಿಯ ಜತೆಗೂ ಯುವಕ ಮಾತನಾಡಲು ಹಿಂದೇಟು ಹಾಕಿದ್ದಾನೆ. ನಿಜವಾದ ಡಿವೈಎಸ್ಪಿಯನ್ನೇ ನಕಲಿ ಅಧಿಕಾರಿ ಎನ್ನುವಂತೆ ಬಿಂಬಿಸಿದ್ದಾರೆ.

ಆಗ ಡಿವೈಎಸ್ಪಿ ಯಶವಂತಕುಮಾರ ಅವರು ಹಾಳೆಯೊಂದರಲ್ಲಿ ಬರೆದು ತೋರಿಸಿದ್ದಾರೆ. ಆಗ ಆತ ದಿಕ್ಕು ತೋಚದಂತಾಗಿದ್ದಾನೆ. ಭಯ ಪಡಬೇಡಿ, ಕಾಲ್ ಕಟ್ ಮಾಡಿ ಎಂದಾಗ ಕಾಲ್ ಕಟ್ ಮಾಡಿದ್ದಾನೆ. ಇದಾದ ಮೇಲೆ ಆತನಿಗೆ ಎಲ್ಲವನ್ನು ತಿಳಿ ಹೇಳಿ, ಡಿಜಿಟಲ್ ಅರೆಸ್ಟ್‌ನಿಂದ ಪಾರು ಮಾಡಲಾಗಿದೆ. ಈ ಕುರಿತು ಪ್ರಕರಣವನ್ನು ಕೊಪ್ಪಳ ಸೆನ್ ಠಾಣೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

ಇದು, ಬೆಳಕಿಗೆ ಬಂದಿರುವ ಪ್ರಕರಣ ಅಷ್ಟೇ, ಇಂಥ ಅನೇಕ ಪ್ರಕರಣಗಳು ನಡೆಯತ್ತಿವೆ. ರಾಜ್ಯಾದ್ಯಂತ ಡಿಜಿಟಲ್ ಅರೆಸ್ಟ್‌ಗೆ ಜನರು ತತ್ತರಿಸಿ ಹೋಗಿದ್ದಾರೆ.ಹೇಗೆ ಮೋಸ?: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡು ಅದರ ಮಾಹಿತಿ ನಿಮಗೆ ಹೇಳುತ್ತಲೇ ನಿಮಗೆ ಪಾರ್ಸಲ್ ಕಳುಹಿಸುವ ನಾಟಕವಾಡುತ್ತಾರೆ. ಆನಂತರ ಅದೇ ಪಾರ್ಸಲ್‌ನಲ್ಲಿ ಏನೇನೋ ಇದೆ ಎಂದು ಸಿಕ್ಕಿಹಾಕಿಸುತ್ತಾರೆ. ಇದಲ್ಲದೆ ಪಾಲಕರಿಗೆ ಕರೆ ಮಾಡಿ, ನಿಮ್ಮ ಮಗ ಅತ್ಯಾಚಾರ ಮಾಡಿದ್ದಾನೆ. ಆತನನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೇಳಿ, ಪಾಲಕರನ್ನು ಸಮಸ್ಯೆಗೆ ಸಿಲುಕಿಸುವಂತೆ ನಾಟಕವಾಡುತ್ತಾರೆ. ಇದಾದ ಮೇಲೆ ತನಿಖೆಯ ನೆಪದಲ್ಲಿ ನಿಮ್ಮೆಲ್ಲ ವಿವರ, ಬ್ಯಾಂಕ್ ಖಾತೆ ಮಾಹಿತಿ ಪಡೆಯುತ್ತಾರೆ. ಆಗ ಅದರಿಂದ ಹಣ ದೋಚುತ್ತಾರೆ.ಕರೆ ಮಾಡಿ: ಆನ್‌ಲೈನ್ ಗೇಮ್ ಮತ್ತು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಬೇಡಿ. ಇಂಥ ಯಾವ ತನಿಖೆಯನ್ನು ಪೊಲೀಸ್ ಇಲಾಖೆಯಾಗಲಿ ಅಥವಾ ರಾಜ್ಯ ಹಾಗೂ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಮಾಡುವುದಿಲ್ಲ. ಹಾಗೊಂದು ವೇಳೆ ಇಂಥ ಕರೆ ಬಂದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.ಭಯ ಮತ್ತು ದುರಾಸೆ ಬಂಡವಾಳ ಮಾಡಿಕೊಂಡು ಈ ರೀತಿಯಾಗಿ ದೊಡ್ಡ ದಂಧೆ ಮಾಡಲಾಗುತ್ತಿದೆ. ನಿಮ್ಮನ್ನು ಸಿಕ್ಕಿಹಾಕಿಸಿ, ತನಿಖೆಯ ನೆಪದಲ್ಲಿ ಸುಲಿಗೆ ಮಾಡಲಾಗುತ್ತದೆ. ಕೊಪ್ಪಳದ ಯುವಕನೋರ್ವ ಇಂಥ ಡಿಜಿಟಲ್ ಅರೆಸ್ಟ್ ಆಗಿ, ಬಳಲಿದ್ದ. ಆತನನ್ನು ಪಾರು ಮಾಡಲಾಗಿದೆ ಎಂದು ಕೊಪ್ಪಳ ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ಯಶವಂತಕುಮಾರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನ ಬಂಡಿಗೆ ಬೈಕ್‌ ಡಿಕ್ಕಿ; ಸವಾರ ಸಾವು
ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆಬೆಳಗಾವಿ ಅಜ್ಜಿ ಬ್ರಾಂಡ್‌ ಅಂಬಾಸಿಡರ್‌