ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ, ಬೆದರಿಕೆ । ಟಿಬೇಟಿಯನ್ ಕಾಲನಿ ಕ್ಯಾಂಪ್‌ನ ಪಲ್ಡೆನ್‌ಗೆ ಪಂಗನಾಮ
ಮುಂಬೈ ಪೊಲೀಸರ ಹೆಸರಿನಲ್ಲಿ ಬಂದ ವಾಟ್ಸ್‌ಆ್ಯಪ್ ಕರೆಗೆ ಹೆದರಿ ಇಲ್ಲಿಯ ಟಿಬೆಟಿಯನ್ ಕಾಲನಿ ಕೇಂದ್ರಿಯ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಬರೋಬ್ಬರಿ ₹೧.೬೧ ಕೋಟಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿಬೆಟಿಯನ್ ಕಾಲನಿ ಕ್ಯಾಂಪ್ ನಂ. ೮ರ ನಿವಾಸಿ ಪಲ್ದೆನ್ ಲೋಬ್ಸಂಗ್ ಚೊಡಾಕ್ ವಂಚನೆಗೊಳಗಾದವರು. 2025, ನ. ೨೯ರಂದು ನಿವೃತ್ತ ಶಿಕ್ಷಕ ಪಲ್ದೆನ್ ಮೊಬೈಲ್‌ಗೆ ಯುವತಿಯೊಬ್ಬಳು ವಾಟ್ಸ್‌ಆ್ಯಪ್ ಕರೆ ಮಾಡಿ ಮಹಾರಾಷ್ಟ್ರದ ಕೋಲವಾ ಠಾಣೆಯಿಂದ ಮಾತನಾಡುತ್ತಿದ್ದು, ಇನ್‌ಸ್ಪೆಕ್ಟರ್ ಮಾತನಾಡುತ್ತಾರೆ ಎಂದು ಬೇರೊಬ್ಬರಿಗೆ ಪೋನ್ ನೀಡಿದ್ದಾಳೆ. ಬಳಿಕ ಮತ್ತೊಬ್ಬ ಮಾತನಾಡಿ, ಮುಂಬೈಯಲ್ಲಿ ಉಗ್ರವಾದಿ ನಾಯಕನನ್ನು ಬಂಧಿಸಲಾಗಿದ್ದು, ಆತನ ಬಳಿ ಸಿಕ್ಕ ೨೫೦ ಎಟಿಎಂ ಕಾರ್ಡ್‌ಗಳಲ್ಲಿ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಕೂಡ ಇದೆ. ಅಲ್ಲದೇ ನಿಮ್ಮ ಖಾತೆಯಿಂದ ಕೋಟ್ಯಂತರ ರುಪಾಯಿ ಹಣ ಚಲಾವಣೆಯಾಗಿದೆ ಎಂದು ಹೆದರಿಸಿ, ಡಿಜಿಟಲ್ ಅರೆಸ್ಟ್ ಮಾಡಿ ಹಂತ ಹಂತವಾಗಿ ₹೧.೬೧ ಕೋಟಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ವಂಚಕರು ಪೊಲೀಸ್ ಸಮವಸ್ತ್ರ ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವೀಡಿಯೋ ಕರೆ ಮಾಡಿ ಪೊಲೀಸ್ ಠಾಣೆಯ ವಾತಾವರಣ ತೋರಿಸಿ ನಂಬಿಸಿದ್ದಾರೆ. ಪಲ್ದೆನ್ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿರುವ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಕಳುಹಿಸಿ ಆರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪಲ್ದೆನ್ ಹೇಳಿದಾಗ, ತನಿಖೆಯ ನೆಪದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ನ್ಯಾಷನಲ್ ಫಂಡ್‌ಗೆ ಜಮಾ ಮಾಡಬೇಕು, ತನಿಖೆ ಮುಗಿದ ಆನಂತರ ಹಣ ವಾಪಸ್ ನೀಡಲಾಗುವುದು ಎಂದು ವಂಚಕನು ನಂಬಿಸಿದ್ದಾನೆ. ವಿಷಯವನ್ನು ಯಾರೊಂದಿಗೂ ಹೇಳಬೇಡ ಎಂದು ಮತ್ತು ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸ್ ಆಪ್ ಮೂಲಕ ವರದಿ ನೀಡುವಂತೆ (ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ಕಳಿಸಿ) ಆದೇಶಿಸಿ ಅವರನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಸುಳ್ಳು ಬೆದರಿಕೆಗೆ ಹೆದರಿದ ಪಲ್ದೆನ್ ತಮ್ಮ ಕೆನರಾ ಬ್ಯಾಂಕ್, ಎಸ್‌ಬಿಐ ಮತ್ತು ಕೆಡಿಸಿಸಿ ಬ್ಯಾಂಕ್‌ನಲ್ಲಿದ್ದ ಸ್ಥಿರ ಠೇವಣಿ (ಎಫ್‌ಡಿ) ಹಣ ಹಾಗೂ ಪರಿಚಿತರಿಂದ ಸಾಲ ಪಡೆದು, ಡಿ. ೩ರಿಂದ ಈ ವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹೧,೬೧,೦೦,೦೪೭ ವರ್ಗಾಯಿಸಿದ್ದಾರೆ. ಆನಂತರ ಪೋನ್ ಕರೆ ಮಾಡಿ ನಮ್ಮ ತನಿಖೆ ಮುಗಿದಿದೆ. ತನಿಖೆಯ ನಂತರ ನಿಮ್ಮ ಹಣ ವರ್ಗಾವಣೆ ಮಾಡುತ್ತೇವೆ. ಇನ್ನು ಮುಂದೆ ಇಡಿ ತನಿಖೆ ನಡೆಯಲಿದೆ, ಅವರು ಕೂಡ ನಿಮ್ಮ ಮನೆಗೆ ಬಂದು ನಿಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಿ, ಮತ್ತೆ ₹೪೦ ಲಕ್ಷ ಬೇಡಿಕೆ ಇಟ್ಟಿದ್ದಾರೆ. ಇದರಿಂದ ದಿಕ್ಕೇ ತೋಚದೆ ಇದ್ದಾಗ ತನ್ನ ಸ್ನೇಹಿತನ ಹತ್ತಿರ ಹಣ ನೀಡುವಂತೆ ಪಲ್ದೆನ್ ಕೇಳಿದಾಗ ಏಕೆ ತುಂಬಾ ಅವಸರ ಮಾಡುತ್ತಿದ್ದಿ? ನಿನಗೆ ಹಣ ಯಾಕೆ ಬೇಕು? ಏನು ನಡೆದಿದೆ ಹೇಳು ಎಂದು ಸ್ನೇಹಿತ ಒತ್ತಡ ಹಾಕಿದಾಗ ಸ್ನೇಹಿತನಿಗೆ ನಡೆದ ವಿಷಯ ಹೇಳಿದ್ದಾರೆ. ಆನಂತರ ಎಚ್ಚರಗೊಂಡ ಪಲ್ದೆನ್ ಸ್ನೇಹಿತನ ಸಲಹೆಯಂತೆ ಕಾರವಾರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.