ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್)ಯಲ್ಲಿ 2024ರಲ್ಲಿ ನಡೆದಿದ್ದ ವರ್ಗಾವಣೆ ದಂಧೆಯನ್ನು ಯುಪಿಐ ಮೂಲಕ ಹಣ ವರ್ಗಾವಣೆಯೇ ಬಯಲು ಮಾಡಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್)ಯಲ್ಲಿ 2024ರಲ್ಲಿ ನಡೆದಿದ್ದ ವರ್ಗಾವಣೆ ದಂಧೆಯನ್ನು ಯುಪಿಐ ಮೂಲಕ ಹಣ ವರ್ಗಾವಣೆಯೇ ಬಯಲು ಮಾಡಿದೆ.
ಪ್ರಕರಣದಲ್ಲಿ ಪ್ರಮುಖ ರೂವಾರಿಗಳಾಗಿದ್ದ ಇಬ್ಬರು ಎಫ್‌ಡಿಎ, ಮೂವರು ಪೇದೆಗಳನ್ನು ಗೃಹ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಎಂ. ಚಂದ್ರಶೇಖರ ಅಮಾನತು ಮಾಡಿ ಆದೇಶಿಸಿದ್ದಾರೆ.
ಯಾರ್‍ಯಾರು ಅಮಾನತು?
ಕೆಎಸ್‌ಐಎಸ್‌ಎಫ್ 3ನೇ ಪಡೆಯ ಎಫ್‌ಡಿಎ ಡ್ಯಾನಿಯಲ್ ಎಸ್.ಡಿ, ವಿನೋದ ಬಂಡರಗಟ್ಟಿ, ಪೇದೆಗಳಾದ ಹನುಮಂತ ಪಾತ್ರೋಟ, ಲಕ್ಷ್ಮಣ ಡೊಳ್ಳಿನ, ಸಲೀಂ ರಾಜೇಸಾಬ್ ನದಾಫ್ ಈ ಐವರನ್ನು ಅಮಾನತು ಮಾಡಿದ್ದು ಇಲಾಖಾ ವಿಚಾರಣೆ ಬಾಕಿಯಿದೆ.
ಈ ಪಡೆಯಲ್ಲಿ ಕೇಂದ್ರ ಕಮಾಂಡೆಂಟ್ ವರ್ಗಾವಣೆ ಮಾಡಲಿದ್ದು, ಇವರಿಗೆ ಆಪ್ತ ಸಹಾಯಕನಾಗಿ ಡ್ಯಾನಿಯಲ್ ಕಾರ್ಯನಿರ್ವಹಿಸುತ್ತಿದ್ದ. ಈತನೇ ವರ್ಗಾವಣೆಯ ದಂಧೆಯ ಮುಖ್ಯ ರೂವಾರಿ. ಈತನಿಗೆ ಉಳಿದ ನಾಲ್ವರು ಸಹಾಯಕರಂತೆ ಕಾರ್ಯನಿರ್ವಹಿಸುತ್ತಿದ್ದರು. ಇಲಾಖೆಯಲ್ಲಿ ಯಾರದೇ ವರ್ಗಾವಣೆಯಿದ್ದರೂ ಈತನ ಕೈವಾಡ ಇರುತ್ತಿತ್ತು ಎಂದು ಆರೋಪ ಕೇಳಿ ಬಂದಿತ್ತು.
2024ರ ಜೂನ್, ಸೆಪ್ಟೆಂಬರ್ ತಿಂಗಳಲ್ಲಿ ಬರೋಬ್ಬರಿ 158ಕ್ಕೂ ಹೆಚ್ಚು ಪೇದೆ, ಮುಖ್ಯಪೇದೆ, ಮಹಿಳಾ ಪೇದೆ, ಮಹಿಳಾ ಮುಖ್ಯಪೇದೆಗಳ ವರ್ಗಾವಣೆ ನಡೆದಿತ್ತು. ಈ 158 ಸಿಬ್ಬಂದಿ ಪೈಕಿ 45 ಸಿಬ್ಬಂದಿಗೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲೇ ಮೊದಲು ಕೆಲಸ ಮಾಡುತ್ತಿದ್ದ ಜಾಗೆಗೆ ಮರು ವರ್ಗ ಮಾಡಿ ಅವರಿದ್ದ ಜಾಗೆಗೇ ಪುನಃ ನಿಯೋಜಿಸಲಾಗಿತ್ತು. ಯಾರ್‍ಯಾರು ದುಡ್ಡು ಕೊಡಲು ಒಪ್ಪುತ್ತಾರೆ. ಅವರಿಗೆಲ್ಲ ವರ್ಗವಾಗಿ ಒಂದೇ ವಾರದಲ್ಲೇ ಮೊದಲಿದ್ದ ಜಾಗೆಗೆ ಮರುವರ್ಗದ ಆದೇಶ ಬರುತ್ತಿತ್ತು. ಇದಕ್ಕಾಗಿ ₹ 25 ಸಾವಿರದಿಂದ ₹ 70 ಸಾವಿರದ ವರೆಗೂ ಲಂಚ ಪಡೆದುಕೊಳ್ಳಲಾಗಿತ್ತು. ಹುದ್ದೆಯ ಮೇಲೆ ದರ ನಿಗದಿಯಾಗುತ್ತಿತ್ತಂತೆ.
ಫೋನ್ ಪೇಯಿಂದ ಪೇಚು!
ಹೀಗೆ ತಾವಿದ್ದ ಜಾಗೆಗೆ ಮರು ವರ್ಗಾವಣೆ ಬಯಸಿದ ಕೆಲ ಅಭ್ಯರ್ಥಿಗಳಿಂದ ಫೋನ್ ಪೇ, ಗೂಗಲ್ ಪೇ ಹೀಗೆ ಯುಪಿಐಗಳಿಂದಲೂ ಹಣ ವರ್ಗವಾಗಿತ್ತು. ಕೆಲವರಿಂದ ನಗದು ಕೂಡ ಇಸಿದುಕೊಂಡಿದ್ದರು. ನಗದು ಇಸಿದುಕೊಂಡಿದ್ದು ಇಲ್ಲಿ ಲೆಕ್ಕಕ್ಕೆ ಸಿಕ್ಕಿಲ್ಲ. ಆದರೆ, ಪೋನ್ ಪೇ ಸೇರಿದಂತೆ ವಿವಿಧ ಯುಪಿಐಗಳಿಂದ ಹಣ ವರ್ಗವಾಗಿರುವುದು ಪ್ರಕರಣವನ್ನು ಬಯಲಿಗೆಳೆಯಲು ಪ್ರಮುಖ ಸಾಕ್ಷಿಯಾದವು. ಇದೀಗ ಈ ಐವರನ್ನು ಎಡಿಜಿಪಿ ಚಂದ್ರಶೇಖರ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಇಲಾಖೆ ವಿಚಾರಣೆ ಮುಗಿಯುವವರೆಗೂ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳದೇ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ. ಇಲಾಖೆಯ ವಸತಿ ಗೃಹದಲ್ಲಿದ್ದರೆ ಅಮಾನತಿನ ದಿನಾಂಕದಿಂದ ಬಾಡಿಗೆ ವಸೂಲಿ ಮಾಡಲಾಗುವುದು. ಅಮಾನತಿನ ಅವಧಿಯಲ್ಲಿ ಯಾವುದೇ ಖಾಸಗಿ ನೌಕರಿ, ಬೇರೆ ವ್ಯಾಪಾರವನ್ನಾಗಲಿ ಮಾಡುವಂತಿಲ್ಲ. ಈ ಷರತ್ತು ಉಲ್ಲಂಘಿಸಿದರೆ ದುರ್ನಡತೆ ತೋರಿದ್ದೀರಿ ಎಂದು ಭಾವಿಸಿ ಈಗಿನ ವಿಚಾರಣೆ ಜತೆಗೆ ಪ್ರತ್ಯೇಕವಾಗಿ ಮತ್ತೆ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಏನಿದು ಪಡೆ?
ಗೃಹ ಇಲಾಖೆ ವ್ಯಾಪ್ತಿಯಲ್ಲೇ ಕೈಗಾರಿಕಾ ಭದ್ರತೆ ಪಡೆ ಬರುತ್ತದೆ. ಧಾರವಾಡ ಕೈಗಾರಿಕಾ ಭದ್ರತಾ ಪಡೆಯ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಸೇರಿದಂತೆ ಒಟ್ಟು 14 ಯುನಿಟ್‌ಗಳು ಬರುತ್ತದೆ. ಈ ಪಡೆ ಸಹಜವಾಗಿ ಎಲ್ಲೆಂದರೆಲ್ಲಿ ಭದ್ರತೆ ನೀಡುವಂತಹ ಪಡೆಯಲ್ಲ. ವಿಮಾನ ನಿಲ್ದಾಣ, ಜಲಾಶಯ, ಕಾರಾಗೃಹ, ಸುವರ್ಣ ವಿಧಾನಸೌಧ, ಹೈಕೋರ್ಟ್ ಸೇರಿ ವಿವಿಧ ಸೂಕ್ಷ್ಮ ಸ್ಥಾವರಗಳಲ್ಲಿನ ಭದ್ರತೆಯ ಜವಾಬ್ದಾರಿ ಈ ಕೈಗಾರಿಕಾ ಭದ್ರತಾ ಪಡೆಯದ್ದಾಗಿರುತ್ತದೆ. ಪತ್ರಿಕೆಗೆ ಧನ್ಯವಾದ!
ಈ ಬಗ್ಗೆ ಕನ್ನಡಪ್ರಭ ಪತ್ರಿಕೆಯೂ "ಕೈಗಾರಿಕಾ ಭದ್ರತಾ ಪಡೆಯಲ್ಲಿ ವರ್ಗಾವಣೆ ದಂಧೆ " ಎಂಬ ಶೀರ್ಷಿಕೆಯಡಿ 2024ರ ಅಕ್ಟೋಬರ್ 13ರಂದು ವಿಶೇಷ ವರದಿ ಪ್ರಕಟಿಸಿತ್ತು. ಆಗ ವರದಿ ಪ್ರಕಟಿಸಿ ಪ್ರಕರಣದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಕ್ಕಾಗಿ ಅಲ್ಲಿನ ಸಿಬ್ಬಂದಿ ಇದೀಗ ಕನ್ನಡಪ್ರಭಕ್ಕೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.