ಈ ದಶಕ ಭಾರತಕ್ಕೆ ಡಿಜಿಟಲ್ ದಶಕವಾಗಲಿದೆ: ರಾಜೀವ್ ಚಂದ್ರಶೇಖರ್

KannadaprabhaNewsNetwork | Published : Oct 18, 2023 1:01 AM

ಸಾರಾಂಶ

ಮಾಹೆಯ ಅಂಗಸಂಸ್ಥೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಉತ್ಸವ ಟೆಕ್ ತತ್ವ - 23
ಕನ್ನಡಪ್ರಭ ವಾರ್ತೆ ಮಣಿಪಾಲ ಈ ದಶಕ ಭಾರತದ ಪಾಲಿಗೆ ಡಿಜಿಟಲ್ ದಶಕವಾಗಲಿದೆ, ಭಾರತದ ಭವಿಷ್ಯ ರೋಮಾಂಚನಕಾರಿಯಾಗಲಿದೆ, ಆದ್ದರಿಂದ ಇಂದಿನ ಎಂಜಿಯರಿಂಗ್‌ ವಿದ್ಯಾರ್ಥಿಗಳು ಭಾರತದ ಇದುವರೆಗಿನ ಅತ್ಯಂತ ಅದೃಷ್ಟವಂತರಾಗಲಿದ್ದಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಅವರು ಮಂಗಳವಾರ ಸಂಜೆ ಇಲ್ಲಿನ ಮಾಹೆಯ ಅಂಗಸಂಸ್ಥೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಉತ್ಸವ ಟೆಕ್ ತತ್ವ - 23ನ್ನು ಉದ್ಘಾಟಿಸಿ ಮಾತನಾಡಿದರು. 2014ರಲ್ಲಿ ದೇಶದ ಜಿಡಿಪಿಯಲ್ಲಿ ಡಿಡಿಟಲ್ ಎಕಾನಮಿಯ ಪಾಲು ಶೇ 4.50 ಇತ್ತು, 2022ರಲ್ಲಿ ಅದು ಶೇ 11.50 ಆಗಿದ್ದು, ಈ ದಶಕದ ಕೊನೆಗೆ ಶೇ 20 ಮಾಡುವ ಗುರಿ ಇದೆ, ಇದರಲ್ಲಿ ಇಂದಿನ ಇಂಜಿನಿಯರ್ ಗಳಿಗೆ ಬಹಳ ದೊಡ್ಡ ಪಾತ್ರ ಸಿಗಲಿದೆ ಎಂದವರು ಹೇಳಿದರು. ನಮ್ಮ ದೇಶಕ್ಕೆ ಶೇ.82ರಷ್ಟು ಮೊಬೈಲ್ ಗಳನ್ನು ಆಮದು ಮಾಡುವ ಕಾಲವಿತ್ತು, ಆದರೆ ಇಂದು ದೇಶದಲ್ಲಿ ಬಳಕೆಯಾಗುವ ಶೇ 100ರಷ್ಟು ಮೊಬೈಲುಗಳು ದೇಶದಲ್ಲಿಯೇ ಉತ್ಪಾದನೆಯಾಗುತ್ತಿವೆ, ಮಾತ್ರವಲ್ಲ 1 ಲಕ್ಷ ಕೋಟಿ ಮೊಬೈಲುಗಳನ್ನು ವಿಶ್ವದ ಇತರ ದೇಶಗಳಿಗೆ ರಫ್ತು ಮಾಡಿದ್ದೇವೆ. ಮೇಡ್ ಇನ್ ಇಂಡಿಯಾ, ಡಿಸೈನ್ ಇನ್ ಇಂಡಿಯಾ, ಇನ್ನೊವೇಟೆಡ್ ಇಂಡಿಯಾ, ಮ್ಯಾನ್ಯುಫಾಕ್ಟರ್ ಇನ್ ಇಂಡಿಯಾ, ಎಜ್ಯುಕೆಟೆಡ್ ಇನ್ ಇಂಡಿಯಾ ಎಂಬದು ಕೇವಲ ಸ್ಲೋಗನ್‌ಗಳಲ್ಲ, ಇವು ವಾಸ್ತವ ಸಾಧನೆಗಳಾಗಿವೆ ಎಂದರು. ಭಾರತವು ಐಟಿ, ಐಟಿಇಎಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸಿ, ಸೆಮಿಕಂಡಕ್ಟರ್, ವೆಬ್ 3.0, ಹೈ ಪರ್ಫಾಮೆನ್ಸ್ ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಉತ್ಕೃಷ್ಟ ಸಾಧನೆ ಮಾಡುತ್ತಿದೆ. ಉದ್ಯೋಗಾವಕಾಶಗಳೂ ಅಗಾಧವಾಗಿ ತೆರೆದುಕೊಳ್ಳುತ್ತಿವೆ ಎಂದು ಕೇಂದ್ರ ಸಚಿವರು ಆಶಾಭಾವನೆ ವ್ಯಕ್ತಪಡಿಸಿದರು. ಅದ್ಭುತ ಎಂಐಟಿ: ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಇದೇ ಕಾಲೇಜಿನ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ 2ನೇ ರ್ರ್ಯಾಂಕ್ ಗಳಿಸಿರುವ, ಹಳೇವಿದ್ಯಾರ್ಥಿ ರಾಜೀವ್ ಚಂದ್ರಶೇಖರ್ ಎಂಐಟಿ ಒಂದು ಅದ್ಬುತ ಅನುಭವ ನೀಡಿದ ಕಾಲೇಜು ಎಂದು ಕೊಂಡಾಡಿದರು. ಇತ್ತೀಚೆಗೆ ತನ್ನನ್ನು ಭೇಟಿಯಾಗಲು ಬಂದಿದ್ದ ಕಾಲೇಜಿನ ಇನ್ನೊಬ್ಬ ಹಳೆವಿದ್ಯಾರ್ಥಿ, ಮೈಕ್ರೋಸಾಫ್ಟ್‌ನ ಸಿಇಓ ಸತ್ಯ ನಾಡೆಲ್ಳಾ ತಮ್ಮೊಂದಿಗೆ ಮೊದಲು ಚಾಟ್ ಜಿಪಿಟಿ ಬಗ್ಗೆ ಮಾತನಾಡಿದರು, ನಂತರ ಎಂಐಟಿಯನ್ನು ನೆನಪಿಸಿಕೊಂಡರು. ಅವರು ಕೂಡ ತಮ್ಮ ಕಾಲೇಜನ್ನು ಮರೆತಿಲ್ಲ ಎಂದರು. ಎಂಐಟಿಯ ನಿರ್ದೇಶಕ ಕಮಾಂಡರ್ ಡಾ .ಅನಿಲ್ ರಾಣಾ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬರ ಮಾಡಿಕೊಂಡರು. ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉಪಕುಲಾಧಿಪತಿಗಳಾದ ಡಾ.ಎಂ.ಡಿ. ವೆಂಕಟೇಶ್, ಡಾ. ನಾರಾಯಣ ಸಭಾಹಿತ್ ಮುಂತಾದವರು ಉಪಸ್ಥಿತರಿದ್ದರು. ಭಾರತದ ಅಭಿವೃದ್ಧಿಯ ವೇಗ ಹೇಗಿದೆ ಎಂದರೇ... ಕಳೆದ ತಿಂಗಳು ದೆಹಲಿಯ ನೂತನ ಪಾರ್ಲಿಮೆಂಟ್‌ನಲ್ಲಿ ವಿಶೇಷ ಅಧಿವೇಶ ನಡೆಯಿತು, 2ನೇ ದಿನವೇ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಲಾಯಿತು, ಇದಾದ 2 ದಿನಗಳಲ್ಲಿ ಭಾರತದಲ್ಲಿಯೇ ತಯಾರಾದ ಐಫೋನ್ ಇಂಡಿಯಾ ಬಿಡುಗಡೆಯಾಯತು, ಮರುದಿನ ತಾನು ಗುಜರಾತ್‌ನಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆಯ ಸೆಮಿಕಂಡಕ್ಟರ್ ಮೈಕ್ರಾನ್ ಉತ್ಪಾದನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಒಂದು ವಾರದ ಈ ಬೆಳವಣಿಗೆಗಳು ಭಾರತದ ಅಭಿವೃದ್ಧಿಯ ವೇಗವನ್ನು ಹೇಳುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ವಿಶ್ಲೇಷಿಸಿದರು.

Share this article