ಸಿಎಂ ಹುದ್ದೆಗೆ ಘನತೆ ಇದ್ದು ಮುಡಾ ನಿವೇಶನ ವಾಪಾಸ್‌

KannadaprabhaNewsNetwork | Published : Oct 3, 2024 1:18 AM

ಸಾರಾಂಶ

ಎಲೆಕ್ಟ್ರೋಲ್ ಬಾಂಡ್‌ನಲ್ಲಿ ₹ ೮,೫೦೦ ಕೋಟಿ ಹಗರಣ ಆಗಿದೆ. ಅಲ್ಲಿಗೆ ಇಡಿ ಹೋಗಲಿಲ್ಲ ಏಕೆ? ಸ್ವಯಂಪ್ರೇರಿತ ದೂರು ದಾಖಲಿಸಲಿಲ್ಲ ಏಕೆ? ಇದರ ಬಗ್ಗೆ ಬಿಜೆಪಿ ನಾಯಕರನ್ನು ಪ್ರಶ್ನಿಸುವುದಿಲ್ಲ ಏಕೆ? ಎಂದು ಮಾಧ್ಯಮವರಿಗೆ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದರು.

ಧಾರವಾಡ:

ಮುಡಾ ನಿವೇಶನ ಮರಳಿಸಿದರೆ ತಪ್ಪೇನು? ಮುಖ್ಯಮಂತ್ರಿ ಹುದ್ದೆಗೆ ಘನತೆ-ಗೌರವ ಉಂಟು. ಹೀಗಾಗಿ ನಿವೇಶನ ಮರಳಿ ನೀಡಿದ್ದು, ಇದಕ್ಕೂ ಯೂ ಟರ್ನ್‌ ಅಂದ್ರೆ ಹೇಗೆ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೇಶನ ನೀಡಿದ್ದು ಬಿಜೆಪಿಯೇ. ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ನೀಡಿದ ನಿವೇಶನ ಮರಳಿಸಿದ್ದರಲ್ಲಿ ತಪ್ಪೇನಿದೆ? ನಿವೇಶನ ಮರಳಿಸದಂತೆ ನಿಯಮ ಇದೆಯಾ? ಎಂದು ಬಿಜೆಪಿಗರಿಗೆ ಪ್ರಶ್ನಿಸಿದರು.ನಾವು ಯಾವಾಗಾದರೂ ನಿವೇಶನ ಮರಳಿಸುತ್ತೇವೆ. ಅದು ನಮ್ಮಿಷ್ಟಕ್ಕೆ ಬಿಟ್ಟಿರುವ ವಿಷಯ. ಬಿಜೆಪಿ ನಾಯಕರು ಕೇಳಿದ ತಕ್ಷಣವೇ ಕೊಡಬೇಕಾ? ಹಾಗಂತ ಕಾನೂನು ಇದೆಯಾ? ಒತ್ತಡದಿಂದಾಗಿ ನಿವೇಶನ ಮರಳಿಸಿದ್ದಾಗಿಯೂ ಪ್ರಶ್ನೆಗೆ ಉತ್ತರಿಸಿದರು.

ಮುಡಾ ಅತಿಕ್ರಮಣ ಮಾಡಿರುವುದಕ್ಕೆ ಬಿಜೆಪಿ ನಿವೇಶನ ಕೊಟ್ಟಿದ್ದು ಅಲ್ವಾ? ಇಲ್ಲಿ ದುಡ್ಡಿನ ವಿಷಯವೇ ಇಲ್ಲ. ಇಡಿ ಬರುವುದು ಏಕೆ? ಎಂದು ಪ್ರಶ್ನಿಸಿದ ಲಾಡ್‌, ಎಲೆಕ್ಟ್ರೋಲ್ ಬಾಂಡ್‌ನಲ್ಲಿ ₹ ೮,೫೦೦ ಕೋಟಿ ಹಗರಣ ಆಗಿದೆ. ಅಲ್ಲಿಗೆ ಇಡಿ ಹೋಗಲಿಲ್ಲ ಏಕೆ? ಸ್ವಯಂಪ್ರೇರಿತ ದೂರು ದಾಖಲಿಸಲಿಲ್ಲ ಏಕೆ? ಇದರ ಬಗ್ಗೆ ಬಿಜೆಪಿ ನಾಯಕರನ್ನು ಪ್ರಶ್ನಿಸುವುದಿಲ್ಲ ಏಕೆ? ಎಂದು ಮಾಧ್ಯಮವರಿಗೆ ಪ್ರಶ್ನಿಸಿದರು.

ಸಿಎಂ ರಾಜೀನಾಮೆ ಪ್ರಶ್ನೆಗೆ, ಪುನಃ ಒಂದೇ ವಿಷಯ ಪ್ರಶ್ನಿಸಿದರೆ ಹೇಗೆ? ಬಿಜೆಪಿಯ ೨೯ ಜನ ಕ್ಯಾಬಿನೆಟ್ ಸಚಿವರ ಮೇಲೆ ಕ್ರಿಮಿನಲ್, ರೇಪ್ ಮತ್ತು ಮರ್ಡರ್ ಕೇಸಗಳಿವೆ. ಅವರು ರಾಜೀನಾಮೆ ಕೊಡುವುದು ಬೇಡವಾ? ಎಂದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮೇಲೂ ಕೇಸ್ ಇದೆ. ಅವರು ರಾಜೀನಾಮೆ ಕೊಡಲ್ಲವಾ? ಈ ಬಗ್ಗೆ ಮಾಧ್ಯಮಗಳು ಬಿಜೆಪಿಗರಿಗೆ ಪ್ರಶ್ನಿಸಬೇಕು. ಬರೀ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುಬೇಕಂತ ಪುನಃ ಪುನಃ ಹೇಳುವುದು ಏಕೆ? ಎಂದು ಗರಂ ಆದರು.

Share this article