ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನಲ್ಲಿ ಪೊಲೀಸರು, ಗುಪ್ತಚರ ವಿಭಾಗ, ಎಸ್‌ಪಿ ಡ್ಯೂಟಿಯಲ್ಲಿರುವವರು ಏನು ಮಾಡುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಡಿವೈಎಸ್ಪಿ ಅವರು ಶಾಸಕರು ಬಂದಾಗ ಎಸ್ಕಾರ್ಟ್ ಕೊಡುವುದಕ್ಕಷ್ಟೇ ಪೊಲೀಸರನ್ನು ಸೀಮಿತಗೊಳಿಸಿದ್ದಾರೆ. ತಾಲೂಕಿನಲ್ಲಿ ಸರಣಿ ಕಳ್ಳತನಗಳು ನಡೆಯುತ್ತಲೇ ಇವೆ. ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ೩ ವರ್ಷದಲ್ಲಿ ತಾಲೂಕಿನ ೪೪ ಸರ್ಕಾರಿ ಶಾಲೆಗಳು ಮುಚ್ಚಿವೆ. ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿರುವುದರ ನಡುವೆಯೂ ಶಾಲೆಗಳು ಮುಚ್ಚುತ್ತಲೇ ಇವೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರು ಕಿಂಚಿತ್ತೂ ಪ್ರಯತ್ನ ನಡೆಸುತ್ತಿಲ್ಲ. ನ್ಯಾಯಾಧೀಶ ನಾಗಪ್ರಸನ್ನ ಅವರು ಮಳವಳ್ಳಿ ತಾಲೂಕನ್ನು ಗಾಂಜಾದಿಂದ ಹಾಳು ಮಾಡುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ಮಳವಳ್ಳಿ ತಹಸೀಲ್ದಾರ್ ೫೦ ಸಾವಿರ ರು. ದಂಡ ಹಾಕಿದೆ. ಪಶು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಔಷಧಗಳಿಲ್ಲ. ಇವೆಲ್ಲವೂ ಮಳವಳ್ಳಿ ತಾಲೂಕಿಗೆ ಅವಮಾನಕಾರಿ ಬೆಳವಣಿಗೆಗಳು. ಇವುಗಳ ಬಗ್ಗೆ ಗಮನಹರಿಸಿ ದಿಕ್ಕುತಪ್ಪಿರುವ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಶಾಸಕರು ಮಾಡದೆ ದೂರ ಉಳಿದಿರುವುದು ಬೇಸರದ ಸಂಗತಿ ಎಂದು ದೂರಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಾವು ಗೆಲ್ಲುವುದಕ್ಕೆ ಬೇಕಾದ ಸೊಸೈಟಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಿ ಇನ್ನೂ ೨೦ ರಿಂದ ೩೦ ಸೊಸೈಟಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಳೆದೊಂದು ವರ್ಷದಿಂದ ಇದುವರೆಗೂ ಚುನಾವಣೆಯನ್ನು ನಡೆಸಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಶಾಸಕರು ತಾಲೂಕಿನಲ್ಲಿ ಭ್ರಷ್ಟಾಚಾರದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ದೂರ ಮಾಡಿ ಸ್ವಚ್ಛ ಆಡಳಿತದ ವಾತಾವರಣ ನಿರ್ಮಿಸುವುದಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಆಡಳಿತ ನೀಡುವುದಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಆಸಕ್ತಿಯನ್ನೇ ತೋರಿಸುತ್ತಿಲ್ಲ ಎಂದು ಟೀಕಿಸಿದರು.
ಕವಲುದಾರಿಯಲ್ಲಿ ಸಾಗುತ್ತಿರುವ ತಾಲೂಕು ಆಡಳಿತವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಈಗಲಾದರೂ ಸರಿದಾರಿಗೆ ತಂದು ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ಜೆಡಿಎಸ್-ಬಿಜೆಪಿ ಜೊತೆಗೂಡಿ ಬೃಹತ್ ಹೋರಾಟ ರೂಪಿಸುವ ಸಂಬಂಧ ಶೀಘ್ರದಲ್ಲೇ ಸಭೆ ಸೇರಿ ದಿನಾಂಕ ನಿಗದಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.